ಒಡಿಶಾ ವಿದ್ಯುತ್‌ಜಾಲ ಪುನರ್ ಸ್ಥಾಪನೆಗೆ ಸೆಸ್ಕ್ ನೆರವು

ಮೈಸೂರು: ಚಂಡಮಾರುತದಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ಒಡಿಶಾ ರಾಜ್ಯದಲ್ಲಿ ವಿದ್ಯುತ್ ಜಾಲ ಪುನರ್ ಸ್ಥಾಪನೆಗೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಕೈ ಜೋಡಿಸಿದೆ.

ಸೆಸ್ಕ್ ವ್ಯಾಪ್ತಿಯ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 204 ಜನರ ತಂಡ ಈಗಾಗಲೇ ಒಡಿಶಾ ರಾಜ್ಯಕ್ಕೆ ತೆರಳಿ ಚಂಡಮಾರುತದಿಂದ ಹಾನಿಯಾಗಿರುವ ವಿದ್ಯುತ್ ಜಾಲವನ್ನು ದುರಸ್ತಿಪಡಿಸುವ ಕಾರ್ಯದಲ್ಲಿ ತೊಡಗಿದೆ.

ಚಂಡ ಮಾರುತಕ್ಕೆ ತುತ್ತಾದ ರಾಜ್ಯದಲ್ಲಿ ಅಪಾರ ಆಸ್ತಿ ನಷ್ಟವಾಗಿದ್ದು, ಇದಕ್ಕೆ ಕೈ ಜೋಡಿಸಿದ್ದ ನಗರದ ಸಿಎಫ್‌ಟಿಆರ್‌ಐ ಆಹಾರ ಪೊಟ್ಟಣವನ್ನು ಪೂರೈಸಿತ್ತು. ಈಗ ಸೆಸ್ಕ್ ಸಹಾಯ ಹಸ್ತಚಾಚಿದ್ದು, ತನ್ನ ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿದೆ. ತಲಾ ಹತ್ತು ನಿರ್ವಹಣಾ ಸಿಬ್ಬಂದಿಯನ್ನು ಒಂದು ತಂಡವನ್ನಾಗಿ ಮಾಡಿ ಸಹಾಯಕ ಅಥವಾ ಕಿರಿಯ ಇಂಜಿನಿಯರ್‌ಗಳನ್ನು ಮೇಲುಸ್ತುವಾರಿಗಾಗಿ ನೇಮಿಸಲಾಗಿದೆ.

ಸೆಸ್ಕ್ ಜೊತೆಗೆ ಇತರೆ ಬೆಸ್ಕಾಂ, ಮೆಸ್ಕಾಂ, ಹೆಸ್ಕಾಂ, ಜೆಸ್ಕಾಂನಿಂದಲೂ ನಿರ್ವಹಣಾ ಸಿಬ್ಬಂದಿಯನ್ನು ಸಹ 15 ದಿನಗಳವರೆಗೆ ನಿಯೋಜಿಸಿದ್ದು, ಅವರನ್ನು ಭಾರತೀಯ ರೈಲ್ವೆ ಪ್ರಾಧಿಕಾರದ ಸಹಾಯದಿಂದ ಒಡಿಶಾದ ರಾಜಧಾನಿ ಭುವನೇಶ್ವರಕ್ಕೆ ಕಳುಹಿಸಿಕೊಡಲಾಯಿತು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಎನ್.ಗೋಪಾಲಕೃಷ್ಣ, ಕವಿಪ್ರನಿನಿಯ ನಿರ್ದೇಶಕ(ಪ್ರಸರಣ) ಶಿವಕುಮಾರ್, ಸೆಸ್ಕ್ ತಾಂತ್ರಿಕ ನಿರ್ದೇಶಕ ಅಫ್ತಾಬ್ ಅಹಮದ್, ಮುಖ್ಯ ಆರ್ಥಿಕ ಅಧಿಕಾರಿ ಎ.ಶಿವಣ್ಣ, ಪ್ರಧಾನ ವ್ಯವಸ್ಥಾಪಕರಾದ ಜಿ.ಎಲ್.ಚಂದ್ರಶೇಖರ್ ಇತರೆ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *