ಮೈಸೂರು: ಮಾನವಹಕ್ಕು ರಕ್ಷಣೆಗಾಗಿ ದೇಶದಲ್ಲಿ ಅನೇಕ ಕಾನೂನುಗಳು ರೂಪುಗೊಂಡಿರುವುದರಿಂದ ಎಲ್ಲರಿಗೂ ಸಮಾನಹಕ್ಕು ದೊರೆಯುವಂತಾಗಿದೆ ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಟಿ.ನಾಗೇಂದ್ರಪ್ರಸಾದ್ ಅಭಿಪ್ರಾಯಪಟ್ಟರು.
ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ‘ರೋಲ್ ಆಫ್ ಜ್ಯುಡಿಷಿಯರಿ ಇನ್ ಪ್ರೊಟೆಕ್ಟಿಂಗ್ ಹ್ಯೂಮನ್ ರೈಟ್ಸ್ ಇನ್ ಇಂಡಿಯಾ ಇಷ್ಯೂ ಅಂಡ್ ಚಾಲೆಂಜಸ್’’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಹಕ್ಕುಗಳ ರಕ್ಷಣೆಗಾಗಿ ಸುಪ್ರಿಂಕೋರ್ಟ್ ಹಲವಾರು ಕಾನೂನುಗಳನ್ನು ರೂಪಿಸಿದ್ದು, ಸಂವಿಧಾನದ 3ನೇ ಭಾಗದಲ್ಲಿ ಮಾನವ ಹಕ್ಕುಗಳ ಬಗ್ಗೆ ಸಂಪೂರ್ಣವಾಗಿ ವಿವರ ಉಲ್ಲೇಖವಾಗಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಮಾನವ ಹಕ್ಕುಗಳ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ವಹಿಸಿ ಇದರ ಪ್ರಯೋಜನ ಎಲ್ಲರಿಗೂ ಸಿಗುವಂತಾಗಬೇಕೆಂದು ಹೋರಾಟ ನಡೆಸಿದ್ದರು ಎಂದರು.
ಮಾನವ ಹಕ್ಕುಗಳು ವೈದಿಕ ಕಾಲದಿಂದಲೂ ನಮ್ಮ ದೇಶದಲ್ಲಿ ಜಾರಿಯಲ್ಲಿತ್ತು. ಆದರೆ ಅದಕ್ಕೊಂದು ಕಾನೂನು ರೂಪು ದೊರೆತು ಎಲ್ಲರಿಗೂ ಹಕ್ಕಾಗಿ ಮಾರ್ಪಟ್ಟಿದೆ. ಆಸ್ತಿ ಮೇಲಿನ ಹಕ್ಕು ಸಹ ಮಾನವ ಹಕ್ಕುಗಳಲ್ಲೊಂದಾಗಿದ್ದು ಇದರ ಬಗ್ಗೆಯೂ ಸಹ ಸೂಕ್ತ ವಾರಸುದಾರರಿಗೆ ಅನುಕೂಲವಾಗುವಂತೆ ಕಾನೂನುಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಮಾನವ ಹಕ್ಕುಗಳ ಬಗ್ಗೆ ಯುವ ಜನತೆಯಿಂದಲೇ ನ್ಯಾಯಾಲಯಗಳಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವುದು ಜನರು ಜಾಗೃತರಾಗುತ್ತಿದ್ದಾರೆ ಎನ್ನುವುದರ ಸಂಕೇತವಾಗಿದೆ. ಶಬರಿ ಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಇಂಡಿಯನ್ ಯೂತ್ ಲಾಯರ್ಸ್ ಅಸೋಸಿಯೇಷನ್ ವತಿಯಿಂದ ದಾಖಲಿಸಿರುವ ಪ್ರಕರಣ ಇದಕ್ಕೊಂದು ಉತ್ತಮ ನಿದರ್ಶನ ಎಂದರು.
ಹೈಕೋರ್ಟ್ ಹಿರಿಯ ವಕೀಲ ಗುರುದಾಸ್ ಎಸ್.ಕನ್ನೂರ್ ಅವರು ಉಪನ್ಯಾಸ ನೀಡಿದರು. ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣನವರ್, ಪ್ರಾಂಶುಪಾಲ ಪಿ.ದೀಪು, ಕಾರ್ಯಕ್ರಮದ ಸಂಚಾಲಕರಾದ ಎ.ಆರ್. ಪ್ರಕೃತಿ ಇತರರು ಹಾಜರಿದ್ದರು.