24ರಿಂದ ಮಾವು, ಹಲಸು ಮೇಳ

ಮೈಸೂರು: ರಾಸಾಯನಿಕ ಮುಕ್ತ ‘ಮಾವು, ಹಲಸು ಮೇಳ’ವನ್ನು ಮೇ 24ರಿಂದ 28ರ ವರೆಗೆ ನಗರದ ಕರ್ಜನ್ ಪಾರ್ಕ್ ಆವರಣದಲ್ಲಿ ಆಯೋಜಿಸಲಾಗಿದೆ.

ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿರುವ ಈ ಮೇಳದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ದೊಡ್ಡಬಳ್ಳಾಪುರದಿಂದ ರೈತರು ಆಗಮಿಸಲಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂಜಯ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾವು, ಹಲಸು ಬೆಳೆದಿರುವ ರೈತರಿಗೆ ಮಧ್ಯವರ್ತಿಗಳ ಕಾಟವಿಲ್ಲದೇ ಉತ್ತಮ ಬೆಲೆ ಸಿಗುವಂತೆ ಮಾಡುವ ಜೊತೆಗೆ ಸಾರ್ವಜನಿಕರಿಗೆ ಕಾರ್ಬೈಡ್ ಮುಕ್ತ ಹಣ್ಣನ್ನು ನೇರವಾಗಿ ರೈತರಿಂದ ಕೊಳ್ಳಲು ಅವಕಾಶ ಮಾಡಿಕೊಡುವುದು ಮೇಳದ ಉದ್ದೇಶವಾಗಿದೆ. ಕಳೆದ ಬಾರಿ 65 ಟನ್‌ನಷ್ಟು ಮಾವು ಮಾರಾಟ ನಡೆದಿದ್ದು, ಈ ಬಾರಿ 100 ಟನ್‌ನಷ್ಟು ಮಾರಾಟ ಮಾಡುವ ಗುರಿ ಹೊಂದಿರುವುದಾಗಿ ಎಂದು ತಿಳಿಸಿದರು.

ಐದು ದಿನಗಳ ಮೇಳದಲ್ಲಿ ರತ್ನಗಿರಿ, ಅಲ್ಫಾನ್ಸೋ, ಬಾದಾಮಿ, ರಸಪುರಿ, ಸೆಂಧೂರ, ಮಲಗೋವಾ, ತೋತಾಪುರಿ, ಮಲ್ಲಿಕಾ, ದಶೇರಿ ಸೇರಿದಂತೆ ವಿವಿಧ ತಳಿಯ 40 ಹಾಗೂ ಹಲಸಿನ ಎರಡು ಮಳಿಗೆಗಳು ಇರಲಿವೆ. ಮೇ 24 ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು ಮೇಳಕ್ಕೆ ಚಾಲನೆ ನೀಡಲಿದ್ದಾರೆ. ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಲಿದ್ದಾರೆ ಎಂದರು.

ಗ್ರಾಹಕಸ್ನೇಹಿ ಮೇಳ: ಮಾವು ಪ್ರಿಯರಿಗೆ ಆರೋಗ್ಯದ ಹಿತದೃಷ್ಠಿಯಿಂದ ಕ್ಯಾಲ್ಸಿಯಂ ಕಾರ್ಬೈಡ್ ಮುಕ್ತವಾಗಿರುವ ನೈಸರ್ಗಿಕ ಹಣ್ಣು ನೀಡುವ ಜೊತೆಗೆ ವಿವಿಧ ಹಣ್ಣಿನ ತಳಿಗಳನ್ನು ಮೇಳದಲ್ಲಿ ಪರಿಚಯ ಮಾಡಿಕೊಡಲಾಗುವುದು. ಮಾರುಕಟ್ಟೆಯ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಯಾವುದೇ ರಾಸಾಯನಿಕ ಬಳಸದೆ ನೈಸರ್ಗಿಕವಾಗಿ ಹಣ್ಣು ಮಾಡುವುದನ್ನು ಖಚಿತಪಡಿಸಿಕೊಳ್ಳಲು ಮೇಳದಲ್ಲಿ ಬರುವ ಹಣ್ಣುಗಳನ್ನು ಪರೀಕ್ಷೆಗೆ ಒಳಪಡಿಸಲಾಗುವುದು. ಆಹಾರ ಸುರಕ್ಷತಾ ಅಧಿಕಾರಿಗಳೂ ಅನಿರೀಕ್ಷಿತ ಭೇಟಿ ನೀಡಿ ಹಣ್ಣನ್ನು ಪರೀಕ್ಷೆ ಮಾಡಲಿದ್ದಾರೆ. ಮಾವನ್ನು ನೈಸರ್ಗಿಕವಾಗಿ ಹೇಗೆ ಹಣ್ಣು ಮಾಡಬೇಕು ಎನ್ನುವುದನ್ನು ಮೇಳದಲ್ಲಿ ರೈತರಿಗೆ ತಿಳಿಸಿಕೊಡಲಾಗುವುದು. ಅಲ್ಲದೇ ರಾಸಾಯನಿಕ ಬಳಸಿದ ಹಣ್ಣು ಹೇಗಿರುತ್ತದೆ ಎನ್ನುವುದನ್ನು ಗ್ರಾಹಕರಿಗೆ ತಿಳಿಸಿಕೊಡಲಾಗುವುದು ಎಂದು ವಿವರಿಸಿದರು.

ಮೇಳದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿರುವುದರಿಂದ ಗ್ರಾಹಕರು ಮನೆಯಿಂದಲೇ ಬಟ್ಟೆ ಬ್ಯಾಗ್ ತರುವಂತೆ ಮನವಿ ಮಾಡಲಾಗುವುದು. ರೈತರೂ ರಟ್ಟಿನ ಬಾಕ್ಸ್, ಬಟ್ಟೆ ಬ್ಯಾಗ್‌ಅನ್ನು ಒದಗಿಸುವಂತೆ ಕೋರಲಾಗಿದೆ ಎಂದರು.

Leave a Reply

Your email address will not be published. Required fields are marked *