ಹೋಳಿ ರಂಗಲ್ಲಿ ಮಿಂದೆದ್ದ ವಿದ್ಯಾರ್ಥಿಗಳು

ಮೈಸೂರು: ಶಾಲಾ, ಕಾಲೇಜು ವಿದ್ಯಾರ್ಥಿಗಳು ರಂಗಿನಲ್ಲಿ ಮಿಂದೇಳುವ ಮೂಲಕ ನಗರದಲ್ಲಿ ಹೋಳಿ ಹುಣ್ಣಿಮೆಯನ್ನು ಮತ್ತಷ್ಟು ರಂಗಾಗಿಸಿದರು.

ಹೋಳಿ ಸಡಗರದಲ್ಲಿ ಕಾಲೇಜು ಆವರಣಗಳು ರಂಗೇರಿದ್ದವು. ಸಾಂಸ್ಕೃತಿಕ ನಗರಿಯ ಬಹುತೇಕ ಭಾಗದಲ್ಲಿ ರಂಗುರಂಗಿನ ಹೋಳಿ ಹಬ್ಬವನ್ನು ಜನರು ಸಂಭ್ರಮದಿಂದ ಆಚರಿಸಿ ಖುಷಿಪಟ್ಟರು.

ವಿವಿಧ ಬಗೆಯ ಬಣ್ಣಗಳನ್ನು ಎರಚಿ ಪರಸ್ಪರ ಹೋಳಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಂತಸಪಟ್ಟರು. ವಯಸ್ಸಿನ ಅಂತರವಿಲ್ಲದೆ ಈ ಸಂಭ್ರಮದಲ್ಲಿ ಮುಳುಗಿದ್ದು ವಿಶೇಷವಾಗಿತ್ತು. ಚಿಣ್ಣರು, ಶಾಲಾ ಬಾಲಕ-ಬಾಲಕಿಯರು ರಂಗಿನಾಟದಲ್ಲಿ ತಲ್ಲೀನರಾಗಿದ್ದರು.

ಉತ್ತರಭಾರತ, ಉತ್ತರ ಕರ್ನಾಟಕದವರು ಹೆಚ್ಚಾಗಿರುವ ಪ್ರತಿಷ್ಠಿತ ಬಡಾವಣೆಗಳಲ್ಲಿನ ಜನರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮ ಪಟ್ಟರು. ಪರಿಚಿತರು ಮತ್ತು ಸ್ನೇಹಿತರು, ಸಂಬಂಧಿಕರ ನಡುವೆ ಮಾತ್ರ ಈ ಬಣ್ಣದಾಟಕ್ಕೆ ಸೀಮಿತವಾಗಿತ್ತು. ಉಳಿದ ಪ್ರದೇಶದಲ್ಲಿ ಹೋಳಿ ಸಂಭ್ರಮ ಕಂಡು ಬರಲಿಲ್ಲ. ಹೀಗಾಗಿ ಎಂದಿನ ಜೀವನ ಶೈಲಿಯಲ್ಲಿಯೇ ಬಹುತೇಕರು ದಿನ ಕಳೆದರು. ಇನ್ನು ಕೆಲವರಿಗೆ ಹೋಳಿ ಹಬ್ಬದ ಕುರಿತು ಮಾಹಿತಿಯೇ ಇರಲಿಲ್ಲ.

ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ರಂಗಿನಾಟ ಜೋರಾಗಿತ್ತು. ಯುವಕ-ಯುವತಿಯರು ಬೈಕ್‌ಗಳಲ್ಲಿ ಸುತ್ತುತ್ತಾ ಓಕಳಿಯಾಡಿದರು. ಹೆಂಗಳೆಯರು ಮನೆ ಆಜುಬಾಜು ಹಾಗೂ ತಮ್ಮ ಬಡಾವಣೆಗಳಲ್ಲೇ ಬಣ್ಣ ಹಚ್ಚಿ ಸಂಭ್ರಮಿಸಿದರು. ಇನ್ನು ಚಿಣ್ಣರು ಬಣ್ಣ ಎರಚಲು ಪಿಚಕಾರಿ, ಬಲೂನ್ ಬಳಸಿದರು.

ಕೆಲವರು ಬಕೆಟ್‌ಗಳಲ್ಲಿ ಬಣ್ಣದ ನೀರು ತಯಾರಿಸಿಟ್ಟುಕೊಂಡು ಹೋಕುಳಿಯಾಟವಾಡಿದ ದೃಶ್ಯವೂ ಕಂಡು ಬಂದಿತು. ಯುವಕರು ಕೋಳಿ ಮೊಟ್ಟೆಗಳನ್ನು ತಮ್ಮ ಸ್ನೇಹಿತರ ತಲೆಗಳಿಗೆ ಒಡೆದು ಆನಂದಿಸಿದರು. ಬಿಸಿಲ ಬೇಗೆ ಈ ಹಬ್ಬದ ಉತ್ಸಾಹಕ್ಕೆ ಮತ್ತಷ್ಟು ರಂಗು ತಂದಿತ್ತು.

ಕ್ಯಾಂಪಸ್‌ಗಳು ವರ್ಣಮಯ: ಕಾಲೇಜು ಕ್ಯಾಂಪಸ್‌ಗಳಲ್ಲಿ ಹೋಳಿ ರಂಗು ಪ್ರಜ್ವಲಿಸಿತು. ಕೆಲ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಬಣ್ಣದಲ್ಲಿ ಮಿಂದೇಳುವ ಮೂಲಕ ಸಂತಸಪಟ್ಟರು. ಎಂದಿನಂತೆ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳು ಗುಂಪುಗೂಡಿ ಹೋಳಿ ಆಡಲು ಶುರು ಮಾಡಿದರು. ರಂಗು ರಂಗಿನ ಬಣ್ಣವಿದ್ದ ಕವರ್‌ಗಳನ್ನು ಜೇಬು, ಬ್ಯಾಗ್‌ನಲ್ಲಿ ಇಟ್ಟುಕೊಂಡು ಎರಡೂ ಕೈಗಳಲ್ಲಿ ಬಣ್ಣ ಹಿಡಿದುಕೊಂಡು ತಮ್ಮ ಸಹಪಾಠಿಗಳ ಬೆನ್ನತ್ತಿ ಬಣ್ಣ ಹಚ್ಚಿ ಖುಷಿಪಟ್ಟರು.

ಕ್ಯಾಂಪಸ್‌ನಲ್ಲಿ ಓಡಾಡುತ್ತಿದ್ದ ಪರಿಚಯವೇ ಇಲ್ಲದವರು, ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನೂ ಬಿಡದೆ ನಗುತ್ತಲೇ ಬಣ್ಣ ಹಚ್ಚಿದರು. ನಂತರ ವಿಭಿನ್ನ ಶೈಲಿಯಲ್ಲಿ ‘ಸೆಲ್ಫಿ’ ತೆಗೆದುಕೊಂಡು ಖುಷಿಪಟ್ಟರು.

ಹೋಳಿ ಹಿನ್ನೆಲೆಯಲ್ಲಿ ಮಾನಸ ಗಂಗೋತ್ರಿ ಮತ್ತು ಮಹಾರಾಣಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ವರ್ಣಮಯವಾಗಿತ್ತು. ಶತಮಾನೋತ್ಸವ ಗಡಿಯಾರ ವೃತ್ತ ಸೇರಿದಂತೆ ವಿವಿಧ ವಿಭಾಗದ ಅಧ್ಯಯನ ಕೇಂದ್ರಗಳ ಮುಂದೆ ವಿದ್ಯಾರ್ಥಿಗಳು ಬಣ್ಣ ಎರಚಾಡಿದರು. ಸ್ನಾತಕೋತ್ತರ ವಿದ್ಯಾರ್ಥಿನಿಲಯ, ವಿಲೇಜ್ ಹಾಸ್ಟೆಲ್, ಅಂಬೇಡ್ಕರ್ ಹಾಗೂ ಗೌತಮ ವಿದ್ಯಾರ್ಥಿನಿಲಯಗಳ ಆವರಣದಲ್ಲಿ ವಿದ್ಯಾರ್ಥಿಗಳು ಪರಸ್ಪರ ಬಣ್ಣ ಎರಚಾಡಿದರು.

ಜೆಎಸ್‌ಎಸ್ ಕಾಲೇಜು, ಕಾವೇರಿ ಕಾಲೇಜು, ಮಹಾರಾಣಿ ಪದವಿಪೂರ್ವ ಕಾಲೇಜು, ಮಹಾರಾಜ ಕಾಲೇಜು, ಮಹಾರಾಜ ಪದವಿ ಪೂರ್ವ ಕಾಲೇಜು, ಯುವರಾಜ ಕಾಲೇಜು, ಮಲ್ಲಮ್ಮ ಮರಿಮಲ್ಲಪ್ಪ, ಸದ್ವಿದ್ಯಾ, ಎಸ್‌ಡಿಎಂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬಣ್ಣದ ಮುದ್ದೆಯಂತೆ ಕಂಡು ಬಂದರು.

ಹೋಳಿ ಹಬ್ಬದ ವೇಳೆ ಅಹಿತಕರ ಘಟನೆಗಳನ್ನು ತಡೆಯಲು ಕೆಲ ಆಯ್ದ ಪ್ರದೇಶದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅದರಲ್ಲೂ ಮಹಾರಾಣಿ ಮತ್ತು ಯುವರಾಜ ಕಾಲೇಜು ಸೇರಿದಂತೆ ಕೆಲ ಸರ್ಕಾರಿ ಕಾಲೇಜಿನಲ್ಲಿ ಪೊಲೀಸರು ಹೆಚ್ಚಾಗಿ ಗಸ್ತು ತಿರುಗಿದರು. ಕೆಲ ಹಾಸ್ಟೆಲ್‌ಗಳ ಮುಂದೆಯೂ ಪೊಲೀಸ್ ಭದ್ರತೆ ಕಂಡುಬಂತು.