ಈ ಸುರಂಗ ಕಲೆಯ ತರಂಗ

ಮೈಸೂರು: ಬೇಲೂರು, ಹಳೆಬೀಡು, ಐಹೊಳೆ, ಬಾದಾಮಿ ಇತರೆ ಐತಿಹಾಸಿಕ ತಾಣಗಳ ಸಮಾಗಮ. ಇದರೊಂದಿಗೆ ಜಾನಪದ ನೃತ್ಯ, ಪೌರಾಣಿಕ ಪಾತ್ರಗಳ ದರ್ಶನ..!

ಮೈಸೂರು ರೈಲು ನಿಲ್ದಾಣದ ಸುರಂಗಮಾರ್ಗದಲ್ಲಿ ಸಾಗಿದಾಗ ಈ ರೀತಿಯಾಗಿ ಇತಿಹಾಸದ ಪರಿಚಯವಾಗಲಿದೆ.
ನಾಡಿನ ಕಲೆ ಮತ್ತು ಸ್ಮಾರಕಗಳ ಕಲಾ ಶ್ರೀಮಂತಿಕೆಯನ್ನು ವರ್ಣಚಿತ್ರಗಳ ಮೂಲಕ ಸುರಂಗಮಾರ್ಗದ ಗೋಡೆ ಮೇಲೆ ಚಿತ್ರಿಸಲಾಗಿದೆ. ಹೀಗಾಗಿ, ಇದು ವರ್ಣಚಿತ್ರಗಳೊಂದಿಗೆ ರೂಪಾಂತರಗೊಂಡಿದೆ. ದಸರಾ ಉತ್ಸವದ ಸಮಯದಲ್ಲಿ ಪ್ರವಾಸಿಗರ ಗಮನ ಸೆಳೆಯಲು ಈ ಪ್ರಯತ್ನ ಮಾಡಲಾಗಿದೆ.

ಪ್ಲಾಟ್ ಫಾರಂ ನಂಬರ್ 1ರಿಂದ 6ಕ್ಕೆ ಸಂಪರ್ಕ ಕಲ್ಪಿಸುವ ರೈಲು ನಿಲ್ದಾಣದ ಸುರಂಗ ಮಾರ್ಗದ ಪಾರ್ಶ್ವ ಗೋಡೆಗಳಲ್ಲಿ ಚಿತ್ರಿಸಿರುವ ಈ ವರ್ಣಚಿತ್ರಗಳು ಪ್ರವಾಸಿಗರು ಹಾಗೂ ಪ್ರಯಾಣಿಕರನ್ನು ಮೂಕ ವಿಸ್ಮಿತರನ್ನಾಗಿಸಿದೆ. ನಾಡಿನ ಜನರ ಕಲೆ, ವಾಸ್ತುಶಿಲ್ಪ, ಸಂಸ್ಕೃತಿ ಮತ್ತು ಸಂಪ್ರದಾಯದ ಸ್ಮಾರಕ ಕಾರ್ಯಗಳನ್ನು ಬಿಂಬಿಸುವ ಈ ರೋಮಾಂಚಕ ಕಲಾಕೃತಿಗಳು ಸುರಂಗಮಾರ್ಗಕ್ಕೆ ಶೋಭೆ ತಂದಿವೆ.

ಹೊಯ್ಸಳ ಮತ್ತು ಚಾಲುಕ್ಯ ಕಾಲದ ಬೇಲೂರು, ಹಳೆಬೀಡು, ಐಹೊಳೆ, ಬಾದಾಮಿ ಇತ್ಯಾದಿ ಮೇರುಕೃತಿಗಳು ಈ ಗೋಡೆಗಳ ಮೇಲೆ ಜೀವ ತಳೆದಿವೆ. ಬೆಂಗಳೂರಿನ ಪ್ರಸಿದ್ಧ ಕರಗ ಉತ್ಸವ, ವೀರಗಾಸೆ ಕುಣಿತ, ಡೊಳ್ಳು ಕುಣಿತ, ಯಕ್ಷಗಾನ, ಭರತನಾಟ್ಯ ಮತ್ತು ಇತರ ಜನಪ್ರಿಯ ಜಾನಪದ ನೃತ್ಯ ಮುಂತಾದ ಕಿರುನೋಟಗಳನ್ನೂ ಕೂಡ ಚಿತ್ರಿಸಲಾಗಿದೆ. ಪೌರಾಣಿಕ ಪಾತ್ರಗಳಾದ ಮಹಿಷಾಸುರ ಮತ್ತು ನಂದಿಗಳಂತಹ ಚಿತ್ರಗಳನ್ನೂ ಸಹ ಗೋಡೆಗಳ ಮೇಲೆ ಕಾಣಬಹುದು.

ಈ ವರ್ಣಚಿತ್ರಗಳು ಮೆಚ್ಚುಗೆಯನ್ನು ಪಡೆದಿವೆ. ಪ್ರಯಾಣಿಕರು, ಪ್ರವಾಸಿಗರು ಚಿತ್ರಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಮತ್ತು ಸೆಲ್ಫಿಯನ್ನು ಕ್ಲಿಕ್ಕಿಸಿಕೊಳ್ಳುವ ದೃಶ್ಯ ಇಲ್ಲಿ ಸಾಮಾನ್ಯ. ಇದು ಕಲಾ ನೈಪುಣ್ಯದ ಒಂದು ದೃಷ್ಟಾಂತವಾಗಿದೆ.

ಮೈಸೂರು ವಿಭಾಗದ ಶಿವಮೊಗ್ಗ, ದಾವಣಗೆರೆ ಮತ್ತು ಹಾಸನ ನಿಲ್ದಾಣಗಳು, ಪ್ರಸಿದ್ಧ ಯಾತ್ರಾಸ್ಥಳಗಳಿಗೆ ರೈಲು ಸಂಪರ್ಕ ಕಲ್ಪಿಸುವ ನಿಲ್ದಾಣಗಳಾದ ನಂಜನಗೂಡು ಹಾಗೂ ಸುಬ್ರಹ್ಮಣ್ಯದಲ್ಲಿ ಕೂಡ ಈ ರೀತಿಯ ವರ್ಣಚಿತ್ರಗಳನ್ನು ಬಿಡಿಸಲು ಹಂತ ಹಂತವಾಗಿ ಕ್ರಮ ವಹಿಸಲಾಗುವುದಾಗಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಪರ್ಣಾ ಗರ್ಗ್ ತಿಳಿಸಿದ್ದಾರೆ.00