ಸಿದ್ದಲಿಂಗಪುರದಲ್ಲಿ ಷಷ್ಠಿ ಜಾತ್ರೆ ಸಂಭ್ರಮ

ಮೈಸೂರು: ನಗರದ ಹೊರವಲಯದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಸಿದ್ದಲಿಂಗಪುರದ ಪುರಾತನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಶ್ರದ್ಧಾ, ಭಕ್ತಿಯೊಂದಿಗೆ ವಿಜೃಂಭಣೆಯಿಂದ ಷಷ್ಠಿ ಜಾತ್ರೆ ಜರುಗಿತು.

ದೇವರ ದರ್ಶನ ಪಡೆಯಲು ಬುಧವಾರ ಮಧ್ಯರಾತ್ರಿಯಿಂದಲೇ ಭಕ್ತರ ದಂಡು ದೇವಸ್ಥಾನದ ಕಡೆಗೆ ಹರಿದು ಬಂದಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿ ದೇವರ ದರ್ಶನ ಪಡೆದರು. ಮಧ್ಯರಾತ್ರಿ 1 ಗಂಟೆಗೆ ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂತು. ಮಧ್ಯರಾತ್ರಿಯಿಂದಲೇ ರುದ್ರಾಭಿಷೇಕ, ಸಹಸ್ರನಾಮಾರ್ಚನೆ, ಅಷ್ಟಾವಧಾನ ಪೂಜೆ ನೆರವೇರಿಸಲಾಯಿತು. ಪ್ರಾತಃಕಾಲ 3ರಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಬೆಳಗ್ಗೆ ದೇವಸ್ಥಾನದ ಹೊರಭಾಗದಲ್ಲಿ ರಥವನ್ನು ಎಳೆಯಲಾಯಿತು.

ಸರ್ಪದೋಷ ಹೊಂದಿರುವವರು ಹುತ್ತಕ್ಕೆ ಹಾಲೆರೆದು ಬೆಳ್ಳಿ ನಾಗರವನ್ನು ಅರ್ಪಿಸಿ ಹರಕೆ ತೀರಿಸಿದರು. ಸಂತಾನಭಾಗ್ಯಕ್ಕಾಗಿ ದಂಪತಿ, ವಿವಾಹ ಮಹೋತ್ಸವ ನೆರವೇರಲು ಹರಕೆಹೊತ್ತ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಅಲ್ಲದೆ, ದೇವಸ್ಥಾನದ ಸುತ್ತಮುತ್ತ ಇರುವ ಹುತ್ತಕ್ಕೆ ಹಾಲನ್ನು ಎರೆದು, ಹುತ್ತಕ್ಕೆ ಬೆಳ್ಳಿ ನಾಗರವನ್ನು ಹಾಕಿ ಭಕ್ತರು ಭಕ್ತಿ ಮೆರೆದರು.

ಮೂರು ಶತಮಾನಗಳ ಹಿಂದೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದ್ದ ಬೆಳ್ಳಿಯ ನಾಗಾಭರಣಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಅಲಂಕಾರ ಮಾಡಲಾಯಿತು. ವರ್ಷಕ್ಕೊಮ್ಮೆ ಮಾತ್ರ ಷಷ್ಠಿ ಹಬ್ಬದಂದು ದೇವರ ಮೂರ್ತಿಗೆ ಬೆಳ್ಳಿಯ ನಾಗಾಭರಣ ತೊಡಿಸಲಾಗುತ್ತದೆ. ದೇವಸ್ಥಾನದೊಂದಿಗೆ ಮೈಸೂರು ರಾಜ ಮನೆತನದವರು ಅವಿನಾಭಾವ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಮೊದಲ ಪೂಜೆಯನ್ನು ಮೈಸೂರು ಅರಸರ ಹೆಸರಿನಲ್ಲೇ ನೆರವೇರಿಸಲಾಯಿತು.

ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ಶಿವನ ಪುತ್ರ ಸುಬ್ರಹ್ಮಣ್ಯ ಅವತಾರವೆತ್ತಿದ ದಿನ ಎನ್ನುವ ಪ್ರತೀತಿ ಇದೆ. ವರ್ಷಕ್ಕೊಮ್ಮೆ ಬರುವ ಈ ಷಷ್ಠಿ ಆಚರಣೆ ಅಂಗವಾಗಿ ದೇವಸ್ಥಾನವನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು. ಹೂವುಗಳು, ವಿದ್ಯುತ್ ದೀಪಗಳಿಂದ ಅಲಂಕಾರ, ಭಕ್ತರು ಸರದಿ ಸಾಲಿನಲ್ಲಿ ಬಂದು ದರ್ಶನ ಪಡೆಯಲು ರಸ್ತೆ ಪಕ್ಕದಲ್ಲಿ ಬ್ಯಾರಿಕೇಡ್ ನಿರ್ಮಿಸಲಾಗಿತ್ತು.

ಷಷ್ಠಿ ಜಾತ್ರೆ ಸಂಭ್ರಮ: ಷಷ್ಠಿ ಹಬ್ಬದ ಪ್ರಯುಕ್ತ ಸಿದ್ದಲಿಂಗಪುರದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿತ್ತು. ಮಕ್ಕಳ ಆಟಿಕೆಗಳು, ಕಡ್ಲೆಪುರಿ, ಕಜ್ಜಾಯ, ಬೆಲ್ಲ, ಬಟ್ಟೆ, ಕಬ್ಬಿನ ಜಲ್ಲೆ, ಜ್ಯೂಸ್ ಮಾರಾಟ ಭರ್ಜರಿಯಾಗಿ ನಡೆಯಿತು. ಬಹುತೇಕ ಭಕ್ತರು ವಾಹನಗಳಲ್ಲಿ ಆಗಮಿಸಿದ ಹಿನ್ನೆಲೆಯಲ್ಲಿ ಸಿದ್ದಲಿಂಗಪುರ ಸಮೀಪದ ನಾಗನಹಳ್ಳಿ, ಮೇಳಾಪುರ ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಭಕ್ತರ ಸಾಲು ಸಾಲು: ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಭಕ್ತರು ದೇವರ ದರ್ಶನ ಪಡೆಯಲು ಸುಮಾರು ಅರ್ಧ ಕಿಮೀವರೆಗೆ ಸರತಿ ಸಾಲಿನಲ್ಲಿ ನಿಂತಿದ್ದರು. ವಿಐಪಿ ಮತ್ತು ವಿವಿಐಪಿಗಳಿಗೆ ವಿಶೇಷ ದರ್ಶನದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಂಚಾರ ಬದಲು: ಜಾತ್ರೆ ಪ್ರಯುಕ್ತ ಮೈಸೂರು-ಬೆಂಗಳೂರು ಮಾರ್ಗದ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು. ಮೈಸೂರಿನಿಂದ ಬೆಂಗಳೂರಿಗೆ ತೆರಳುವ ವಾಹನಗಳಿಗೆ ಬದಲಿ ಮಾರ್ಗ ಕಲ್ಪಿಸಲಾಯಿತು. ದೇವಸ್ಥಾನಕ್ಕೆ ತೆರಳುವ ಭಕ್ತರ ವಾಹನಗಳಿಗೆ ಮಾತ್ರ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.