ಕಟ್ಟಡಗಳ ಸಂರಕ್ಷಣೆಗೆ ಸಾಂಪ್ರದಾಯಿಕ ವಿಧಾನ ಉತ್ತಮ

ಮೈಸೂರು: ಪಾರಂಪರಿಕ ಕಟ್ಟಡಗಳು ಮತ್ತು ಪಾರಂಪರಿಕ ಸಂಪತ್ತಿನ ಸಂರಕ್ಷಣೆಗೆ ಆಧುನಿಕ ವಿಧಾನಗಳಿಗಿಂತ ಸಾಂಪ್ರದಾಯಿಕ ವಿಧಾನವೇ ಉತ್ತಮ ಎಂದು ಲಕ್ನೋದ ಸಾಂಸ್ಕೃತಿಕ ಸಂಪತ್ತು ಸಂರಕ್ಷಣೆ ಸಂಶೋಧನಾ ಪ್ರಯೋಗಾಲಯದ ಮಹಾ ನಿರ್ದೇಶಕ ಪ್ರೊ.ಮ್ಯಾನಜರ್‌ಸಿಂಗ್ ಹೇಳಿದರು.

ಸಿದ್ಧಾರ್ಥನಗರದ ಪ್ರಾದೇಶಿಕ ಪ್ರಾಕೃತಿಕ ಇತಿಹಾಸ ವಸ್ತು ಸಂಗ್ರಹಾಲಯದಲ್ಲಿ, 24ನೇ ಸಂಸ್ಥಾಪನಾ ದಿನಾಚರಣೆ ಮತ್ತು ‘ವಸ್ತು ಸಂಗ್ರಹಾಲಯದಲ್ಲಿ ಸಮಗ್ರ ಕೀಟ ತಡೆ ನಿರ್ವಹಣೆ-ಆಧುನಿಕ ವಿಧಾನಗಳು’ ಕುರಿತು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ವಸ್ತು ಸಂಗ್ರಹಾಲಯಗಳಲ್ಲಿ ಕೀಟ ತಡೆಗೆ ಬಳಕೆ ಮಾಡುವ ಆಧುನಿಕ ವಿಧಾನಗಳು ಕೀಟಗಳಿಗೆ ಮಾತ್ರವಲ್ಲ ಕಟ್ಟಡ, ಮನುಷ್ಯರಿಗೂ ಹಾನಿಕಾರಕ. ವಸ್ತು ಸಂಗ್ರಹಾಲಯದ ವಸ್ತುಗಳ ಸಂರಕ್ಷಣೆಗೆ ಆಧುನಿಕ ವಿಧಾನ ಶಾಶ್ವತ ಪರಿಹಾರವಲ್ಲ. ಇದಕ್ಕೆ ಪೂರ್ವಜರು ನಮಗೆ ನೀಡಿರುವ ಸಾಂಪ್ರದಾಯಿಕ ವಿಧಾನ ಅನುಸರಿಸುವುದು ಸೂಕ್ತ ಎಂದರು.

ವಿಶ್ವ ವಿಖ್ಯಾತ ಎಲ್ಲೋರ ಗುಹೆಗಳಲ್ಲಿ ಶೇ.25 ರಷ್ಟು ಪುರಾತನ ಚಿತ್ರಕಲೆ ನಾಶವಾಗಿವೆ. ಆದರೆ, ಒಂದೂವರೆ ಸಾವಿರ ವರ್ಷ ಕಳೆದರೂ ಅಜಂತಾ ಗುಹೆಗಳಲ್ಲಿನ ಚಿತ್ರಗಳು ಮತ್ತು ವಾಸ್ತುಶಿಲ್ಪ ಇನ್ನೂ ಮಾಸಿಲ್ಲ. ಅಜಂತಾ ಗುಹೆಗಳಲ್ಲಿ ಚಿತ್ರಕಲೆಗೆ ಬಳಕೆ ಮಾಡಿದ ಗೋಡೆಗಳನ್ನು ಗಾಂಜಾ ರಸ ಹಾಗೂ ಸುಣ್ಣದ ಗಾರೆ ಮಿಶ್ರಣ ಮಾಡಿ ನಿರ್ಮಿಸಲಾಗಿದೆ. ಹೀಗಾಗಿ ಈ ಗೋಡೆಗಳನ್ನು ಕೀಟಗಳು ಕೊರೆಯಲು ಇದುವರೆಗೆ ಸಾಧ್ಯವಾಗಿಲ್ಲ. ಅಜಂತಾ ಚಿತ್ರಕಲೆ ರಚಿಸುವ ಸಂದರ್ಭದಲ್ಲಿ ಚೀನಾದಲ್ಲಿ ಗಾಂಜಾವನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಆದರೆ, ಗಾಂಜಾವನ್ನು ಸದ್ಬಳಕೆ ಮಾಡಿಕೊಳ್ಳಲು ಚೀನಾದವರಿಗೆ ತಿಳಿದಿರಲಿಲ್ಲ. ಆ ಜ್ಞಾನವನ್ನು ವಿಶ್ವಕ್ಕೆ ಪರಿಚಯಿಸಿದವರು ಭಾರತೀಯರು ಎಂದು ತಿಳಿಸಿದರು.

ಗಾಂಜಾವನ್ನು ನಾವು ಉತ್ತಮ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಬೇಕಾಗಿದೆ. ಕಟ್ಟಡ ನಿರ್ಮಾಣ ಸಾಮಗ್ರಿಗಳಿಗೆ ಗಾಂಜಾ ರಸ ಮಿಶ್ರಣ ಮಾಡಿದರೆ ಮನೆ ಅಗ್ನಿ ನಿರೋಧಕ, ಕೀಟ ನಿರೋಧಕ, ತೇವಾಂಶ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದುತ್ತದೆ. ಸಿಮೆಂಟ್ ಇಂಗಾಲದ ಅಂಶವನ್ನು ಹೊರಸೂಸಿದರೆ, ಗಾಂಜಾ ಇಂಗಾಲದ ಅಂಶವನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಗಾಂಜಾ ರಸ ಬಳಕೆ ಮಾಡಿ ನಿರ್ಮಿಸಿದ ಕಟ್ಟಡಗಳು ಬೇಸಿಗೆಯಲ್ಲೂ ತಂಪಾಗಿರುತ್ತವೆ ಎಂದರು.

ಮಹಾರಾಷ್ಟ್ರದ ಪುಣೆಯಲ್ಲಿ ಎರಡು ಸಾವಿರ ವರ್ಷದಷ್ಟು ಹಳೆಯದಾದ ಬೌದ್ಧ ಗುಹೆಗಳು ಇವೆ. ಗುಹೆ ನಿರ್ಮಾಣಕ್ಕೆ ಅಲ್ಲಿನ ಜನರು ಕ್ಯಾರಿಯ ಬೋರಿಕ್ ಸಸ್ಯ ಬಳಕೆ ಮಾಡಿದರು. ಈ ಸಸ್ಯ ಂಗಲ್ ನಿರೋಧಕ ಶಕ್ತಿಯನ್ನು ಹೊಂದಿವೆ ಎಂದರು.

Leave a Reply

Your email address will not be published. Required fields are marked *