ನಮ್ಮೂರ ಹಬ್ಬಕ್ಕೆ ಆಹ್ವಾನ ಬೇಕೆ?

ಕಾಂಗ್ರೆಸ್ ಶಾಸಕರಿಗೆ ತಿರುಗೇಟು ನೀಡಿದ ಜಿಟಿಡಿ

ಮೈಸೂರು: ಕಳೆದ ಬಾರಿ ನಾನು ಚಾಮುಂಡೇಶ್ವರಿ ಕ್ಷೇತ್ರದ ಶಾಸಕನಾಗಿದ್ದ ಸಂದರ್ಭ ದಸರಾ ಉತ್ಸವಕ್ಕೆ ನನಗೇನು ವಿಶೇಷ ಆಹ್ವಾನವೇನು ದೊರೆಯಲಿಲ್ಲ. ಆದರೂ ನಮ್ಮೂರ ಹಬ್ಬವೆಂದು ಉತ್ಸಾಹದಿಂದ ಭಾಗಿಯಾಗಿದ್ದೆ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ದಸರಾ ಉತ್ಸವಕ್ಕೆ ಗೈರು ಹಾಜರಾಗುತ್ತಿರುವ ಸ್ಥಳೀಯ ಕಾಂಗ್ರೆಸ್ ಜನಪ್ರತಿನಿಧಿಗಳಿಗೆ ತಿರುಗೇಟು ನೀಡಿದ್ದಾರೆ.

ನಗರದ ಜೆಕೆ ಮೈದಾನದಲ್ಲಿ ರೈತ ದಸರಾ ಉಪಸಮಿತಿ ಹಮ್ಮಿಕೊಂಡಿರುವ ರೈತ ದಸರಾ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದ ಅವರು, ಬೇರೆ ಪಕ್ಷಗಳು ಅಧಿಕಾರದಲ್ಲಿದಾಗ ನನಗೆ ದಸರಾ ಕಾರ್ಯಕ್ರಮಕ್ಕೆ ಆಹ್ವಾನ ಪತ್ರಿಕೆ ಬರುತಿತ್ತು ಅಷ್ಟೆ. ಆದರೆ, ವಿಶೇಷ ಆಹ್ವಾನವೇನು ಇರುತ್ತಿರಲಿಲ್ಲ. ನಮ್ಮೂರ ಹಬ್ಬವೆಂದು ಉತ್ಸಾಹದಿಂದ ಭಾಗವಹಿಸುತ್ತಿದ್ದೆ ಎಂದರು.

ನಾನು ಪ್ರತಿ ಶಾಸಕರಿಗೆ ಆಹ್ವಾನ ಪತ್ರ ಕಳುಹಿಸಿ ಕರೆ ಮಾಡಿ ಆಹ್ವಾನ ನೀಡಿದ್ದೇನೆ. ಹೀಗಿದ್ದರೂ ಕೆಲವರು ಗೈರು ಹಾಜರಾಗಿದ್ದಾರೆ. ಸ್ಥಳೀಯ ಕಾಂಗ್ರೆಸ್ ಜನಪ್ರತಿನಿಧಿಗಳು ದಸರಾ ಉತ್ಸವಕ್ಕೆ ಏಕೆ ಬರುತ್ತಿಲ್ಲ ಎಂದು ಮಾಧ್ಯಮದವರು ಪ್ರಶ್ನೆ ಮಾಡುತ್ತಿದ್ದಾರೆ. ದಸರಾ ಉತ್ಸವದಲ್ಲಿ ರಾಜಕೀಯ ಮಾಡದೆ ಎಲ್ಲರೂ ಸೇರಿ ಉತ್ಸವವನ್ನು ಆಚರಿಸಬೇಕು. ಈ ಹಿಂದೆ ಕಾಂಗ್ರೆಸ್ ನಾಯಕರ ಜತೆ ನಾನು ವೇದಿಕೆ ಹಂಚಿಕೊಂಡಿಲ್ಲವೇ? ನೀವು ಹಾಗೆ ನಮ್ಮೊಂದಿಗೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಿ ಎಂದು ಕಾಂಗ್ರೆಸ್ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದರು.

ದಸರಾ ಕಾರ್ಯಕ್ರಮಗಳಲ್ಲಿ ಸಚಿವ ಪುಟ್ಟರಂಗಶೆಟ್ಟಿ ಅವರ ಫೋಟೋ ಹಾಕಿಲ್ಲ ಎಂಬುದಕ್ಕೆ ಅವರಿಗೆ ಬೇಸರವಾಗಿದೆ. ೆಟೋ ಹಾಕಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡು ದಸರಾ ಉತ್ಸವದಲ್ಲಿ ಪಾಲ್ಗೊಳ್ಳದೆ ಇರುವುದು ಎಷ್ಟರ ಮಟ್ಟಿಗೆ ಸರಿ? ಸಚಿವ ಸಾ.ರಾ. ಮಹೇಶ್ ೆಟೋ ಏತಕ್ಕೆ ಹಾಕಿದ್ದೀರಾ ಎಂಬ ಪ್ರಶ್ನೆಯನ್ನು ಅವರು ಕೇಳುತ್ತಿದ್ದಾರೆ. ಸಾ.ರಾ. ಮಹೇಶ್ ದಸರಾದ ಹತ್ತಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಫೋಟೋ ಬಳಕೆ ಮಾಡಲಾಗಿದೆ. ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದೆಂದು ಮನವಿ ಮಾಡಿದರು.

ಚುನಾವಣಾ ನೀತಿ ಸಂಹಿತೆ ಜಾರಿಗೊಂಡ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಉಪ ಸಮಿತಿಗೆ ಅಧಿಕಾರೇತರ ಸದಸ್ಯರನ್ನು ನೇಮಕ ಮಾಡಲು ಸಾಧ್ಯವಾಗಲಿಲ್ಲ. ಸಮಿತಿ ರಚನೆಯಾಗದೆ ಇದ್ದರೂ ಸಚಿವರು, ಶಾಸಕರು, ಸಂಸದರಿಗೆ ಎಷ್ಟೆಷ್ಟು ಪಾಸ್ ವಿತರಣೆ ಆಗಬೇಕೋ ಅಷ್ಟು ವಿತರಣೆ ಮಾಡುತ್ತೇವೆ. ಪಾಸ್ ಮತ್ತು ಫೋಟೋ ವಿಚಾರಕ್ಕೆ ಮುನಿಸಿಕೊಂಡರೆ ನಾವೇನು ಮಾಡಲು ಆಗುವುದಿಲ್ಲ ಎಂದರು.
————–