ಆಂಗ್ಲ ಮಾಧ್ಯಮ ಶಾಲೆ ತೆರೆಯುವ ನಿರ್ಧಾರ ಕೈಬಿಡಿ

ಮೈಸೂರು: ಒಂದು ಸಾವಿರ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ತೆರೆಯುವ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿ ಕನ್ನಡ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ ಚಿಂತನಾ ಸಭೆಯಲ್ಲಿ ನಿರ್ಣಯಿಸಲಾಯಿತು.

ಜತೆಗೆ, ಇಂಗ್ಲಿಷ್ ಒಂದು ಭಾಷೆಯಾಗಿ ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಯಿಂದಲೇ ಸಮರ್ಪಕವಾಗಿ ಕಲಿಸಬೇಕು ಎಂಬ ಮತ್ತೊಂದು ನಿರ್ಣಯವನ್ನು ತೆಗೆದುಕೊಳ್ಳಲಾಯಿತು.

ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವ ಕ್ರಮವನ್ನು ವಿರೋಧಿಸಿ ರಾಮಕೃಷ್ಣನಗರದ ನೃಪತುಂಗ ಕನ್ನಡ ಶಾಲೆಯಲ್ಲಿ ಭಾನುವಾರ ಈ ಸಭೆ ನಡೆಯಿತು. ಈ ವಿಷಯವಾಗಿ ಸುದೀರ್ಘವಾಗಿ ಚರ್ಚಿಸಿದ ಬಳಿಕ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಬಾರದು ಹಾಗೂ ಇಂಗ್ಲಿಷ್ ಭಾಷೆಯನ್ನು ವ್ಯವಸ್ಥಿತವಾಗಿ ಕಲಿಸಬೇಕು ಎಂಬ ನಿರ್ಣಯ ತೆಗೆದುಕೊಂಡು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಯಿತು.

ವಿರೋಧ: 1ನೇ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಕಲಿಸಬೇಕೆಂಬ ನಿರ್ಣಯಕ್ಕೆ ನಿವೃತ್ತ ಪ್ರಾಧ್ಯಾಪಕ ಪ್ರೊ.ಪಂಡಿತಾರಾಧ್ಯ ವಿರೋಧಿಸಿದರು. ಈಗಾಗಲೇ 1ನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ನಿಯಮ ಜಾರಿಯಲ್ಲಿದೆ ಎಂದು ಸಮಜಾಯಿಷಿ ನೀಡಲಾಯಿತು. ಇದಕ್ಕೆ ಸಮ್ಮತಿ ಸೂಚಿಸಿದ ಅವರು, ಸಭೆಯಿಂದ ಹೊರ ನಡೆದರು.

ಆಂಗ್ಲ ಮಾಧ್ಯಮ ಶಾಲೆಗಳು ಮಕ್ಕಳ ಚಿಂತನಶೀಲತೆಗೆ ಮತ್ತು ಕನ್ನಡದ ಉಳಿವಿಗೆ ಮಾರಕವಾಗಿದೆ. ಆದ್ದರಿಂದ ಈ ಕ್ರಮವನ್ನು ಹಿಂತೆಗೆದುಕೊಳ್ಳಬೇಕು. ನಾವು ಸಾರಾಸಗಟಾಗಿ ಇಂಗ್ಲಿಷ್ ಬೇಡ ಎನ್ನುತ್ತಿಲ್ಲ. ಇಂಗ್ಲಿಷ್ ಭಾಷೆಗೆ ವಿರೋಧವೂ ಇಲ್ಲ. ಇದನ್ನು ಒಂದು ಭಾಷೆಯಾಗಿ ಕಲಿಸಿ. ಆದರೆ, ಭಾಷಾ ಮಾಧ್ಯಮವಾಗಿ ಬೋಧನೆ ಬೇಡ ಎಂಬುದನ್ನು ಸಭೆಯಲ್ಲಿದ್ದ ಪ್ರಮುಖರು ಪ್ರತಿಪಾದಿಸಿದರು.

ಸಮಿತಿ ಅಧ್ಯಕ್ಷ ಪ.ಮಲ್ಲೇಶ್ ಮಾತನಾಡಿ, ಕಸಾಪ ನಿಯೋಗದೊಂದಿಗೆ ಹೋಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಯಿತು. ಆಗ ಅವರು ಈ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಭರವಸೆ ನೀಡಿದ್ದರು. ಆದರೆ, ಅಧಿವೇಶನದಲ್ಲಿ ಮಂಡಿಸಿದ ರಾಜ್ಯಪಾಲರ ಭಾಷಣದಲ್ಲಿ ಈ ನಿರ್ಧಾರವನ್ನು ಅನುಷ್ಠಾನ ಮಾಡುವುದಾಗಿ ತಿಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೈತ್ರಿ ಸರ್ಕಾರದ ವಿರುದ್ಧ ಕಿಡಿ: ಈಗಿನ ಮೈತ್ರಿ ಸರ್ಕಾರಕ್ಕೆ ತಲೆಯೂ ಇಲ್ಲ. ಮುಖ್ಯಮಂತ್ರಿಗೆ ಭಾಷೆ ಬಗ್ಗೆ ಪರಿಜ್ಞಾನವೂ ಇಲ್ಲ. ಈ ವಿಷಯವಾಗಿ ಭರವಸೆ ಕೊಟ್ಟ ಅವರು ರಾಜ್ಯಪಾಲರ ಭಾಷಣದ ಮೂಲಕ ಅದನ್ನೇ ಪ್ರತಿಪಾದಿಸಿದ್ದಾರೆ. ಸಿಎಂ ಸುಳ್ಳು ಹೇಳಲು ಹೇಗೆ ಸಾಧ್ಯ ಎಂದು ಕಿಡಿಕಾರಿದರು.

ನಾಯಿ ಕೊಡೆಯಂತೆ ಪ್ರತಿ ಊರಿನಲ್ಲಿ ಇಂಗ್ಲಿಷ್ ಶಾಲೆಗಳು ಹುಟ್ಟಿಕೊಳ್ಳುತ್ತಿವೆ. ಪಾಲಕರಿಗೂ ಇಂಗ್ಲಿಷ್ ಮೇಲೆ ವ್ಯಾಮೋಹ ಹೆಚ್ಚಾಗಿದೆ. ಇದನ್ನು ಕಲಿತರೆ ಭವಿಷ್ಯ ಉಜ್ವಲವಾಗಲಿದೆ ಎಂಬ ಭ್ರಮೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ 1 ಸಾವಿರ ಸರ್ಕಾರಿ ಇಂಗ್ಲಿಷ್ ಶಾಲೆ ತೆರೆಯಲು ಅವಕಾಶ ಕೊಟ್ಟರೆ, ಮುಂದಿನ ದಿನಗಳಲ್ಲಿ ಅದು 2 ಸಾವಿರ, 5 ಸಾವಿರವಾಗಲಿದೆ. ಆಗ ಕನ್ನಡ ಶಾಲೆಗಳು ಉಳಿಯುವುದಿಲ್ಲ. ಕನ್ನಡ ಭಾಷೆಯೂ ಇರುವುದಿಲ್ಲ. ಆದ್ದರಿಂದ ಈ ಕ್ರಮದ ವಿರುದ್ಧ ವ್ಯವಸ್ಥಿತವಾದ ಸಂಘಟನೆ ಕಟ್ಟಬೇಕು ಎಂದು ಹೇಳಿದರು.

ಪರಿಹಾರ ಗೊತ್ತಿಲ್ಲ: ಈ ಸಮಸ್ಯೆ ಕುರಿತು ಪರಿಹಾರ ನನಗೆ ಹೊಳೆಯುತ್ತಿಲ್ಲ. ಪಾಲಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಿದರೆ ನಾವು ಏಘ್ಠೆ ಮಾಡಲು ಆಗಲ್ಲ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಹೇಳುವ ಮೂಲಕ ಅಚ್ಚರಿ ಮೂಡಿಸಿದರು.

ಸಮಿತಿಯ ಪದಾಧಿಕಾರಿಗಳಾದ ಸ.ರ.ಸುದರ್ಶನ, ಕೊ.ಸು.ನರಸಿಂಹಮೂರ್ತಿ, ಸಂಸ್ಕೃತಿ ಸುಬ್ರಹ್ಮಣ್ಯ, ಎಂ.ಬಿ.ವಿಶ್ವನಾಥ್, ಸಾಹಿತಿಗಳಾದ ಕೃಷ್ಣಮೂರ್ತಿ ಹನೂರು, ಪ್ರೊ.ಕಾಳೇಗೌಡ ನಾಗವಾರ, ಪ್ರೊ.ಸಿ.ಪಿ.ಸಿದ್ಧಾಶ್ರಮ, ಪ್ರೊ.ಕೆ.ಎಸ್.ಭಗವಾನ್, ಹೊರೆಯಾಲ ದೊರೆಸ್ವಾಮಿ, ಪ್ರೊ.ಎನ್.ಎಂ.ತಳವಾರ ಇನ್ನಿತರರು ಭಾಗವಹಿಸಿದ್ದರು.

ಗೈರಾದವರಿಗೆ ಧಿಕ್ಕಾರ!: ಸಭೆಗೆ ಬರುವುದಾಗಿ ಒಪ್ಪಿಕೊಂಡು ಬಳಿಕ ಗೈರಾದವರಿಗೆ ಸಭೆಯಲ್ಲಿ ಧಿಕ್ಕಾರ ಕೂಗಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕುವೆಂಪು ಭಾಷಾ ಭಾರತೀಯ ಅಧ್ಯಕ್ಷ ಮರುಳಸಿದ್ದಪ್ಪ, ಕಸಾಪದ ರಾಜ್ಯಾಧ್ಯಕ್ಷ ಮನು ಬಳಿಗಾರ್, ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರ ಭೂಪತಿ, ದಾವಣಗೆರೆಯ ಈಶ್ವರಪ್ಪ, ಶಿವಮೊಗ್ಗದ ಡಿ.ಎಸ್.ನಾಗಭೂಷಣ, ಬಿ.ಟಿ.ಲಲಿತಾನಾಯಕ, ಸಿದ್ದಲಿಂಗಪಟ್ಟಣಶೆಟ್ಟಿ, ರಾ.ನ.ಚಂದ್ರಶೇಖರ್ ಸಭೆಗೆ ಬರಲು ಸಮ್ಮತಿಸಿದ್ದರು. ಅದಕ್ಕೆ ಅವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಲಾಗಿದೆ. ಅನಾರೋಗ್ಯದಿಂದ ಬರಲಾಗದಿದ್ದಕ್ಕೆ ಚಿದಾನಂದಮೂರ್ತಿ, ಚನ್ನವೀರ ಕಣವಿ ಪತ್ರ ಕಳುಹಿಸಿಕೊಟ್ಟಿದ್ದಾರೆ. ಉಳಿದವರು ಕೊನೆ ಗಳಿಗೆಯಲ್ಲಿ ಕೈಕೊಟ್ಟಿದ್ದಾರೆ. ಅವರಿಗೆ ಧಿಕ್ಕಾರ ಕೂಗುತ್ತೇನೆ ಎಂದು ಪ.ಮಲ್ಲೇಶ್ ಹೇಳಿದಾಗ ಅಲ್ಲಿದ್ದವರು ಸಹಮತ ವ್ಯಕ್ತಪಡಿಸಿದರು.