ನಾಳೆ ಮತ ಎಣಿಕೆಗೆ ಸಕಲ ಸಿದ್ಧತೆ

ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಕುತೂಹಲದಿಂದ ಎದುರು ನೋಡುತ್ತಿರುವ ಫಲಿತಾಂಶ ಮೇ 23ರಂದು ಹೊರಬೀಳಲಿದೆ. ಮತ ಎಣಿಕೆಗಾಗಿ ಸಕಲ ಸಿದ್ಧತೆಯನ್ನೂ ಜಿಲ್ಲಾಡಳಿತ ಮಾಡಿಕೊಂಡಿದೆ.

ನಗರದ ಪಡುವಾರಹಳ್ಳಿ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮತಎಣಿಕೆ ಅಂದು ಬೆಳಗ್ಗೆ 8ರಿಂದ ಪ್ರಾರಂಭವಾಗಲಿದೆ. ಅದಕ್ಕಾಗಿ ಎಣಿಕೆ ಕೊಠಡಿ ಸೇರಿದಂತೆ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದ್ದು, ಮತ ಎಣಿಕೆಗಾಗಿ 1300 ಸಿಬ್ಬಂದಿ, ಬಂದೋಬಸ್ತ್‌ಗಾಗಿ 1046 ಪೊಲೀಸರನ್ನು ನಿಯೋಜಿಸಲಾಗುತ್ತದೆ.
ಮಧ್ಯಾಹ್ನ 2ರ ಹೊತ್ತಿಗೆ ಸ್ಪಷ್ಟಚಿತ್ರಣ ಗೋಚರವಾಗಲಿದ್ದು, ಅಧಿಕೃತ ಫಲಿತಾಂಶ ಘೋಷಣೆ ಸಂಜೆ 6ಗಂಟೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 18ರಂದು ಶೇ.67.21ರಷ್ಟು ಮತದಾನವಾಗಿದೆ. ಚುನಾವಣಾ ಕಣದಲ್ಲಿರುವ 22 ಅಭ್ಯರ್ಥಿಗಳ ಭವಿಷ್ಯ ಅಂದೇ ಹೊರಬೀಳಲಿದೆ.

ಅಂಚೆ ಮತ ಪತ್ರಗಳ ಎಣಿಕೆ ಕಾರ್ಯವನ್ನು ಮೊದಲು ಪ್ರಾರಂಭಿಸಲಾಗುವುದು. ನಂತರ ವಿದ್ಯುನ್ಮಾನ ಮತಯಂತ್ರ (ಇವಿಎಂ)ಗಳಲ್ಲಿ ದಾಖಲಾಗಿರುವ ಮತಗಳ ಎಣಿಕೆ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತದೆ.
4 ಟೇಬಲ್‌ನಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದ್ದು, ಬುಧವಾರ ರಾತ್ರಿ 8ರವರೆಗೆ ಅಂಚೆ ಮತಗಳಿಗಾಗಿ ಕಾಯಲಾಗುವುದು. ಅಂದಾಜು 6,500 ಅಂಚೆ ಮತಗಳು ಬರುವ ನಿರೀಕ್ಷೆ ಇದೆ. ಬಳಿಕ ಇವಿಎಂಗಳಲ್ಲಿ ಸಂಗ್ರಹವಾಗಿರುವ ಮತಗಳ ಎಣಿಕೆ ಜರುಗಲಿದೆ. ಈ ಹಂತದಲ್ಲಿ ಇವಿಎಂ ಯಂತ್ರಗಳು ಕೈಕೊಡುವುದಿಲ್ಲ. ಒಂದು ವೇಳೆ, ಅವುಗಳು ಕೆಟ್ಟರೆ, ಆ ಮತಗಟ್ಟೆಯ ವಿವಿ ಪ್ಯಾಟ್‌ನಲ್ಲಿರುವ ಚೀಟಿಗಳ ಎಣಿಕೆಯನ್ನು ಕೊನೆಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಚಾಮುಂಡೇಶ್ವರಿ, ಚಾಮರಾಜ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಕಾರ್ಯಕ್ಕೆ ಗರಿಷ್ಠ ಟೇಬಲ್ ವ್ಯವಸ್ಥೆ ಮಾಡಲಾಗಿದ್ದು, ಕ್ರಮವಾಗಿ 18, 15 ಟೇಬಲ್‌ಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಉಳಿದ ವಿಧಾನಸಭಾ ಕ್ಷೇತ್ರಗಳಿಗಾಗಿ 7-8 ಟೇಬಲ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ವೀರಾಜಪೇಟೆ, ಹುಣಸೂರು, ಚಾಮುಂಡೇಶ್ವರಿ, ನರಸಿಂಹರಾಜ ಕ್ಷೇತ್ರಗಳ ಮತಗಳ ಎಣಿಕೆ 19, ಮಡಿಕೇರಿ, ಕೃಷ್ಣರಾಜ, ಚಾಮರಾಜ ಕ್ಷೇತ್ರಗಳ ಮತಗಳ ಎಣಿಕೆ 17, ಪಿರಿಯಾಪಟ್ಟಣ ಕ್ಷೇತ್ರದ ಮತಗಳ ಎಣಿಕೆ 16 ಸುತ್ತಿನಲ್ಲಿ ಮುಕ್ತಾಯವಾಗಲಿದೆ ಎಂದರು.

ಒಂದು ಟೇಬಲ್‌ನಲ್ಲಿ ತಲಾ ಒಬ್ಬ ಮೇಲ್ವಿಚಾರಕ, ಸಹಾಯಕ, ಮೈಕ್ರೋ ಅಬ್ಸರ್ವರ್ ಇರಲಿದ್ದಾರೆ. ಇದಕ್ಕಾಗಿ 131 ಪತ್ರಾಂಕಿತ ಅಧಿಕಾರಿಗಳು ಮೇಲ್ವಿಚಾರಕರಾಗಿ, 131 ಸಿ ವೃಂದದ ನೌಕರರು ಸಹಾಯಕರಾಗಿ, 141 ಅಧಿಕಾರಿಗಳನ್ನು ಮೈಕ್ರೋ ಅಬ್ಸರ್ವರ್ ಆಗಿ ನಿಯೋಜಿಸಲಾಗಿದೆ. ಈ ಎಲ್ಲ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದರು.

Leave a Reply

Your email address will not be published. Required fields are marked *