14ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ವಂಚಕನ ಬಂಧನ

ಮೈಸೂರು: 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಂಚಕನನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.

ರಾಜೀವ ನಗರದ ನಿವಾಸಿ ಸೈಯದ್ ನಿಜಾಂ ಆಲಿ ಬಂಧಿತ. ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಸೈಯದ್ ನಿಜಾಂ ಆಲಿ 2004ರಲ್ಲಿ ರಾಜೀವ್ ನಗರದಲ್ಲಿ ಮೈಸೂರು ಹೋಂ ಡೆವಲಪರ್ಸ್ ಹೆಸರಿನಲ್ಲಿ ಕಂಪೆನಿ ತೆರೆದು ತಾಲೂಕಿನ ಲಿಂಗಾಂಬುದಿ ಗ್ರಾಮದಲ್ಲಿ ರಾಜಾಜಿನಗರ, ಆರ್‌ಆರ್‌ನಗರ ಹೆಸರಿನಲ್ಲಿ ಬಡಾವಣೆ ನಿರ್ಮಿಸಿ ರಿಯಾಯಿತಿ, ಸುಲಭ ಕಂತುಗಳಲ್ಲಿ ನಿವೇಶನ ನೀಡುವುದಾಗಿ ಹೇಳಿ ನೂರಾರು ನಿವೇಶಾನಾಂಕ್ಷಿಗಳಿಂದ ಕೋಟ್ಯಂತರ ರೂ. ಪಡೆದು ಪರಾರಿಯಾಗಿದ್ದ. ಹಣ ಕಳೆದುಕೊಂಡ ನೂರಾರು ಜನರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದ್ದರು.

ಮೈಸೂರು ಹಾಗೂ ಬೆಂಗಳೂರಿನ ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯ, ಮೈಸೂರಿನ 2ನೇ ಜೆಎಂಎಫ್ ನ್ಯಾಯಾಲಯ ಸೇರಿದಂತೆ ಇತರೆ ನ್ಯಾಯಾಲಯಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಪ್ರಕರಣಗಳು ಆರೋಪಿ ವಿರುದ್ಧ ದಾಖಲಾಗಿತ್ತು. ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಈತನ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿದ್ದ ಸೈಯದ್ ನಿಜಾಂ ಆಲಿ ಪತ್ತೆಗೆ ಉದಯಗಿರಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು.

ಬೆಂಗಳೂರಿನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಮೈಸೂರಿನ ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಕಾರ್ಯಾಚರಣೆಯಲ್ಲಿ ಉದಯಗಿರಿ ಠಾಣೆಯ ಇನ್ಸ್‌ಪೆಕ್ಟರ್ ಪಿ.ಪಿ.ಸಂತೋಷ, ಎಸ್‌ಐ ಎಂ.ಜೈಕೀರ್ತಿ, ಎಸ್.ರಾಜು, ಸಿಬ್ಬಂದಿ ಪುಟ್ಟರಾಜು, ಮಂಜುನಾಥ್, ವಿನೋದ ರಾಥೋಡ್, ಭವ್ಯಾ ಭಾಗವಹಿಸಿದ್ದರು.