ಮೈಸೂರು ಡೈರೀಸ್​ಗೆ ಸ್ಫೂರ್ತಿಯಾದ ಹಾಡು

ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ಸಂಗೀತ ನಿರ್ದೇಶಕ ಚರಣ್ ರಾಜ್ ರಾಗ ಸಂಯೋಜನೆ ಕೇಳುಗರನ್ನು ಮೋಡಿ ಮಾಡಿತ್ತು. ಇದೀಗ ಅದು ಒಂದು ಸಿನಿಮಾಕ್ಕೂ ಸ್ಪೂರ್ತಿಯಾಗಿದೆ ಎಂದರೆ ನೀವು ನಂಬಲೇಬೇಕು. ‘ಗೋಧಿ ಬಣ್ಣ..’ದ ‘ಅಯೋಮಯ..’ ಹಾಡನ್ನು ಸ್ಪೂರ್ತಿಯಾಗಿ ಇಟ್ಟುಕೊಂಡು ‘ಮೈಸೂರ್ ಡೈರೀಸ್’ ಚಿತ್ರ ಸಿದ್ಧಗೊಂಡಿದೆ. ಈ ಮೊದಲು ಅನೇಕ ಚಿತ್ರಗಳಿಗೆ ಸಂಭಾಷಣೆ ಹಾಗೂ ಹಾಡುಗಳನ್ನು ಬರೆದಿದ್ದ ಧನಂಜಯ್ ರಂಜನ್ ‘ಮೈಸೂರು ಡೈರೀಸ್’ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ವಿಶೇಷ ಎಂದರೆ ‘ಅಯೋಮಯ..’ ಹಾಡು ಬರೆದಿದ್ದು ಕೂಡ ಧನಂಜಯ್ ಅವರೇ. ಇದೀಗ ತಮ್ಮ ನಿರ್ದೇಶನದ ಮೊದಲ ಚಿತ್ರಕ್ಕೆ ತಾವೇ ಬರೆದ ಸಾಲುಗಳು ಸ್ಪೂರ್ತಿ ಆಗಿರುವುದಕ್ಕೆ ಧನಂಜಯ್ ತುಂಬ ಖುಷಿಯಲ್ಲಿದ್ದಾರೆ. ‘ನಾನು ರಚಿಸಿದ ‘ಅಯೋಮಯ..’ ಹಾಡಿನಲ್ಲಿ ಬರುವ ‘ಭಾವನೆ ಅಲೆಯಲ್ಲು ಅಲೆಯುತ್ತಿರುವಾಗ ಜೀವನವು ತುಂಬ ಜೀವಂತ’ ಈ ಸಾಲನ್ನು ಇಟ್ಟುಕೊಂಡು ನಾನು ‘ಮೈಸೂರು ಡೈರೀಸ್’ಗೆ ಕಥೆ ಹೆಣೆಯುತ್ತ ಹೋದೆ. ನಮ್ಮ ಇಡೀ ಚಿತ್ರದ ಒಂದೆಳೆ ಇದೇ ಸಾಲಿನ ಮೇಲೆ ನಿಂತಿದೆ’ ಎಂದು ಮಾಹಿತಿ ನೀಡುತ್ತಾರೆ ಧನಂಜಯ್.

ಮೈಸೂರಿನ ಸುತ್ತಮುತ್ತವೇ ಈ ಚಿತ್ರದ ಕಥೆ ಸಾಗಲಿದೆಯಂತೆ. ಈಗಾಗಲೇ ‘ಮೈಸೂರು ಡೈರೀಸ್’ ಶೂಟಿಂಗ್ ಮುಗಿದಿದ್ದು, ಇತ್ತೀಚೆಗೆ ಟೀಸರ್ ರಿಲೀಸ್ ಮಾಡಿಕೊಂಡು ಚಿತ್ರತಂಡ ಸಂಭ್ರಮಿಸಿತು. ಚಿತ್ರವನ್ನು ಶೀಘ್ರದಲ್ಲೇ ತೆರೆಮೇಲೆ ತರುವ ಯೋಚನೆ ನಿರ್ದೇಶಕರದ್ದು. ಈ ಚಿತ್ರದಲ್ಲಿ ಪ್ರಭು, ಪಾವನಾ, ಧನಂಜಯ್ ರಂಜನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ‘ಪುಷ್ಪಕ ವಿಮಾನ’ ಸಿನಿಮಾದ ನಿರ್ವಪಕರಲ್ಲಿ ಒಬ್ಬರಾದ ದೀಪಕ್ ಕೃಷ್ಣ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚರಣ್ ರಾಜ್ ಮತ್ತು ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ.