ಯಶಸ್ವಿಯಾಗಿ ಮುಕ್ತಾಯಗೊಂಡ ದಸರಾ

ಮೈಸೂರು: ನಾಡಹಬ್ಬ ದಸರಾ ಉತ್ಸವ ಸಿದ್ಧತೆಗೆ ಈ ಬಾರಿ ತಡವಾಗಿ ಚಾಲನೆ ದೊರೆತರೂ ಸಣ್ಣಪುಟ್ಟ ಗೊಂದಲಗಳನ್ನು ಹೊರತುಪಡಿಸಿ ದಸರಾ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆಯಿತು. ದೇಶ, ವಿದೇಶದಿಂದ ಆಗಮಿಸಿದ ಲಕ್ಷಾಂತರ ಜನರು ದಸರಾ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಂಡರು.

ದಸರಾ ಉತ್ಸವಕ್ಕೆ ಸಿದ್ಧತೆ ಕೈಗೊಳ್ಳಬೇಕಾದ ಹೊತ್ತಿನಲ್ಲಿಯೇ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಈ ರಾಜಕೀಯ ಬೆಳವಣಿಗೆಯ ನಡುವೆ ದಸರಾ ಸಿದ್ಧತೆ ಕೈಗೊಳ್ಳಲು ಸಾಕಷ್ಟು ತಡವಾಯಿತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ದಸರಾ ಉತ್ಸವವನ್ನು ಅಚ್ಚುಕಟ್ಟಾಗಿ ಆಚರಿಸುವಲ್ಲಿ ಯಶಸ್ವಿಯಾದರು.

ಅತ್ಯಂತ ಕಡಿಮೆ ಅವಧಿಯಲ್ಲಿ ದಸರಾ ಯಶಸ್ವಿಯಾಗಿ ಆಚರಣೆಗೊಳ್ಳಲು ಸಚಿವ ವಿ.ಸೋಮಣ್ಣ ಪರಿಶ್ರಮ ಅಪಾರ. ದಸರಾ ಮುಕ್ತಾಯಗೊಳ್ಳುವವರೆಗೂ ನಗರಕ್ಕೆ ಆಗಿಂದಾಗ್ಗೆ ಭೇಟಿ ನೀಡಿ ಸರಣಿ ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕಾರ್ಯ ಮಾಡಿದರು. ಅಲ್ಲದೆ ಸಚಿವ ಸ್ಥಾನ ವಂಚಿತರಾಗಿ ಮುನಿಸಿಕೊಂಡ ಶಾಸಕ ಎಸ್.ಎ.ರಾಮದಾಸ್, ಬೇರೆ ಬೇರೆ ಕಾರಣಗಳಿಂದ ದಸರಾ ಸಭೆಗಳಿಂದ ದೂರ ಉಳಿದುಕೊಂಡಿದ್ದ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರು. ಅಲ್ಲದೆ ಎಲ್ಲ ತಾಲೂಕುಗಳಲ್ಲಿ ದಸರಾ ಸಭೆಗಳನ್ನು ನಡೆಸಿ ಗ್ರಾಮೀಣ ದಸರಾದ ಯಶಸ್ಸಿಗೆ ಶ್ರಮಿಸಿದರು. ಆದರೆ, ಪಾಸ್ ಹಂಚಿಕೆಯಲ್ಲಿ ಪ್ರತಿ ವರ್ಷ ಎದುರಾಗುವ ಗೊಂದಲವನ್ನು ಸರಿಪಡಿಸಲು ಮಾತ್ರ ಅವರಿಂದ ಸಾಧ್ಯವಾಗಲೇ ಇಲ್ಲ. ಪಾಸ್ ವಿಚಾರವಾಗಿ ಮೇಯರ್ ಪುಷ್ಪಲತಾ ಜಗನ್ನಾಥ್ ತಡರಾತ್ರಿವರೆಗೆ ಪಾಲಿಕೆ ಮುಂಭಾಗ ಧರಣಿ ನಡೆಸುವ ಪರಿಸ್ಥಿತಿ ನಿರ್ಮಾಣವಾಯಿತು.

9 ಕಡೆ ಸಾಂಸ್ಕೃತಿಕ ಕಾರ್ಯಕ್ರಮ: ಪ್ರಸಕ್ತ ವರ್ಷ ಯುವ ದಸರಾ ಸೇರಿದಂತೆ ಒಂಬತ್ತು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಬಾರಿ ನಾದಬ್ರಹ್ಮ ಸಂಗೀತ ಸಭಾ ವೇದಿಕೆಯನ್ನು ಹೊಸದಾಗಿ ಸೇರ್ಪಡೆಗೊಳಿಸಲಾಯಿತು. ಅಲ್ಲದೆ ಮನೆ ಮನೆ ದಸರಾ ಕಾರ್ಯಕ್ರಮ ಹಿನ್ನೆಲೆಯಲ್ಲಿ 65 ವಾರ್ಡ್‌ಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಹೀಗಾಗಿ ಹಲವು ಕಲಾವಿದರಿಗೆ ತಮ್ಮ ಕಲಾ ಪ್ರತಿಭೆ ತೋರ್ಪಡಿಸಲು ದಸರಾ ಉತ್ತಮ ವೇದಿಕೆ ಒದಗಿಸಿತು.

ನಿಗದಿ ಸಮಯಕ್ಕೆ ಕಾರ್ಯಕ್ರಮ: ಪ್ರತಿ ಬಾರಿ ದಸರಾ ಉತ್ಸವದ ವಿವಿಧ ಕಾರ್ಯಕ್ರಮಗಳು ನಿಗದಿತ ಸಮಯಕ್ಕೆ ಪ್ರಾರಂಭವಾಗುತ್ತಿರಲಿಲ್ಲ. ಈ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತಿತ್ತು. ಆದರೆ, ಈ ಬಾರಿ ಸಚಿವ ವಿ.ಸೋಮಣ್ಣ ಎಲ್ಲ ಕಾರ್ಯಕ್ರಮಗಳಿಗೆ ನಿಗದಿತ ಸಮಯದೊಳಗೆ ತಲುಪುವ ಮೂಲಕ ಕಾರ್ಯಕ್ರಮ ವಿಳಂಬವಾಗುವುದನ್ನು ತಪ್ಪಿಸಿದರು.

ಪಾಸ್ ಮುಕ್ತ ಯುವ ದಸರಾ
ದಸರಾ ಉತ್ಸವದ ಮೊದಲ ದಿನ ಪಾಸ್ ಹಂಚಿಕೆಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಯಿತು. ಈ ಹಿನ್ನೆಲೆಯಲ್ಲಿ ಸಚಿವ ವಿ.ಸೋಮಣ್ಣ ಯುವ ದಸರಾವನ್ನು ಪಾಸ್‌ಮುಕ್ತಗೊಳಿಸಿದರು. ಹೀಗಾಗಿ ಜನಸಾಮಾನ್ಯರು ಕೂಡ ವೇದಿಕೆಯ ಬಳಿಯ ಆಸನದಲ್ಲಿ ಕುಳಿತು ಯುವ ದಸರಾದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಯಿತು. ಸಚಿವರ ಈ ತೀರ್ಮಾನಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಯಿತು.

ಗಮನ ಸೆಳೆದ ವಿದ್ಯುತ್ ದೀಪಾಲಂಕಾರ: ಈ ಬಾರಿಯ ದಸರಾ ಉತ್ಸವದ ಪ್ರಮುಖ ಆಕರ್ಷಣೆ ವಿದ್ಯುತ್ ದೀಪಾಲಂಕಾರ. ನಗರದ ಹೃದಯ ಭಾಗಗಳಿಗೆ ಮಾತ್ರ ಸೀಮಿತ ವಾಗಿದ್ದ ದೀಪಾಲಂಕಾರ ನಗರದ ವಿವಿಧ ಭಾಗ ಹಾಗೂ ವರ್ತುಲ ರಸ್ತೆವರೆಗೂ ವಿಸ್ತರಣೆಗೊಂಡಿತು. ಕಳೆದ ಬಾರಿ ದೀಪಾಲಂಕಾರಕ್ಕೆ 2.50 ಕೋಟಿ ರೂ.ವೆಚ್ಚ ಮಾಡಲಾಗಿತ್ತು. ಈ ಬಾರಿ 3 ಕೋಟಿ ರೂ. ವಿನಿಯೋಗಿಸಲಾಗಿದೆ. ನಗರದಲ್ಲಿ ಒಟ್ಟು 75 ಕಿ.ಮೀ. ರಸ್ತೆ ಹಾಗೂ 91 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿದೆ. ಅಲ್ಲದೆ ವಿದ್ಯುತ್ ದೀಪಗಳಿಂದ 12 ವಿವಿಧ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗಿದೆ. ಈ ಬಾರಿ ವಿಶೇಷವಾಗಿ ಪಶ್ಚಿಮ ಬಂಗಾಳದ ಮಾದರಿಯಲ್ಲಿ ನಗರದಲ್ಲಿ ದೀಪಾಲಂಕಾರ ಮಾಡಲಾಗಿದೆ. ಇದು ಅ.13ರವರೆಗೆ (ಬೆಟ್ಟದಲ್ಲಿ ತೆಪ್ಪೋತ್ಸವ ನಡೆಯುವವರೆಗೆ) ಇರಲಿದೆ.

ಆತಂಕ ದೂರ ಮಾಡಿದ ಭದ್ರತೆ: ದಸರಾ ಉತ್ಸವಕ್ಕೆ ಈ ಬಾರಿ ಉಗ್ರರ ದಾಳಿಯ ಭೀತಿ ಎದುರಾಗಿತ್ತು. ಹೀಗಾಗಿ ಕಟ್ಟೆಚ್ಚರದಿಂದ ಇರುವಂತೆ ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ ನೇತೃತ್ವದಲ್ಲಿ ಕೈಗೊಂಡ ಬಿಗಿ ಪೊಲೀಸ್ ಬಂದೋಬಸ್ತ್‌ನಿಂದ ಯಾವುದೇ ಅಹಿತಕರ ಘಟನೆ ನಡೆಯದೆ ದಸರಾ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಭದ್ರತೆಗೆ ಒಟ್ಟು 8,407 ಸಿಬ್ಬಂದಿ ನೇಮಕ, 12,100 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು.

ಪ್ರೇಮ ನಿವೇದನೆ ಸೃಷ್ಟಿಸಿದ ವಿವಾದ: ಯುವ ದಸರಾ ವೇದಿಕೆಯಲ್ಲಿ ರ‌್ಯಾಪ್ ಗಾಯಕ ಚಂದನ್ ಶೆಟ್ಟಿ, ಬಿಗ್‌ಬಾಸ್ ಖ್ಯಾತಿಯ ನಿವೇದಿತಾ ಗೌಡಗೆ ಪ್ರೇಮ ನಿವೇದನೆ ಮಾಡಿದ್ದು ಸಾಕಷ್ಟು ವಿವಾದ ಸೃಷ್ಟಿಸಿತು. ಈ ವಿಚಾರವಾಗಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆಗಳು ನಡೆಯುತ್ತಿದೆ. ಪ್ರೇಮ ನಿವೇದನೆ ಮಾಡುವುದು ತಪ್ಪೇನು ಅಲ್ಲ ಎಂಬುದಾಗಿ ಕೆಲವರು ವಾದಿಸಿದರೆ, ಇನ್ನು ಕೆಲವರು ಪ್ರೇಮ ನಿವೇದನೆ ಮಾಡಲು ದಸರಾ ವೇದಿಕೆ ಬಳಕೆ ಮಾಡಿಕೊಳ್ಳುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಾಲಿದ ಅಂಬಾರಿ ಸೃಷ್ಟಿಸಿತು ಆತಂಕ: ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಒಂದು ಕಡೆ ವಾಲಿಕೊಂಡು ಆತಂಕ ಸೃಷ್ಟಿಸಿತು. ಅಂಬಾರಿ ಕಟ್ಟುವ ಸಂದರ್ಭದಲ್ಲಿಯೇ ಅಂಬಾರಿ ಒಂದು ಕಡೆ ವಾಲಿಕೊಂಡಿತು. ಮತ್ತೆ ಬಿಚ್ಚಿ ಕಟ್ಟಿದರೆ ಮುಹೂರ್ತ ಮೀರಿ ಹೋಗುವ ಹಿನ್ನೆಲೆಯಲ್ಲಿ ಮತ್ತೆ ಅಂಬಾರಿಯನ್ನು ಬಿಗಿದು ಕಟ್ಟುವ ಗೋಜಿಗೆ ಹೋಗಲಿಲ್ಲ. ಇದು ಸಾಕಷ್ಟು ಆತಂಕ ಸೃಷ್ಟಿಸಿತ್ತಾದರೂ ಅರ್ಜುನ ಆನೆ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತೊಯ್ದು ಆತಂಕ ದೂರ ಮಾಡಿದ.

ಪಾರಂಪರಿಕ ಕಟ್ಟಡ ಏರಿದ ಜನರು: ನಗರದ ಪಾರಂಪರಿಕ ಕಟ್ಟಡಗಳು ದುಸ್ಥಿತಿಯಲ್ಲಿದ್ದು, ಯಾವುದೇ ಕಾರಣಕ್ಕೂ ಪಾರಂಪರಿಕ ಕಟ್ಟಡಗಳ ಮೇಲೆ ಹತ್ತಿ ಜಂಬೂಸವಾರಿ ವೀಕ್ಷಿಸಬಾರದು ಎಂದು ಪೊಲೀಸರು ಸೂಚನೆ ನೀಡಿದರೂ ಜನರು ಯಾವುದನ್ನು ಲೆಕ್ಕಿಸದೆ ಜೀವದ ಹಂಗು ತೊರೆದು ಪಾರಂಪರಿಕ ಕಟ್ಟಡ ಏರಿ ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಪ್ರತಿವರ್ಷ ಆಗುವ ಈ ಲೋಪವನ್ನು ತಪ್ಪಿಸಲು ಈ ಬಾರಿಯೂ ಸಾಧ್ಯವಾಗಲಿಲ್ಲ.

ಮುಹೂರ್ತಕ್ಕೂ ಮುನ್ನವೇ ಚಾಲನೆ: ಈ ಬಾರಿಯ ದಸರಾ ಉತ್ಸವಕ್ಕೆ ಬೆಟ್ಟದಲ್ಲಿ ಮುಹೂರ್ತಕ್ಕೂ ಮುನ್ನವೇ ಚಾಲನೆ ದೊರೆಯಿತು. ದಸರಾ ಉತ್ಸವಕ್ಕೆ ಬೆಳಗ್ಗೆ 9.39ರಿಂದ 10.25ಕ್ಕೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಚಾಲನೆ ನೀಡಬೇಕಾಗಿತ್ತು. ಆದರೆ, ಬೆಳಗ್ಗೆ 9.35ಕ್ಕೆ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಚಾಮುಂ ಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಜಂಬೂಸವಾರಿ ಪ್ರಾರಂಭಗೊಳ್ಳುವ ಮುನ್ನ ಶೋಭಾಯಾತ್ರೆಗೆ ಮಧ್ಯಾಹ್ನ 2.15 ರಿಂದ 2.58ರಲ್ಲಿ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜ ಪೂಜೆ ಮಾಡುವ ಚಾಲನೆ ದೊರೆಯಬೇಕಾಗಿತ್ತು. ಆದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಧ್ಯಾಹ್ನ 2.02ಕ್ಕೆ ನಂದಿಧ್ವಜ ಪೂಜೆ ನೆರವೇರಿಸಿದರು.

Leave a Reply

Your email address will not be published. Required fields are marked *