ಮೈಸೂರು: ಅಧಿಕಾರಾವಧಿ ಪೂರ್ಣಗೊಂಡಿರುವ ಮೈಸೂರು ಮಹಾನಗರ ಪಾಲಿಕೆಗೆ ಶೀಘ್ರವೇ ಚುನಾವಣೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಮುಂದಕ್ಕೆ ಹಾಕುವ ಪ್ರಶ್ನೆಯೇ ಇಲ್ಲ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆಯ ಹಾಲಿ ಕೌನ್ಸಿಲ್ ಅವಧಿ ನ.16ಕ್ಕೆ ಮುಕ್ತಾಯವಾಗಲಿದೆ. ಕೂಡಲೇ ಚುನಾವಣೆ ನಡೆಸಲಾಗುವುದು. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸೂಚನೆ ನೀಡಿದ್ದಾರೆ. ನಾನು ಕೂಡ ಚುನಾವಣೆ ಮಾಡಲು ಉತ್ಸುಕನಾಗಿರುವೆ ಎಂದರು.
15- 20 ದಿನಗಳ ಕಾಲ ವಿಳಂಬವಾಗಬಹುದೇ ಹೊರತು ಚುನಾವಣೆಯನ್ನು ಮುಂದೂಡಲ್ಲ. ಲೋಕಸಭಾ ಚುನಾವಣೆವರೆಗೂ ಕಾಯುವುದಿಲ್ಲ. ಹಾಗಾಗಿ, ಮೈಸೂರು ಪಾಲಿಕೆ ಚುನಾವಣೆಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬೆಂಗಳೂರು-ಮೈಸೂರನ್ನು ಅವಳಿ ನಗರವಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಈ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಯಲ್ಲಿದೆ. ಮೈಸೂರು ತ್ವರಿತವಾಗಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಈ ಕ್ರಮ ಅಗತ್ಯವಾಗಿದೆ. ಇದಕ್ಕೆ ಪೂರಕವಾಗಿ ನಗರದಲ್ಲಿ 4-5 ಫ್ಲೈ ಓವರ್ ನಿರ್ಮಾಣ ಮಾಡಲಾಗುವುದು. ಬೆಂಗಳೂರು-ಮೈಸೂರು ಹೆದ್ದಾರಿ ಮತ್ತು ರಿಂಗ್ ರಸ್ತೆ ಸಂಪರ್ಕಿಸುವ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಲ್ಲಿ ಒಂದು ಫ್ಲೈ ಓವರ್ ನಿರ್ಮಾಣ ಮಾಡಲಾಗುವುದು. ಈ ಯೋಜನೆಗಳಿಗೆ ಅಂದಾಜು 2 ಕೋಟಿ ರೂ. ಬೇಕಾಗಲಿದೆ. ಇದಕ್ಕಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿಕೊಂಡು, ಅನುದಾನವನ್ನು ಕ್ರೋಡೀಕರಣ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ನಗರದ ಜತೆ ಜತೆಯಲ್ಲೇ ಮೈಸೂರು ನಗರವನ್ನೂ ಅಭಿವೃದ್ಧಿ ಮಾಡಬೇಕಿದೆ. ಇದುವೇ ಸರ್ಕಾರದ ಆಶಯ. ಇದಕ್ಕೆ ಪೂರಕವಾಗಿ ಮೈಸೂರಿನ ಹೊರಭಾಗದಲ್ಲಿ ಹೊರ ಪರಿಧಿಯ ರಸ್ತೆ (ಪೆರಿಫೆರಲ್ ರಿಂಗ್ ರೋಡ್) ಮತ್ತು ಫ್ಲೈ ಓವರ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯದ 2ನೇ ಹಂತದ ನಗರಗಳ ಅಭಿವೃದ್ಧಿಗೂ ಕ್ರಮ ವಹಿಸಲಾಗುವುದು. ಬೆಂಗಳೂರು ಹೊರತುಪಡಿಸಿ ಮೈಸೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು ನಗರಗಳಲ್ಲಿ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.