ಮೋದಿ ಆಡಳಿತದಿಂದ ದೇಶಕ್ಕೆ ದುಸ್ಥಿತಿ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿಯ ಚುನಾವಣೆಯಲ್ಲಿ ದೇಶದಲ್ಲಿ ‘ಅಚ್ಛೇ ದಿನ್’ ಬರಲಿದೆ ಎಂದು ಭರವಸೆ ನೀಡಿದ್ದರು. ಆದರೆ, ನರೇಂದ್ರ ಮೋದಿ ಆಡಳಿತದಲ್ಲಿ ದೇಶಕ್ಕೆ ದುಸ್ಥಿತಿ ಬಂದಿದೆಯೇ ಹೊರತು ಅಚ್ಛೇ ದಿನ್ ಬಂದಿಲ್ಲ ಎಂದು ಎಐಸಿಸಿ ವಕ್ತಾರೆ ಐಶ್ವರ್ಯ ಮಂಚನಹಳ್ಳಿ ಮಹದೇವ್ ಟೀಕಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಜಿಲ್ಲಾ ಪದವೀಧರರ ಮತ್ತು ಶಿಕ್ಷಕರ ವಿಭಾಗದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಕಾಂಗ್ರೆಸ್ ಹಲವು ಕೊಡುಗೆಗಳನ್ನು ನೀಡಿದೆ. ಆ ಕೊಡುಗೆಗಳನ್ನು ಅಳಿಸಿ ಹಾಕುವ ಪ್ರಯತ್ನವನ್ನು ನರೇಂದ್ರ ಮೋದಿ ಸರ್ಕಾರ ಮಾಡುತ್ತಿದೆಯೇ ಹೊರತು ದೇಶಕ್ಕೆ ಯಾವುದೇ ಕೊಡುಗೆಗಳನ್ನು ನೀಡಲು ಅವರಿಂದ ಸಾಧ್ಯವಾಗಿಲ್ಲ ಎಂದರು.

ಕಾಂಗ್ರೆಸ್ ದೇಶಕ್ಕೆ ನೀಡಿರುವ ಕೊಡುಗೆ ಹಾಗೂ ಕೇಂದ್ರ ಸರ್ಕಾರದ ದುರಾಡಳಿತವನ್ನು ಮತದಾರರ ಮನೆ ಬಾಗಿಲಿಗೆ ತೆರಳಿ ತಿಳಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು. ಆ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್‌ಅನ್ನು ಮರಳಿ ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದು ಕರೆ ನೀಡಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೋಮು ಸಂಘರ್ಷಗಳು ಹೆಚ್ಚಾಗಿವೆ. 2014ಕ್ಕೂ

ಮೊದಲು ದೇಶದಲ್ಲಿ ಶಾಂತಿ ನೆಲೆಸಿತ್ತು. ಆದರೆ, ನಂತರ ಸಂಘರ್ಷಗಳು ಹೆಚ್ಚಾಗಿವೆ. ಹೀಗಾಗಿ ವಿದ್ಯಾವಂತರು ಈ ಸರ್ಕಾರವನ್ನು ಬದಲಾಯಿಸಲು ಪಣ ತೊಡಬೇಕೆಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಧರ್ಮ ಹಾಗೂ ಸೇನೆಯನ್ನು ಮುಂದಿಟ್ಟುಕೊ ಂಡು ರಾಜಕಾರಣ ಮಾಡುತ್ತಿದೆ. ದೇಶದ ಯೋಧರ ಶೌರ್ಯವನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ ಸರ್ಕಾರವನ್ನು ಮತದಾರರು ಅಧಿಕಾರದಿಂದ ಕಿತ್ತೊಗೆಯಬೇಕೆಂದು ಕರೆ ನೀಡಿದರು.

ಈ ಸಂದರ್ಭ ಐಶ್ವರ್ಯ ಮಂಚನಹಳ್ಳಿ ಮಹದೇವ್, ಮೇಯರ್ ಪುಷ್ಪಲತಾ ಜಗನ್ನಾಥ್, ಕಾಂಗ್ರೆಸ್‌ನ ಶಕ್ತಿ ಆ್ಯಪ್‌ಗೆ ಅತಿಹೆಚ್ಚು ಮತದಾರರನ್ನು ನೋಂದಾಯಿಸಿದ ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕಾಂಗ್ರೆಸ್ ಜಿಲ್ಲಾ ಪದವೀಧರರ ಮತ್ತು ಶಿಕ್ಷಕರ ವಿಭಾಗದ ಅಧ್ಯಕ್ಷೆ ಸಾರಾ ಹಕ್, ಎಪಿಎಂಸಿ ಉಪಾಧ್ಯಕ್ಷ ಬಸವರಾಜ್, ಕಾಂಗ್ರೆಸ್ ನಗರ ಪ್ರಧಾನ ಕಾರ್ಯದರ್ಶಿ ಶಿವಣ್ಣ ಇತರರು ಇದ್ದರು.