ಯಾರೇ ಸ್ಪರ್ಧೆ ಮಾಡಿದರೂ ಭಯವಿಲ್ಲ

ಮೈಸೂರು: ನನ್ನ ವಿರುದ್ಧ ಯಾರೇ ಸ್ಪರ್ಧೆ ಮಾಡಿದರೂ ಭಯವಿಲ್ಲ. ಕ್ಷೇತ್ರದ ಜನ ನನ್ನ ಜತೆಗಿದ್ದಾರೆ ಎಂದು ಸಂಸದ ಆರ್.ಧ್ರವನಾರಾಯಣ್ ತಿಳಿಸಿದರು.

ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆ, ವರುಣ ಮತ್ತು ತಗಡೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ವರುಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಎಲ್ಲ ಚುನಾವಣೆಯಲ್ಲೂ ದೊಡ್ಡ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ. ಹೀಗಾಗಿ, ಈ ಬಾರಿಯೂ ಕಾಂಗ್ರೆಸ್ ಬೆಂಬಲಿಸಿ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.

ಈಗಾಗಲೇ ಕ್ಷೇತ್ರದ ಹಲವೆಡೆ ಪ್ರಚಾರ ನಡೆಸಿದ್ದೇನೆ. ಕ್ಷೇತ್ರದ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಕ್ಷೇತ್ರವನ್ನು ಯಾರು ಅಭಿವೃದ್ಧಿ ಮಾಡಿದರು ಎಂಬುದು ಜನತೆಗೆ ಗೊತ್ತಿದೆ. ಹೀಗಾಗಿ ಚುನಾವಣೆಯಲ್ಲಿ ಯಾರನ್ನು ಆರಿಸಬೇಕು ಎಂಬುದನ್ನು ಅವರೇ ತೀರ್ಮಾನ ಮಾಡುತ್ತಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದು, ಈ ಬಾರಿ ಜೆಡಿಎಸ್ ಕೂಡ ನಮಗೆ ಬೆಂಬಲ ನೀಡಲಿದೆ. ಹೀಗಾಗಿ ನನಗೆ ಗೆಲುವು ಖಚಿತ ಎಂದರು.

ನಾನು ಎಲ್ಲೂ ಕೂಡ ಮತದಾರರಿಗೆ ಅಗೌರವ ತರುವ ಕೆಲಸ ಮಾಡಿಲ್ಲ. 365 ದಿನಗಳಲ್ಲಿ 100 ದಿನ ಅಧಿವೇಶನದಲ್ಲಿ ಭಾಗವಹಿಸಿದ್ದೇನೆ. ಕೇಂದ್ರ ಸರ್ಕಾರದ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ಹೆಚ್ಚು ಬಳಸಿದ್ದೇನೆ. ಕಳೆದ ಹತ್ತು ವರ್ಷಗಳಲ್ಲಿ ಉತ್ತಮ ಯೋಜನೆಗಳನ್ನು ತಂದಿದ್ದೇನೆ. ಇನ್ನೂ ಹೆಚ್ಚಿನ ಕೆಲಸ ಮಾಡುವ ಹುಮ್ಮಸ್ಸಿದ್ದು, ನನಗೆ ಇನ್ನೊಂದು ಅವಕಾಶ ಮಾಡಿಕೊಡಿ ಎಂದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನಿರೀಕ್ಷೆಯಂತೆ ಕೆಲಸ ಮಾಡಿಲ್ಲ. ಸರ್ಜಿಕಲ್ ಸ್ಟ್ರೈಕ್ ಹಾಗೂ ರೈತರಿಗೆ 6 ಸಾವಿರ ರೂ. ಹಣ ನೀಡಿದ್ದೇವೆ ಎಂಬ ಈ ಎರಡು ವಿಚಾರಗಳನ್ನು ಬಿಟ್ಟು ಮತ್ತೇನೂ ಮಾತನಾಡೋಲ್ಲ. ಕೇಂದ್ರ ಸರ್ಕಾರ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದರು.

25ರಂದು ನಾಮಪತ್ರ ಸಲ್ಲಿಕೆ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾರ್ಚ್ 25ರಂದು ನಾಮಪತ್ರ ಸಲ್ಲಿಸುತ್ತೇನೆ. ಅಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಹಿರಿಯ ಮುಖಂಡರು ಕೂಡ ಭಾಗಿಯಾಗಲಿದ್ದಾರೆ. ಎಲ್ಲರ ಜತೆಗೂಡಿ ನಾಮಪತ್ರ ಸಲ್ಲಿಸುತ್ತೇನೆ ಎಂದರು.

ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ಪಕ್ಷಕ್ಕೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಅವರು ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು. ಇದನ್ನು ಬಿಜೆಪಿ ಮಂತ್ರಿಗಳೇ ಹೇಳಿದ್ದಾರೆ. ಬಿಜೆಪಿ ಅಧಿಕಾರ ಹಿಡಿದ ಮೇಲೆ ಭಾರತ ದೇಶ ಅವನತಿಯತ್ತ ಹೋಗಿದೆ. ಅವರಿಂದ ದೇಶದ ಜನರಿಗೆ ಯಾವುದೇ ಅನುಕೂಲ ಆಗಿಲ್ಲ. ಬಿಜೆಪಿ ಯಾವತ್ತೂ ಶ್ರೀಮಂತರ ಹಾಗೂ ವ್ಯಾಪಾರಿಗಳ ಪರ. ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ಇದಕ್ಕೆ ಬಿಜೆಪಿಯೇ ಕಾರಣ ಎಂದು ಟೀಕಿಸಿದರು.

ಮುಸ್ಲಿಮರಿಂದ ದೇಶಕ್ಕೆ ಅಪಾಯ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಬಿಜೆಪಿಯು ತನ್ನ 5 ವರ್ಷಗಳ ಆಡಳಿತ ಅವಧಿಯಲ್ಲಿ ದೇಶವನ್ನು ಕೊಳ್ಳೆ ಹೊಡೆದಿದೆ. ಅಲ್ಲದೆ ಬೇಕಾಬಿಟ್ಟಿ ಜಾಹೀರಾತು ನೀಡುತ್ತಿದ್ದು, ಬಿಜೆಪಿಗೆ ಇಷ್ಟೊಂದು ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.

ವಿ.ಶ್ರೀನಿವಾಸ್‌ಪ್ರಸಾದ್ ಅವರು ಧ್ರುವನಾರಾಯಣ್ ಅವರ ಮೇಲೆ ಸೇಡು ತೀರಿಸಿಕೊಳ್ಳಲು ಕಣಕ್ಕಿಳಿದಿದ್ದಾರೆ. ಆದರೆ, ಧ್ರುವನಾರಾಯಣ್ ಹೆಚ್ಚು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ದೇಶದ ನಂ.1 ಸಂಸದರಾಗಿದ್ದಾರೆ. ನಿಮಗೆ ಸೇಡು ತೀರಿಸಿಕೊಳ್ಳುವವರು ಬೇಕಾ? ಅಭಿವೃದ್ಧಿ ಮಾಡುವವರು ಬೇಕಾ? ಎಂದು ತೀರ್ಮಾನಿಸಿ ಎಂದರು.

ಸಭೆಗೆ ಬಾರದ ಮಹದೇವಪ್ಪ: ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಹಾಗೂ ಸಂಸದ ಧ್ರುವನಾರಾಯಣ್ ನಡುವಿನ ಮುನಿಸು ಮುಂದುವರಿದಿದ್ದು, ಗುರುವಾರ ನಡೆದ ಸಭೆಯಿಂದ ಮಹದೇವಪ್ಪ ದೂರ ಉಳಿದರು. ಈ ಹಿಂದೆ ನಂಜನಗೂಡು ವಿಧಾನಸಭಾ ಚುನಾವಣೆ ಸಂಬಂಧ ಈ ಇಬ್ಬರು ನಾಯಕರು ಮುನಿಸಿಕೊಂಡಿದ್ದರು.
ಮಾಜಿ ಸಚಿವೆ ಗೀತಾ ಮಹದೇವಪ್ರಸಾಸ್, ಶಾಸಕ ಅನಿಲ್ ಚಿಕ್ಕಮಾದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.