More

    ಶ್ವಾನ ಸಮಸ್ಯೆ ಸುಪ್ರೀಂ ಅಂಗಳಕ್ಕೆ

    ಮೈಸೂರು: ಬೀದಿನಾಯಿಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ವಿಷಯವನ್ನು ಸುಪ್ರೀಂಕೋರ್ಟ್ ಅಂಗಳಕ್ಕೆ ಕೊಂಡೊಯ್ಯಲು ಶುಕ್ರವಾರ ನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಮೇಯರ್ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ಸಭೆಯಲ್ಲಿ ತೀರ್ಮಾನಿಸಲಾಯಿತು.

    ಬೀದಿನಾಯಿಗಳಿಂದ ಜನರು ಎದುರಿಸುತ್ತಿರುವ ಸಮಸ್ಯೆಯನ್ನು ಜೆಡಿಎಸ್‌ನ ಅಶ್ವಿನಿ ಅನಂತು ಸಭೆಯಲ್ಲಿ ಪ್ರಸ್ತಾಪಿಸಿ ಪರಿಹಾರಕ್ಕೆ ಒತ್ತಾಯಿಸಿದರು. ಇದಕ್ಕೆ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಪಕ್ಷಬೇಧ ಮರೆತು ಧ್ವನಿಗೂಡಿಸಿದರು. ನಗರದಲ್ಲಿ ಬೀದಿನಾಯಿಗಳ ಸಂಖ್ಯೆ ವೃದ್ಧಿಸುತ್ತಿದೆ. ಬೀದಿನಾಯಿಗಳ ಸಂತತಿ ನಿಯಂತ್ರಿಸಲು ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತಿದ್ದರೂ ಅದು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ. ಕಾಯಿಲೆಗೆ ಗುರಿಯಾಗಿರುವ ಹಲವಾರು ನಾಯಿಗಳು ಇದ್ದು, ಅವುಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಕೆಲವು ನಾಯಿಗಳು ವಾಹನಗಳನ್ನು ಅಟ್ಟಿಸಿಕೊಂಡು ಹೋಗುವ ಹಾಗೂ ಜನರ ಮೇಲೆ ದಾಳಿ ಮಾಡುವ ಪ್ರವೃತ್ತಿ ಹೊಂದಿದ್ದು, ಜನರು ಜೀವ ಭಯದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾವಾಗಿದ್ದು, ಬೀದಿ ನಾಯಿಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

    ಜೆಡಿಎಸ್‌ನ ಪ್ರೇಮಾ ಶಂಕರೇಗೌಡ ಮಾತನಾಡಿ, ಬೀದಿ ನಾಯಿಗಳು ಹಲವಾರು ಜನರ ಮೇಲೆ ದಾಳಿ ನಡೆಸಿವೆ. ಪಾಲಿಕೆ ಸದಸ್ಯರು ಸಹ ಬೀದಿನಾಯಿಗಳಿಂದ ಕಚ್ಚಿಸಿಕೊಂಡಿದ್ದಾರೆ. ಈ ಸಮಸ್ಯೆಗೆ ಕೂಡಲೇ ಪರಿಹಾರ ಕಂಡು ಹಿಡಿಯಬೇಕು ಎಂದು ಆಗ್ರಹಿಸಿದರು. ಬಿಜೆಪಿಯ ಶಾಂತಮ್ಮ ವಡಿವೇಲು ಮಾತನಾಡಿ, ನಗರದಲ್ಲಿ ಬೀದಿ ನಾಯಿಗಳ ಹಾವಳಿಯ ಜತೆಗೆ ಹಂದಿಗಳ ಕಾಟ ಕೂಡ ಹೆಚ್ಚಾಗಿದೆ. ಹಂದಿಗಳನ್ನು ಸೆರೆ ಹಿಡಿಯಲು ಪಾಲಿಕೆ ಸಿಬ್ಬಂದಿ ತೆರಳಿದ ಸಂದರ್ಭ ಹಂದಿ ಸಾಕಾಣಿಕೆದಾರರು ಮಾರಕಾಸ್ತ್ರ ತೋರಿಸಿ ಬೆದರಿಸುತ್ತಿದ್ದಾರೆ ಎಂದು ಸಭೆಯ ಗಮನ ಸೆಳೆದರು.

    ಈ ಕುರಿತು ಪ್ರತಿಕ್ರಿಯಿಸಿದ ಮೇಯರ್ ಶಿವಕುಮಾರ್, ಬೀದಿನಾಯಿಗಳ ಹಾವಳಿ ಗಂಭೀರ ಸಮಸ್ಯೆಯಾಗಿದೆ. ಬೀದಿ ನಾಯಿ ಗಳನ್ನು ಹಿಡಿದು ಬೇರೆಡೆ ಬಿಡಲು ಅವಕಾಶವಿಲ್ಲ. ಕಾಯಿಲೆ ಬಂದ ಬೀದಿನಾಯಿಗಳನ್ನು ಸೆರೆ ಹಿಡಿದು ಅವುಗಳಿಗೆ ಚಿಕಿತ್ಸೆ ನೀಡಿದ ನಂತರ ಅವುಗಳನ್ನು ಸೆರೆ ಹಿಡಿದ ಜಾಗಕ್ಕೆ ತಂದು ಬಿಡಬೇಕು. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸುಪ್ರೀಂಕೊ ೀರ್ಟ್ ಸೂಚನೆ ಇರುವ ಹಿನ್ನೆಲೆಯಲ್ಲಿ ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ವಿಶೇಷ ಸಭೆಯೊಂದನ್ನು ಕರೆದು ವಿಸ್ತೃತವಾಗಿ ಚರ್ಚಿಸಿ ನಂತರ ಸುಪ್ರಿಂಕೋರ್ಟ್‌ಗೆ ಬೀದಿ ನಾಯಿಗಳಿಂದ ಆಗುತ್ತಿರುವ ಗಂಭೀರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯಲು ಪ್ರಯತ್ನ ನಡೆಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts