More

    ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವಿಭಾಗೀಯ ಕಚೇರಿ ಉದ್ಘಾಟನೆ

    ಮೈಸೂರು: ಮಕ್ಕಳ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಆಲಿಸಿ, ನ್ಯಾಯ ಒದಗಿಸುವ ಸಲುವಾಗಿ ನಗರದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವಿಭಾಗೀಯ ಕಚೇರಿಯನ್ನು ಗುರುವಾರ ಉದ್ಘಾಟಿಸಲಾಯಿತು.

    ಜಿಲ್ಲಾಧಿಕಾರಿ ಕಚೇರಿಯ ಕೊಠಡಿ ಸಂಖ್ಯೆ 21ರಲ್ಲಿ ಇದು ಕಾರ್ಯನಿರ್ವಹಣೆ ಮಾಡಲಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ರಾಮನಗರ ಜಿಲ್ಲೆಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಇಲ್ಲಿ ನಡೆಯಲಿದೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮತ್ತು ಕೋರ್ಟ್‌ನಲ್ಲಿ ಇತ್ಯರ್ಥವಾಗದ ಸಿವಿಲ್ ಪ್ರಕರಣಗಳನ್ನು ಇಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.

    ಆಯೋಗದ ಅಧ್ಯಕ್ಷ ಡಾ.ಅಂಥೋಣಿ ಸೆಬಾಸ್ಟಿಯನ್ ಮಾತನಾಡಿ, ವಿವಿಧ ರೀತಿಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಆ ಹಕ್ಕುಗಳನ್ನು ರಕ್ಷಣೆ ಮಾಡಬೇಕಿದೆ. ಜತೆಗೆ, ಅನ್ಯಾಯಕ್ಕೆ ಒಳಗಾದ ಮಕ್ಕಳಿಗೆ ತ್ವರಿತವಾಗಿ ನ್ಯಾಯ ಒದಗಿಕೊಡಬೇಕಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಆಯೋಗದ ವಿಭಾಗೀಯ ಕಚೇರಿಯನ್ನು ಸ್ಥಾಪಿಸಲಾಗಿದೆ ಎಂದರು.

    ರಾಜ್ಯದ ಆರು ಕಡೆ ವಿಭಾಗೀಯ ಕಚೇರಿಯನ್ನು ಹಂತ ಹಂತವಾಗಿ ತೆರೆಯಲಾಗುತ್ತಿದ್ದು, ಮೈಸೂರು ಒಳಗೊಂಡಂತೆ ರಾಯಚೂರು, ಶಿವಮೊಗ್ಗ, ಧಾರವಾಡ, ಬೆಳಗಾವಿಯಲ್ಲೂ ಕಚೇರಿಯನ್ನು ಸ್ಥಾಪಿಸುವ ಮೂಲಕ ಅಧಿಕಾರ ವಿಕೇಂದ್ರೀಕರಣ ಮಾಡಲಾಗುವುದು. ಪ್ರತಿ ಕಚೇರಿಯಲ್ಲಿ ಆಯೋಗದ ಸದಸ್ಯರು, ತಾಂತ್ರಿಕ ಸಿಬ್ಬಂದಿ ಇರಲಿದ್ದಾರೆ ಎಂದರು.

    ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಅಂದಾಜು ಎರಡು ಸಾವಿರ ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಇತ್ಯರ್ಥಗೊಳಿಸುವುದು ವಿಳಂಬವಾಗಿದ್ದು, ಈಗ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

    ಅಪರ ಜಿಲ್ಲಾಧಿಕಾರಿ ಪೂರ್ಣಿಮಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಕೆ.ಪದ್ಮಾ, ಜಿಲ್ಲಾ ಮಕ್ಕಳ ಹಕ್ಕು ರಕ್ಷಣಾ ಸಮಿತಿ ಅಧ್ಯಕ್ಷೆ ಕಮಲಾ, ಒಡನಾಡಿ ಸಂಸ್ಥೆಯ ನಿರ್ದೇಶಕ ಕೆ.ವಿ.ಸ್ಟ್ಯಾನ್ಲಿ, ಆಯೋಗದ ಸದಸ್ಯರಾದ ಶಿವಮೊಗ್ಗ ವಲಯದ ಡಿ.ಶಂಕರಪ್ಪ, ಮೈಸೂರು ವಲಯದ ಎಂ.ಎಲ್.ಪರಶುರಾಮ, ಬಳ್ಳಾರಿ ವಲಯದ ಸದಸ್ಯ ಸಿ.ರಾಘವೇಂದ್ರ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ದಿವಾಕರ್ ಇತರರು ಪಾಲ್ಗೊಂಡಿದ್ದರು.

    ಆಶ್ರಮ ಶಾಲೆಯೊಂದರಲ್ಲಿ ಮಕ್ಕಳ ದಾರಿತಪ್ಪಿಸುವ ಕೆಲಸ:  ಪಿರಿಯಾಪಟ್ಟಣ ತಾಲೂಕಿನ ಆಶ್ರಮ ಶಾಲೆಯೊಂದರಲ್ಲಿ ಮಕ್ಕಳಿಗೆ ಅಶ್ಲೀಲ ಸಿನಿಮಾ ತೋರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ, ಒಡನಾಡಿ ಸಂಸ್ಥೆಯ ನಿರ್ದೇಶಕ ಎಂ.ಎಲ್.ಪರಶುರಾಮ್ ಗಂಭೀರ ಆರೋಪ ಮಾಡಿದರು.

    ಅನೇಕ ಆಶ್ರಮ ಮತ್ತು ವಸತಿ ಶಾಲೆಯಲ್ಲಿ ಅಶ್ಲೀಲ ವಿಡಿಯೋ ತೋರಿಸುವ ಮೂಲಕ ಮಕ್ಕಳನ್ನು ದಾರಿತಪ್ಪಿಸಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಪಿರಿಯಾಪಟ್ಟಣ ಆಶ್ರಮ ಶಾಲೆಯಲ್ಲಿ ಸೆನ್ಸಾರ್ ಮಂಡಳಿಯಿಂದ ‘ಎ’ ಸರ್ಟಿಫಿಕೇಟ್ ಪಡೆದ ಸಿನಿಮಾಗಳ ಸಿಡಿಗಳು ದೊರೆತಿದ್ದು, ಅವುಗಳ ಸಂಖ್ಯೆ ಸಾವಿರ ದಾಟುತ್ತದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ ಎಂದು ಹೇಳಿದರು.

    ಮೈಸೂರು ವಿಭಾಗದಲ್ಲಿ 86 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಇಂದು 34 ಪ್ರಕರಣಗಳ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಾಗುವುದು. ಅವುಗಳಲ್ಲಿ ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಆರ್‌ಟಿಇ ಕಾಯ್ದೆ ಉಲ್ಲಂಘನೆ, ಭಿಕ್ಷಾಟನೆ ಮತ್ತು ಜೀತಪದ್ಧತಿಗೆ ತಳ್ಳಿರುವುದು, ಶಿಕ್ಷಕರಿಂದ ಮಕ್ಕಳ ಮೇಲಿನ ಕಿರುಕುಳ ಪ್ರಕರಣಗಳು ಹೆಚ್ಚಿವೆ ಎಂದರು.

    ಮಕ್ಕಳ ಹಕ್ಕುಗಳ ಉಲ್ಲಂಘನೆ ಮಾಡುವ ವ್ಯಕ್ತಿಗಳ ವಿರುದ್ಧ ಕ್ರಮ ವಹಿಸಲಾಗುವುದು.ಅಧಿಕಾರಿಗಳಿಂದ ಲೋಪವಾದರೂ ಅವರ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಈ ವಿಷಯವಾಗಿ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಿ, ಮೇಲುಸ್ತುವಾರಿ ವಹಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts