ಮಂಡ್ಯ: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ಹಾಗೂ ಮೈಸೂರು ಮುಡಾದಲ್ಲಿನ ನಿವೇಶನ ಖರೀದಿ ಹಗರಣದ ವಿಚಾರ ಮುಂದಿಟ್ಟುಕೊಂಡು ಜಿಲ್ಲೆಯಲ್ಲಿ ನಡೆಯುತ್ತಿರುವ ಪಾದಯಾತ್ರೆ ಬಿಜೆಪಿಗೆ ವರದಾನವಾದರೆ, ದಳಕ್ಕೆ ಕೊಂಚ ಹಿನ್ನಡೆಯಾಗುವಂತಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಪಾದಯಾತ್ರೆ ಬಗ್ಗೆ ಆರಂಭದಿಂದಲೂ ಅಪಸ್ವರ ಕೇಳಿಬರುತ್ತಲೇ ಇದೆ. ಮೊದಲಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೇ ಪಾದಯಾತ್ರೆಗೆ ಬೆಂಬಲ ನೀಡುವುದಿಲ್ಲವೆಂದು ಬಹಿರಂಗವಾಗಿ ಘೋಷಿಸಿದರು. ಬಿಜೆಪಿ ನಾಯಕರ ಸಂಧಾನದ ಬಳಿಕ ಒಪ್ಪಿಕೊಂಡರು. ಇದಾದ ಬಳಿಕ ಪಾದಯಾತ್ರೆ ಜಿಲ್ಲೆಯೊಳಗೆ ಪ್ರವೇಶ ಪಡೆದು ಅಂತ್ಯ ಕಂಡಿದೆ. ಈ ನಡುವೆ ಕೆಲ ಅಂಶಗಳು ಜೆಡಿಎಸ್‌ನೊಳಗೆ ಅತೃಪ್ತಿ ತರಿಸಿದೆ.
ಪ್ರಮುಖವಾಗಿ ನೋಡುವುದಾದರೆ ಇಡೀ ಪಾದಯಾತ್ರೆ ಬಿಜೆಪಿ ಕೇಂದ್ರಿತವಾಗಿ ಕಂಡುಬಂತು. ಎಲ್ಲಿ ನೋಡಿದರೂ ಬಿಜೆಪಿ ನಾಯಕರ ಅಬ್ಬರವೇ ಕಾಣಿಸಿತು. ಇದಲ್ಲದೆ ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ನಾಯಕರ ಹುಮ್ಮಸ್ಸನ್ನು ವೃದ್ಧಿಸಿದರು. ಜತೆಗೆ ಪಾದಯಾತ್ರೆ ಮುಗಿಯುವವರೆಗೂ ಜತೆಗೆ ನಿಂತರು. ಇದರಿಂದಾಗಿ ದಳದ ಭದ್ರಕೋಟೆಯಲ್ಲಿ ಬಿಜೆಪಿ ವರ್ಚಸ್ಸು ಹೆಚ್ಚಿಸಿಕೊಂಡಂತೆ ಕಾಣಿಸುತ್ತಿದೆ. ಜೆಡಿಎಸ್ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಸಕ್ರಿಯವಾಗಿದ್ದರೂ, ನಾಯಕರು ಪೂರ್ಣ ಪ್ರಮಾಣದಲ್ಲಿ ಭಾಗಿಯಾದಂತೆ ಕಂಡುಬರಲಿಲ್ಲ. ಈ ನಡುವೆ ಪಾದಯಾತ್ರೆಯ ಐದನೇ ದಿನ ನಡೆದ ಗಲಾಟೆ ಜೆಡಿಎಸ್‌ಗೆ ಇರಿಸು ಮುರಿಸು ತರಿಸಿತು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಎದುರು ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಈ ಘಟನೆ ಬಳಿಕ ಎರಡು ಪಕ್ಷದ ನಡುವೆ ಕೊಂಚ ಅಂತರವೂ ಕಂಡುಬಂತು.
ನಿಖಿಲ್‌ಕುಮಾರಸ್ವಾಮಿಗೆ ಹೊಸ ಇಮೆಜ್
ಮೈಸೂರು ಚಲೋ ಪಾದಯಾತ್ರೆಯಿಂದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಹೊಸ ಇಮೆಜ್ ತಂದುಕೊಟ್ಟಿದೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಜೆಡಿಎಸ್ ನೇತೃತ್ವವನ್ನು ನಿಖಿಲ್ ವಹಿಸಿಕೊಂಡರು. ಹಿರಿಯರು, ಕಿರಿಯರ ಮುಖಂಡರನ್ನು ವಿಶ್ವಾಸಕ್ಕೆ ಪಡೆದುಕೊಂಡರು. ಹೆಚ್ಚಾಗಿ ಯುವ ಸಮೂಹವನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಹೋದಲೆಲ್ಲ ಅವರಿಗೆ ಅಭೂತ ಪೂರ್ವ ಸ್ವಾಗತ, ಬೆಂಬಲ ಸಿಕ್ಕಿತು. ಒಟ್ಟಾರೆ ಪಾದಯಾತ್ರೆ ನಿಖಿಲ್ ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಮೆಟ್ಟಿಲನ್ನು ಹಾಕಿಕೊಟ್ಟಿದೆ.