ಚಿಟ್ಟೆ ಉದ್ಯಾನಕ್ಕೆ ಮರುಜೀವ ನೀಡಲು ಯೋಜನೆ

ಮೈಸೂರು: ಕಳೆದ ಮೂರು ವರ್ಷಗಳಿಂದ ಪ್ರವಾಸಿಗರಿಂದ ದೂರವಾಗಿರುವ ಕಾರಂಜಿಕೆರೆಯ ಚಿಟ್ಟೆ ಉದ್ಯಾನಕ್ಕೆ ಮರುಜೀವ ನೀಡಲು ಮೈಸೂರು ಮೃಗಾಲಯ ಮುಂದಾಗಿದ್ದು, ಇದಕ್ಕೆ 20 ಲಕ್ಷ ರೂ. ಮೊತ್ತದ ಯೋಜನೆ ರೂಪುಗೊಂಡಿದೆ.

ಕಾರಂಜಿ ಕೆರೆಗೆ ಭೇಟಿ ನೀಡುವವರನ್ನು ಚಿಟ್ಟೆ ಉದ್ಯಾನ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿತ್ತು. ಆದರೆ, ಮೂರು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ಈ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡರು. ಈ ಘಟನೆ ನಂತರ ಆ ಸ್ಥಳಕ್ಕೆ ಸುರಕ್ಷತೆ ದೃಷ್ಟಿಯಿಂದ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಯಿತು. ಹೀಗಾಗಿ ಚಿಟ್ಟೆ ಉದ್ಯಾನ ನಿರ್ವಹಣೆ ಇಲ್ಲದೆ ಮೂಲೆಗುಂಪಾಯಿತು. ಇದೀಗ ಚಿಟ್ಟೆ ಉದ್ಯಾನವನ್ನು ಮತ್ತೆ ಪ್ರವಾಸಿಗರ ಆಕರ್ಷಣೆಯ ಕೇಂದ್ರವನ್ನಾಗಿ ಮಾಡಲು ಯೋಜನೆ ರೂಪಿಸಲಾಗಿದೆ.
ಕಾರಂಜಿ ಕೆರೆಗೆ ಭಾನುವಾರ ಭೇಟಿ ನೀಡಿದ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಚಿಟ್ಟೆ ಉದ್ಯಾನ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು. ಅಲ್ಲದೆ ಪ್ರವಾಸಿಗರ ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು.

ಈ ಹಿಂದೆ ಇದ್ದ ಜಾಗದಲ್ಲಿಯೇ ಒಂದು ಗುಂಟೆ ವಿಸ್ತೀರ್ಣವಿರುವ ಸಣ್ಣ ದ್ವೀಪದಲ್ಲಿ ಚಿಟ್ಟೆ ಉದ್ಯಾನ ತಲೆ ಎತ್ತಲಿದೆ. ಈ ಹಿಂದೆ ಈ ಜಾಗದಲ್ಲಿ ಪ್ರವಾಸಿಗರಿಗೆ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಆದರೆ, ಹೊಸದಾಗಿ ಚಿಟ್ಟೆ ಉದ್ಯಾನ ಅಭಿವೃದ್ಧಿಗೊಳಿಸಿದ ನಂತರ ಕೇವಲ ವೀಕ್ಷಣೆಗೆ ಮಾತ್ರ ಅವಕಾಶ ನೀಡಲು ಮೈಸೂರು ಮೃಗಾಲಯ ನಿರ್ಧರಿಸಿದೆ.

ಬಣ್ಣದ ಲೋಕ: ಚಿಟ್ಟೆ ಉದ್ಯಾನ ಅಭಿವೃದ್ಧಿಗೊಂಡ ನಂತರ ಕಾರಂಜಿಕೆರೆ ಬಣ್ಣದ ಲೋಕವಾಗಿ ಮಾರ್ಪಡುವುದು ನಿಶ್ಚಿತ. ಮೈಸೂರು ಭಾಗದಲ್ಲಿ ಒಟ್ಟು 10 ಬಗೆಯ ಚಿಟ್ಟೆಗಳು ಇದ್ದು, ಇದರೊಂದಿಗೆ ಇನ್ನೂ 10 ಬಗೆಯ ಚಿಟ್ಟೆಗಳನ್ನು ಈ ಉದ್ಯಾನದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಉದ್ಯಾನದಲ್ಲಿ ಚಿಟ್ಟೆಗಳ ಮನೆಗಳನ್ನು ನಿರ್ಮಿಸಿ ಚಿಟ್ಟೆಗಳ ಸಂತಾನೋತ್ಪತಿಗೆ ಅವಕಾಶ ಕಲ್ಪಿಸಲಾಗುವುದು. ಚಿಟ್ಟೆಗಳನ್ನು ಆಕರ್ಷಿಸಲು ಕಾರಂಜಿ ಕೆರೆಯಲ್ಲಿ ಹಲವು ಬಗೆಯ ಹೂಗಳನ್ನು ಬೆಳೆಸಲು ನಿರ್ಧರಿಸಲಾಗಿದೆ. ಒಟ್ಟು ನಾಲ್ಕು ತಿಂಗಳ ಅವಧಿಯೊಳಗೆ ಚಿಟ್ಟೆ ಉದ್ಯಾನ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಕಾರಂಜಿ ಕೆರೆಯ ದ್ವೀಪದಲ್ಲಿದ್ದ ಚಿಟ್ಟೆ ಉದ್ಯಾನವನ್ನು ಅಭಿವೃದ್ಧಿಪಡಿಸಲು 20 ಲಕ್ಷ ರೂ. ನೀಡಲಾಗಿದೆ. ಈ ಅನುದಾನದಲ್ಲಿ ಚಿಟ್ಟೆ ಉದ್ಯಾನವನ್ನು ಅಭಿವೃದ್ಧಿಪಡಿಸಿ ಮತ್ತೆ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿ ಮಾಡಲಾಗುವುದು.
ಸಾ.ರಾ.ಮಹೇಶ್, ಪ್ರವಾಸೋದ್ಯಮ ಸಚಿವ