ಆಂತರಿಕ ಸಮೀಕ್ಷೆ ಆಧಾರದ ಮೇಲೆ ಟಿಕೆಟ್ ಹಂಚಿಕೆ


ಮೈಸೂರು: ಪಕ್ಷ ನಡೆಸುವ ಆಂತರಿಕ ಸಮೀಕ್ಷೆಯ ಆಧಾರದ ಮೇಲೆ ಟಿಕೆಟ್ ಹಂಚಿಕೆಯಾಗಲಿದ್ದು, ಇದು ಹಾಲಿ ಸಂಸದರಿಗೂ ಕೂಡ ಅನ್ವಯ ಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಅವಿನಾಶ್ ರಾಯ್ ಖನ್ನಾ ಹೇಳಿದರು.
ಪಕ್ಷದ ಚುನಾವಣಾ ಸಮಿತಿ ಪ್ರತಿಯೊಂದು ಕ್ಷೇತ್ರಗಳಿಗೆ ಭೇಟಿ ನೀಡಿ ಆಕಾಂಕ್ಷಿಗಳ ಪಟ್ಟಿಯನ್ನು ತಯಾರಿಸಿ ಪಕ್ಷದ ಸಂಸದೀಯ ಸಮಿತಿಯ ಮುಂದಿಡಲಿದೆ. ಸಂಸದೀಯ ಸಮಿತಿ ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, ಪಕ್ಷ ಕಣಕಿಳಿಸುವ ಅಭ್ಯರ್ಥಿಗಳು ಗೆಲುವು ಸಾಧಿಸುವುದು ನಿಶ್ಚಿತ. ಆಂತರಿಕ ಸಮೀಕ್ಷೆಯ ಆಧಾರದ ಮೇಲೆಯೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಾಗಿದೆ. ಅದೇ ರೀತಿ ಲೋಕಸಭೆಯಲ್ಲೂ ಟಿಕೆಟ್ ಹಂಚಿಕೆಯಾಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲೋಕಸಭಾ ಚುನಾವಣೆಗೆ ಬಿಜೆಪಿ ಸಾಕಷ್ಟು ತಯಾರಿ ನಡೆಸುತ್ತಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ದೇಶದ ಪ್ರಗತಿಗೆ ಬಿಜೆಪಿ ಹಲವು ಕೊಡುಗೆಗಳನ್ನು ನೀಡಿದೆ. ಈ ಪ್ರಗತಿಯನ್ನು ಮುಂದಿಟ್ಟುಕೊಂಡು ಜನರ ಬಳಿ ಮತಯಾಚಿಸಲಾಗುವುದು. ದೇಶದ ಜನತೆ ಅಭಿವೃದ್ಧಿ ಕಾರ್ಯಗಳಿಗೆ ಮನ್ನಣೆ ನೀಡುವ ವಿಶ್ವಾಸ ಇದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಲಿಸಲು ಎಲ್ಲ ಪಕ್ಷಗಳು ಒಗ್ಗೂಡುತ್ತಿವೆ. ಇದಕ್ಕೆ ದೇಶದಲ್ಲಿ ಮಹಾಮೈತ್ರಿ ಮಾತುಕತೆ ಪ್ರಾರಂಭವಾಗಿದೆ. ಆದರೆ, ಬಿಜೆಪಿಗೆ ಸಮರ್ಥ ನಾಯಕತ್ವ (ಮೋದಿ) ಇದೆ. ಅದರೆ, ಮಹಾಮೈತ್ರಿಯಲ್ಲಿ ಅಂಥ ಸಮರ್ಥ ನಾಯಕರನ್ನು ಕಾಣಲು ಸಾಧ್ಯವಿಲ್ಲ. ಒಂದು ವೇಳೆ ಮಹಾಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಸೋಮವಾರದಿಂದ ಶನಿವಾರದವರೆಗೆ ಒಬ್ಬೊ ಬ್ಬರು ಪ್ರಧಾನಮಂತ್ರಿಯಾಗುತ್ತಾರೆ. ಭಾನುವಾರ ಪ್ರಧಾನಿ ಹುದ್ದೆಗೆ ರಜಾ ದಿನವಾಗಿರುತ್ತದೆ ಎಂದು ವ್ಯಂಗ್ಯವಾಡಿದರು.
ಮೋದಿ ಕೈಗೊಂಡು ಹಲವು ಯೋಜನೆಗಳು ಇಂದು ಮನೆ ಮಾತಾಗಿದೆ. ದೇಶವನ್ನು ಸ್ವಚ್ಛವಾಗಿಡಲು ಸ್ವಚ್ಛ ಭಾರತ್ ಅಭಿಯಾನ ಪ್ರಾರಂಭಿಸಿದರು. ಅಭಿಯಾನದ ಬಳಿಕ ಸಾಕಷ್ಟು ಜನರು ಸ್ವಚ್ಛತೆ ವಿಚಾರದಲ್ಲಿ ಜಾಗೃತರಾಗಿದ್ದಾರೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಡಬೇಕೆಂಬ ಪ್ರಜ್ಞೆ ಅವರಲ್ಲಿ ಬಂದಿದೆ ಎಂದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ವರ್ಗಗಳ ಜನರನ್ನು ಭೇಟಿಯಾಗಿ ಅವರ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ. ಅಭಿಪ್ರಾಯ ಆಧರಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಆಡಳಿತ ನೀಡಲಿದ್ದೇವೆ. ಸಾಕಷ್ಟು ಜನರು ಉತ್ತಮ ಸಲಹೆಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಬಿಜೆಪಿ ರಾಜ್ಯ ವಕ್ತಾರ ಗೋ. ಮಧುಸೂದನ್, ಮೈಸೂರು ಲೋಕಸಭಾ ಕ್ಷೇತ್ರದ ಸಂಚಾಲಕ ಫಣೀಶ್, ಶಾಸಕ ಭರತ್‌ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ನಗರಾಧ್ಯಕ್ಷ ಡಾ.ಬಿ.ಎಚ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಜೀವ್ ಇತರರು ಗೋಷ್ಠಿಯಲ್ಲಿದ್ದರು.