ಸಿದ್ದುಗೆ ಮತ್ತೆ ಸೋಲಿನ ಮುಜುಗರ!

ಮೈಸೂರು: ರಾಜಕೀಯವಾಗಿ ಪುನರ್ ಜನ್ಮ ನೀಡಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ, ಮತ್ತೆ ಸೋಲಿನಿಂದ ಮುಜುಗರಕ್ಕೀಡಾಗುವಂತೆ ಮಾಡಿದೆ.

ಗೆದ್ದು ಮತ್ತೆ ಮುಖ್ಯಮಂತ್ರಿಯಾಗುವೆ ಎನ್ನುವ ಅತಿಯಾದ ಆತ್ಮವಿಶ್ವಾಸದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಸಿದ್ದರಾಮಯ್ಯ ಅವರನ್ನು ಕ್ಷೇತ್ರದ ಮತದಾರರರು ತಿರಸ್ಕರಿಸಿದ್ದರು. ಈ ನೋವು ಮರೆಯುವ ಮುಂಚೆಯೇ ಲೋಕಸಭೆ ಚುನಾವಣೆಯಲ್ಲಿಯೂ ಕ್ಷೇತ್ರದ ಮತದಾರರು ಮೈತ್ರಿ ಅಭ್ಯರ್ಥಿಯನ್ನು ಬಿಟ್ಟು ಬಿಜೆಪಿಯನ್ನು ಬೆಂಬಲಿಸುವ ಮೂಲಕ ಮತ್ತೆ ಮುಖಭಂಗವಾಗುವಂತೆ ಮಾಡಿದ್ದಾರೆ.

ಜಂಟಿ ಪ್ರಚಾರವೂ ಕೈ ಹಿಡಿಯಲಿಲ್ಲ: ವಿಧಾನಸಭೆ ಚುನಾವಣೆಯ ಸೋಲನ್ನು ಮರೆತು ತಾವೇ ಕಣಕ್ಕಿಳಿಸಿದ್ದ ಮೈತ್ರಿ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್ ಅವರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಮತ್ತೆ ತಮ್ಮ ಪ್ರಭಾವ ತೋರಿಸಬೇಕು ಎನ್ನುವ ಹಂಬಲವನ್ನು ಸಿದ್ದರಾಮಯ್ಯ ಇಟ್ಟುಕೊಂಡಿದ್ದರು. ಹೀಗಾಗಿ ತಮ್ಮ ವಿರುದ್ಧ ಗೆದ್ದಿರುವ ಜಿ.ಟಿ.ದೇವೇಗೌಡ ಅವರೊಂದಿಗೆ ರಾಜಕೀಯ ವೈಮನಸ್ಸನ್ನು ಮರೆತು ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು.

ಆದರೆ ಮೈತ್ರಿ ಬಗ್ಗೆಯೇ ಅಸಮಾಧಾನವಿಟ್ಟುಕೊಂಡಿದ್ದ ಜಿ.ಟಿ.ದೇವೇಗೌಡ, ಮೈತ್ರಿ ಬಗ್ಗೆ ಮೊದಲೇ ತೀರ್ಮಾನ ಮಾಡಬೇಕಾಗಿತ್ತು. ಕಾರ್ಯಕರ್ತರ ಮನಸ್ಸು ಒಂದು ಮಾಡುವ ಕೆಲಸ ಮಾಡಬೇಕಾಗಿತ್ತು. ಈಗ ಕಾಲ ಮಿಂಚಿ ಹೋಗಿದೆ ಎನ್ನುವ ಮಾತಿನಿಂದಲೇ ಅರೆ ಮನಸ್ಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

ಅಲ್ಲದೇ ಮತದಾನ ಮುಗಿದಾಗಲೇ ಕಾರ್ಯಕರ್ತರು ಮೈತ್ರಿಯನ್ನು ಒಪ್ಪಿಕೊಳ್ಳದಿದ್ದರಿಂದ ಜೆಡಿಎಸ್ ಮತಗಳು ಬಿಜೆಪಿ ಪಾಲಾಗಿವೆ. ಉದ್ಬೂರು ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಮತಗಳು ವಿಭಜನೆಗೊಂಡಿದ್ದು, ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಬಹುಮತ ಬರುವುದಿಲ್ಲ ಎನ್ನುವ ಸುಳಿವನ್ನು ಮೊದಲೇ ನೀಡಿದ್ದರು. ಜಿ.ಟಿ.ದೇವೇಗೌಡರ ಈ ಮಾತು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿ ರಾಜ್ಯದ ಇತರೆ ಕಡೆಗಳಲ್ಲಿಯೂ ಇದೇ ವ್ಯವಸ್ಥೆಯಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದು, ಫಲಿತಾಂಶದ ಬಳಿಕ ಸತ್ಯವಾಗಿದೆ. ಹೀಗಾಗಿ ಮೈತ್ರಿ ಧರ್ಮ ಚಾಮುಂಡೇಶ್ವರಿಯಲ್ಲಿಯೂ ಪಾಲನೆಯಾಗಿಲ್ಲ ಎನ್ನುವುದು ಸಾಬೀತಾಗಿದೆ.

ಬಿಜೆಪಿ ಋಣ ತೀರಿಸಿದ ಜೆಡಿಎಸ್: ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣ ಬಿಟ್ಟು ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಕಣಕ್ಕಿಳಿದಿದ್ದರೂ ಬಿಜೆಪಿ ಅಷ್ಟೇನೂ ಪ್ರಭಾವಿಯಲ್ಲದ ಗೋಪಾಲರಾವ್ ಅವರನ್ನು ಕಣಕ್ಕಿಳಿಸಿತ್ತು. ಈ ಮೂಲಕ ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರಿಗೆ ಸಹಕಾರ ನೀಡುವುದು ಇದರ ಹಿಂದಿನ ಉದ್ದೇಶವಾಗಿತ್ತು.
ಅಲ್ಲದೆ ಸಾಂಪ್ರದಾಯಿಕ ಮತಗಳು ಸೇರಿದಂತೆ ಬಿಜೆಪಿ ಬೆಂಬಲಿಸುವ ಮತಗಳು ಜೆಡಿಎಸ್ ಪಾಲಾಗುವಂತೆ ನೋಡಿಕೊಳ್ಳಲಾಗಿತ್ತು. ಹೀಗಾಗಿ ಜಿ.ಟಿ.ದೇವೇಗೌಡ ಅವರು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದರು. ಹೀಗಾಗಿ ವಿಧಾನಸಭೆಯಲ್ಲಿ ಬಿಜೆಪಿ ಮಾಡಿದ್ದ ಉಪಕಾರಕ್ಕೆ ಪ್ರತಿಯಾಗಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್, ಪ್ರತಾಪಸಿಂಹ ಪರ ಮತ ಚಲಾವಣೆಯಾಗುವಂತೆ ಮಾಡುವ ಮೂಲಕ ಋಣ ತೀರಿಸಿದೆ ಎನ್ನಲಾಗುತ್ತಿದೆ.

ಹೀಗಾಗಿ ಬಿಜೆಪಿಗೆ ಕ್ಷೇತ್ರದಲ್ಲಿ 22150 ಮತಗಳ ಬಾರಿ ಮುನ್ನಡೆಯನ್ನೇ ನೀಡಲಾಗಿದೆ. ಪ್ರತಾಪಸಿಂಹ ಅವರಿಗೆ 111365 ಮತಗಳು ಬಂದರೆ, ಮೈತ್ರಿ ಅಭ್ಯರ್ಥಿ ಕಾಂಗ್ರೆಸ್‌ನ ಸಿ.ಎಚ್.ವಿಜಯಶಂಕರ್ ಅವರಿಗೆ 89215 ಮತಗಳು ಲಭಿಸಿವೆ.