ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕ್ಷೀಣ

ಮೈಸೂರು: ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ದಿನೇ ದಿನೆ ಕ್ಷೀಣಿಸುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಎಸ್.ಜಿ.ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ರಾಮಕೃಷ್ಣ ನಗರದ ನೃಪತುಂಗ ಕನ್ನಡ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಹತ್ತು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಶೇ.27ರಷ್ಟು ಇತ್ತು. ಇದೀಗ ಶೇ.20ರಿಂದ 21ಕ್ಕೆ ಕುಸಿತ ಕಂಡಿದೆ. ಇನ್ನು ಕನ್ನಡದ ಶಾಲೆಗಳು ಬೆಂಗಳೂರಿನಲ್ಲಿ ಎಷ್ಟಿವೆ ಎಂಬುದನ್ನು ನೋಡಿದರೆ ಪ್ರತಿಯೊಬ್ಬರನ್ನು ಬೆಚ್ಚಿಬೀಳಿಸುವ ಅಂಕಿ ಅಂಶ ದೊರೆಯುತ್ತದೆ ಎಂದರು.

ಒಕ್ಕೂಟ ವ್ಯವಸ್ಥೆಯಲ್ಲಿ ವಲಸೆಯನ್ನು ವಿರೋಧಿಸುವಂತಿಲ್ಲ. ಆದರೆ, ವಲಸೆ ಅತಿಯಾದರೆ ಪ್ರಾದೇಶಿಕ ಅಸ್ಮಿತೆ ನಾಶವಾಗುತ್ತದೆ. ಕೇವಲ ವಲಸೆಯಿಂದ ಮಾತ್ರವಲ್ಲ ಇತ್ತೀಚಿನ ಕೆಲವು ಬೆಳವಣಿಗೆಯಲ್ಲಿ ಕನ್ನಡದ ಅಸ್ಮಿತೆ ನಿರಂತರವಾಗಿ ನಾಶವಾಗುತ್ತಿದೆ. ಕನ್ನಡದ ಅಸ್ಮಿತೆಯಾಗಿದ್ದ ಎಸ್‌ಬಿಎಂ ಕರಗಿ ಹೋಗಿದೆ. ಇದೇ ರೀತಿ ಕನ್ನಡದ ಹಲವು ಬ್ಯಾಂಕ್‌ಗಳನ್ನು ನಷ್ಟದಲ್ಲಿರುವ ಬ್ಯಾಂಕ್‌ಗಳೊಂದಿಗೆ ವಿಲೀನ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಕ್ಕಳ ಬೌದ್ಧಿಕ ವಿಕಸನಕ್ಕೆ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕೆಂಬುದು ಜಾಗತಿಕ ಸತ್ಯ. ಆದರೆ, ಬಹುತ್ವದ ಭಾರತದಲ್ಲಿ ಪ್ರಾದೇಶಿಕ ಭಾಷೆಗಳು ನಾಶವಾಗುತ್ತಿವೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವಿವಿಧ ರಂಗಗಳಲ್ಲಿ ಆಂಗ್ಲಭಾಷೆ ಮತ್ತು ಹಿಂದಿ ಮಾತ್ರ ಬಳಕೆಯಾಗುತ್ತಿವೆ. ಇದರ ಬಗ್ಗೆ ರಾಜ್ಯದ ಯಾವುದೇ ಸಂಸದರು ತಲೆ ಕೆಡಿಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *