ತಾಯಿ ಆಶೀರ್ವಾದದಿಂದ ಮೆರವಣಿಗೆ ಯಶಸ್ವಿ

ಮೈಸೂರು: ಜಂಬೂ ಸವಾರಿ ಮೆರವಣಿಗೆ ವೇಳೆ ಅಂಬಾರಿ ಸ್ವಲ್ಪ ವಾಲಿತಾದರೂ, ಅರ್ಜುನನೇ ಅದನ್ನು ಸರಿಪಡಿಸಿಕೊಂಡು ಮುಂದೆ ಸಾಗಿದ. ಚಾಮುಂಡೇಶ್ವರಿ ತಾಯಿ ಮತ್ತು ಅರ್ಜುನನ ಆಶೀರ್ವಾದದಿಂದ ಜಂಬೂ ಸವಾರಿ ಮೆರವಣಿಗೆ ಯಶಸ್ವಿಯಾಗಿ ನಡೆಯಿತು…

ಅಂಬಾರಿ ಆನೆ ಅರ್ಜುನನ ಮಾವುತ ವಿನು ‘ವಿಜಯವಾಣಿ’ಯೊಂದಿಗೆ ತಮ್ಮ ಖುಷಿ ಹಂಚಿಕೊಂಡ ಪರಿ ಇದು.
ಲಕ್ಷಾಂತರ ಜನರು ನೆರೆದಿರುವ ಜಾಗದಲ್ಲಿ ಅಂಬಾರಿ ಹೊತ್ತ ಆನೆಯನ್ನು ಮುನ್ನಡೆಸುವುದು ಸಣ್ಣ ಕೆಲಸವಲ್ಲ. ಇದು ಆನೆ ಅಥವಾ ಹುಲಿ ಓಡಿಸುವಷ್ಟು ಸುಲಭದ ಕೆಲಸವಲ್ಲ. ಹಾಗಾಗಿ ದೇವರು, ಜನರ ಆಶೀರ್ವಾದದಿಂದ ಜಂಬೂಸವಾರಿ ಮೆರವಣಿಗೆ ಯಶಸ್ವಿಯಾಗಿ ಮುಗಿದಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಮೊದಲ ಬಾರಿಗೆ ನಾನು ಅಂಬಾರಿ ಆನೆ ಅರ್ಜುನನನ್ನು ಮುನ್ನಡೆಸಿದ್ದಾಗ ಸಾಕಷ್ಟು ಆತಂಕ ಎದುರಾಗಿತ್ತು. ಆ ಸಂದರ್ಭ ನನಗೆ ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಧೈರ್ಯ ತುಂಬಿದರು. ಹಾಗಾಗಿ ಯಶಸ್ವಿಯಾಗಿ ಮೂರು ವರ್ಷ ಮುನ್ನಡೆಸಲು ಸಾಧ್ಯವಾಯಿತು. ಕಳೆದ ಎರಡು ವರ್ಷಗಳಲ್ಲಿದ್ದ ಆತಂಕ ಈ ಬಾರಿ ಇರಲಿಲ್ಲ ಎಂದರು.

ಅಂಬಾರಿ ಕಟ್ಟುವ ಸ್ಥಳದಲ್ಲಿ ಅರ್ಜುನ ಬೆಚ್ಚಿದ ಕಾರಣ ಮೆರವಣಿಗೆಯ ಆರಂಭದಲ್ಲೇ ಅಂಬಾರಿ ಸ್ವಲ್ಪ ವಾಲಿತು. ಆದರೆ ಅರ್ಜುನನೇ ಅದನ್ನು ಬ್ಯಾಲೆನ್ಸ್ ಮಾಡಿಕೊಂಡು ಸರಿಪಡಿಸಿಕೊಳ್ಳುವ ಮೂಲಕ ಯಾವುದೇ ಸಮಸ್ಯೆಯಾಗದ ರೀತಿ ಬನ್ನಿಮಂಟಪದವರೆಗೆ ಸಾಗಿದ ಎಂದು ವಿನು ತಿಳಿಸಿದರು.

ರಾತ್ರಿ ಅರ್ಜುನನೊಂದಿಗೆ ಮಾತನಾಡಿದ್ದೆ!: ಜಂಬೂ ಸವಾರಿಯ ಹಿಂದಿನ ದಿನದಂದು ರಾತ್ರಿ 2.30ರವರೆಗೂ ನಾನು ಮತ್ತು ಅರ್ಜುನ ಮಲಗಿರಲಿಲ್ಲ. ಅಷ್ಟು ಹೊತ್ತು ನಾನು ಅರ್ಜುನನ ಜತೆ ಮಾತನಾಡುತ್ತಿದ್ದೆ. ಈ ಬಾರಿಯೂ ಯಾವುದೇ ತೊಂದರೆ ಇಲ್ಲದೆ ಜಂಬೂ ಸವಾರಿ ಮೆರೆವಣಿಗೆಯನ್ನು ಪೂರ್ಣಗೊ ಳಿಸುವಂತೆ ಆತನಲ್ಲಿ ಬೇಡಿಕೊಂಡಿದ್ದೆ. ಅದರಂತೆಯೇ ಯಶಸ್ವಿಯಾಗಿ ಪೂರ್ಣಗೊಳಿಸಿದ ಎಂದು ಹೇಳಿದರು.

ಅಂಬಾರಿ ಕಟ್ಟುವಾಗ ಸಣ್ಣ ಸಮಸ್ಯೆಯಿಂದಾಗಿ ಅಂಬಾರಿ ವಾಲಿತಷ್ಟೇ. ಯಾವುದೇ ದೊಡ್ಡ ಸಮಸ್ಯೆಯಾಗಿಲ್ಲ. ಕಾರಣಾಂತರಗಳಿಂದ ಹೊಸ ಆನೆಗಳಾದ ಈಶ್ವರ, ಜೈ ಪ್ರಕಾಶ್, ಲಕ್ಷ್ಮೀ ಆನೆಗಳನ್ನು ಮೆರವಣಿಗೆಯಲ್ಲಿ ಭಾಗವಹಿಸಲು ಅವಕಾಶ ನೀಡಲಿಲ್ಲ. ಯಾವುದೇ ಸಮಸ್ಯೆಯಾಗದ ರೀತಿ ಜಂಬೂ ಸವಾರಿ ಮೆರವಣಿಗೆ ನಡೆದಿದೆ. ಇದಕ್ಕೆ ಕಾರಣರಾದ ಮಾವುತ, ಕಾವಾಡಿಗಳು ಮತ್ತು ಎಲ್ಲ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ.
ಅಲೆಗ್ಸಾಂಡರ್ ಡಿಸಿಎಫ್

Leave a Reply

Your email address will not be published. Required fields are marked *