ಅರ್ಜುನ ಕರ್ಣನನ್ನು ಸಂಹರಿಸಿದ್ದು ಅಧರ್ಮವಲ್ಲ

ಮೈಸೂರು: ಧರ್ಮ ವಿರೋಧಿ ಕೃತ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಕರ್ಣನ ಸಂಹಾರ ಅಧರ್ಮವಲ್ಲ ಎಂದು ಬೆಂಗಳೂರಿನ ಪೂರ್ಣಪ್ರಜ್ಞಾ ಪೀಠದ ಪ್ರಾಧ್ಯಾಪಕ ಐತರೇಯ ಆಚಾರ್ಯ ಅಭಿಪ್ರಾಯಪಟ್ಟರು.

ನಗರದ ಸರಸ್ವತಿಪುರಂನ ಶ್ರೀ ಕೃಷ್ಣಧಾಮದ ರಜತ ಮಹೋತ್ಸವ ಪ್ರಯುಕ್ತ ಭಾನುವಾರ ‘ಶ್ರೀ ಕೃಷ್ಣನ ನಿರ್ದೋಷಿತ್ವ’ ವಿಷಯದ ಕುರಿತು ಹಮ್ಮಿಕೊಂಡಿದ್ದ ವಿದ್ವತ್‌ಗೋಷ್ಠಿಯಲ್ಲಿ ಬೆಂಗಳೂರಿನ ಸಂಸ್ಕೃತ ಪ್ರಾಧ್ಯಾಪಕ ಗುರು ಪವನಾಚಾರ್ಯ ಅವರ ಪ್ರಶ್ನೆಗೆ ಉತ್ತರಿಸಿದರು.

ರಣರಂಗದಲ್ಲಿ ಹೂತುಕೊಂಡ ರಥದ ಚಕ್ರ ಮೇಲೆತ್ತಲು ಕರ್ಣ ನಡೆಸುತ್ತಿದ್ದ ಹೋರಾಟದ ಸಂದರ್ಭ ಕೃಷ್ಣನ ಆದೇಶದಂತೆ ಅರ್ಜುನ ಕರ್ಣನನ್ನು ಸಂಹಾರ ಮಾಡಿದ. ಇದು ಧರ್ಮದ ಮಾರ್ಗವೇ? ಶಸ್ತ್ರವಿಲ್ಲದ ಕರ್ಣನ ಮೇಲೆ ಬಾಣ ಹೂಡಲು ನಿರ್ದೇಶನ ನೀಡಿದ ಶ್ರೀಕೃಷ್ಣ ನಿರ್ದೋಷಿಯಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಐತರೇ ಆಚಾರ್ಯ, ದುರ್ಯೋದನನ ಮಾಸ್ಟರ್‌ಮೈಂಡ್ ಕರ್ಣ ಆಗಿದ್ದ. ಆದರೆ, ಸಾಕಷ್ಟು ಜನರು ಧರ್ಮ, ಅಧರ್ಮದ ಅರ್ಥ ಗೊತ್ತಿಲ್ಲದೆ ಕೃಷ್ಣನ ಕುರಿತು ಮಾತನಾಡುತ್ತಾರೆ. ಕರ್ಣ ದುರ್ಯೋದನನ ಜತೆಗೂಡಿ ಹಲವು ಅಧರ್ಮ ಕಾರ್ಯಗಳನ್ನು ಮಾಡಿದ. ಪಗಡೆಯಾಟದಲ್ಲಿ ಪಾಂಡವರು ಸೋತು, ದುಶ್ಯಾಸನ ದ್ರೌಪದಿಯ ಸೀರೆ ಸೆಳೆಯುವಾಗ ಕರ್ಣ ಗಹಗಹಿಸಿ ನಗುತ್ತಿದ್ದ. ಪಾಂಡವರು ವನವಾಸದಲ್ಲಿದ್ದಾಗ ಅಂಗಿನರಮನೆಗೆ ಬೆಂಕಿ ಇಡುವಾಗ ದುರ್ಯೋದನನ ಜತೆಗೆ ಕರ್ಣ ಕೈ ಜೋಡಿಸಿದ್ದ. ಇದನ್ನು ಧರ್ಮ ಕಾರ್ಯ ಎನ್ನಲು ಸಾಧ್ಯವೇ? ದುಷ್ಟರನ್ನು ಸಂಹಾರ ಮಾಡುವಾಗ ಧರ್ಮ, ಅಧರ್ಮ ಎಂದು ಆಲೋಚಿಸುವುದು ಸರಿಯಲ್ಲ ಎಂದರು.

ಕೃಷ್ಣ ಬಾಲ್ಯದಲ್ಲಿ ಗೋಪಿಕೆಯರ ವಸ್ತ್ರ ಅಪಹರಿಸಿದ್ದು, ವಸ್ತ್ರ ನೀಡಲು ಸತಾಯಿಸಿದ್ದು ಎಷ್ಟು ಸರಿ? ಕೃಷ್ಣನ ಈ ನಡವಳಿಕೆಯಿಂದ ಆತನ ಮೇಲೆ ಭಕ್ತಿ ಮೂಡಲು ಹೇಗೆ ಸಾಧ್ಯ ಎಂಬ ಗುರು ಪವನಾಚಾರ್ಯ ಪ್ರಶ್ನೆಗೆ ಉತ್ತರಿಸಿದ ಐತರೇಯ ಆಚಾರ್ಯ, ಅವರ ಪ್ರಶ್ನೆಯಲ್ಲಿಯೇ ಉತ್ತರ ಇದೆ. ಕೃಷ್ಣ ಗೋಪಿಕೆಯರ ವಸ್ತ್ರ ಅಪಹರಿಸಿದ್ದು ಬಾಲ್ಯದಲ್ಲಿ. ಬಾಲ್ಯದಲ್ಲಿ ಆತನಲ್ಲಿ ಕಾಮನೆಗಳು ಬರಲು ಹೇಗೆ ಸಾಧ್ಯ? ಎಲ್ಲದಕ್ಕೂ ಒಂದು ವಯಸ್ಸು ಎಂಬುದು ಇರುವುದಿಲ್ಲವೇ? ಗೋಪಿಕೆಯರು ವಿವಸ್ತ್ರವಾಗಿ ನದಿಯಲ್ಲಿ ಸ್ನಾನ ಮಾಡುವುದು ತಪ್ಪು. ಈ ತಪ್ಪನ್ನು ಅವರಿಗೆ ತೋರಿಸುವ ಸಲುವಾಗಿ ವಸ್ತ್ರ ಅಪಹರಣ ಮಾಡಿದ ಎಂದು ಸಮರ್ಥಿಸಿಕೊಂಡರು.

16 ಸಾವಿರ ಸ್ತ್ರೀಯರನ್ನು ವಿವಾಹವಾಗಲು ಸಾಧ್ಯವೇ? ಅದು ಧರ್ಮವೇ ಎಂಬ ಪ್ರಶ್ನೆಗೆ ಉತ್ತರಿಸಿದ ಐತರೇಯ ಆಚಾರ್ಯ, ನರಕಾಸುರನ ಬಂಧನಕ್ಕೆ ಒಳಗಾಗಿದ್ದ 16 ಸಾವಿರ ಕನ್ಯೆಯರಿಗೆ ಕೃಷ್ಣ ಮುಕ್ತಿ ನೀಡಿದ. ಈ ಸಂದರ್ಭ ಕುಟುಂಬಕ್ಕೆ ಹೆದರಿದ ಕನ್ಯೆಯರು ತಮ್ಮನ್ನು ವಿವಾಹವಾಗುವಂತೆ ಕೃಷ್ಣನನ್ನು ಒತ್ತಾಯಿಸಿದರು. 16 ಸಾವಿರ ಕನ್ಯೆಯರನ್ನು ವಿವಾಹವಾಗಿ ಸಾಕುವ ಶಕ್ತಿ ಆತನಲ್ಲಿ ಇತ್ತು. ಇದನ್ನು ಧರ್ಮದ ಹೊರತಾಗಿ ಬೇರೆ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದರು.

ಚೆನ್ನೈ ಸಂಸ್ಕೃತ ಪ್ರಾಧ್ಯಾಪಕ ಡಾ.ಕೆ.ಎಸ್.ಸುಮನಾಚಾರ್ಯ ಮತ್ತು ಬೆಂಗಳೂರು ಸಂಸ್ಕೃತ ಪ್ರಾಧ್ಯಾಪಕ ಡಾ.ಕೆ.ಎಸ್. ಸುನೀಲಾಚಾರ್ಯ ಅವರು ‘ಧರ್ಮ ಕರ್ಮಗಳ ಮರ್ಮ’ ವಿಷಯದ ಕುರಿತು ವಿದ್ವತ್‌ಗೋಷ್ಠಿ ನಡೆಸಿಕೊಟ್ಟರು.