ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ

ಮೈಸೂರು: ಅಕ್ಕಮಹಾದೇವಿ ವಿಚಾರಧಾರೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಬೇಕಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಜ್ಯೋತಿ ತಿಳಿಸಿದರು.

ಮೈಸೂರು ಶರಣ ಮಂಡಳಿ ವತಿಯಿಂದ ನಗರದ ಕಸಾಪ ಆವರಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ‘ಅಕ್ಕಮಹಾದೇವಿ ಜಯಂತಿ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಕ್ಕಮಹಾದೇವಿ ಎಲ್ಲವನ್ನು ತೊರೆದು, ವೈರಾಗಿಯಾಗಿ ಸಮಾಜದ ಅಂಕುಡೊಂಕುಗಳನ್ನು ತಮ್ಮ ವಚನಗಳ ಮೂಲಕ ತಿದ್ದುವ ಪ್ರಯತ್ನ ಮಾಡಿದರು. ಇದರೊಂದಿಗೆ ಉತ್ತಮ ಸಮಾಜವನ್ನು ಕಟ್ಟುವ ಕೆಲಸ ಮಾಡಿದರು. ಜತೆಗೆ, ಜೀವನ ಮೌಲ್ಯವನ್ನೂ ಸಾರಿದರು ಎಂದರು.

ವಚನ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ. ಜೀವಪರವಾಗಿರುವ ಅವರ ತತ್ವಾದರ್ಶವನ್ನು ಜನರು ಅರ್ಥೈಸಿಕೊಳ್ಳಬೇಕು. ಮನುಕುಲದ ಕಲ್ಯಾಣಕ್ಕಾಗಿ ಕೆಲಸ ಮಾಡುವುದು ನಿಜವಾದ ಸೇವೆ. ಈ ವಿಷಯದಲ್ಲಿ ಅಕ್ಕಮಹಾದೇವಿ ಮಾದರಿಯಾಗಿದ್ದಾರೆ ಎಂದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಉಪನಿರ್ದೇಶಕಿ ಡಾ.ಟಿ.ಸಿ. ಪೂರ್ಣಿಮಾ ಮಾತನಾಡಿ, ಅಕ್ಕಮಹಾದೇವಿ ಸ್ತ್ರೀವಾದಿಯಷ್ಟೇ ಅಲ್ಲ, ಅವರು ಮಾನವತವಾದಿ. ಆಧ್ಯಾತ್ಮಿಕ ಸ್ಪರ್ಶವಿಲ್ಲದ ಜೀವನವು ವ್ಯರ್ಥ ಎಂದು ಅವರು ಪ್ರತಿಪಾದಿಸಿದ್ದರು ಎಂದರು.

ಸಮಾಜ ಸೇವಕರಾದ ಡಾ.ಎ.ಪುಷ್ಪಾ ಅಯ್ಯಂಗಾರ್, ಎಂ.ಸಿ. ಪ್ರಭಾಮಣಿ ಅವರಿಗೆ ‘ಅಕ್ಕಮಹಾದೇವಿ ಸೇವಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಡಾ.ವೈ.ಡಿ.ರಾಜಣ್ಣ, ದಾಸ್ತಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಡಿ.ತಿಮ್ಮಯ್ಯ, ಸಂಸ್ಕೃತಿ ಚಿಂತಕ ಹೆಳವರಹುಂಡಿ ಸಿದ್ದಪ್ಪ ಇನ್ನಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *