23 ವಾರ್ಡ್‌ಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ

ಪಿರಿಯಾಪಟ್ಟಣ: ಪುರಸಭೆಯ 23ವಾರ್ಡ್‌ಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಸಚಿವ ಜಮೀರ್ ಅಹಮ್ಮದ್ ಸಲಹೆ ನೀಡಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಪುರಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದಲ್ಲಿ ಪಟ್ಟಣದಲ್ಲಿ ಹೆಚ್ಚು ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಸ್ಲಿಂ ಸಮಾಜದ ಮತದಾರರು ಬೇರೆ ಯಾವ ರಾಜಕಾರಣಿಗೂ ನೀಡದಂತಹ ಪ್ರೀತಿಯನ್ನು ನನಗೆ ತೋರುತ್ತಿದ್ದಾರೆ. ನಾನು ಮುಸಲ್ಮಾನನಾದರೂ ಮೊದಲು ಹಿಂದೂಸ್ಥಾನಿ, ಕನ್ನಡಿಗ ಆಗಿದ್ದೇನೆ ಎಂದು ತಿಳಿಸಿದರು.
ಅಲ್ಪ ಸಂಖ್ಯಾತರಿಗೆ ಸರ್ಕಾರದಿಂದ ನೀಡುವ ವಿವಿಧ ಸಾಲಗಳನ್ನು ಪಡೆಯಲು ಈಗ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ ಎಂದರು.
ಪಟ್ಟಣದಲ್ಲಿ ಮುಸ್ಲಿಂ ಸಮುದಾಯಕ್ಕೆ ಶಾದಿಮಹಲ್ ನಿರ್ಮಿಸಲು ಅನುದಾನ ನೀಡಬೇಕೆಂದು ಮುಖಂಡರು ಮನವಿ ಸಲ್ಲಿಸಿದಾಗ ನಿವೇಶನ ಗುರುತಿಸಿದಲ್ಲಿ ಅನುದಾನ ನೀಡುವುದಾಗಿ ತಿಳಿಸಿದ ಅವರು, ಇದು ಸಾಧ್ಯವಾಗದಿದ್ದರೆ ವೈಯಕ್ತಿಕವಾಗಿ 2 ಕೋಟಿ ರೂ. ನೀಡುವುದಾಗಿ ಘೋಷಿಸಿದರು.
ಮಾಜಿ ಶಾಸಕ ಕೆ.ವೆಂಕಟೇಶ್ ಮಾತನಾಡಿ, ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ 100 ಕೋಟಿ ರೂ.ಗೂ ಹೆಚ್ಚು ಅನುದಾನ ತರಲಾಗಿದೆ ಎಂದು ಹೇಳಿದರು.
ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ, ಬಸ್‌ಡಿಪೋ, ಮಿನಿ ವಿಧಾನಸೌಧ, ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಅರಸು ಭವನ, ಪುರಸಭೆ ನೂತನ ಕಟ್ಟಡ ಸೇರಿ ಪ್ರಮುಖ ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದು ತಿಳಿಸಿದರು.
ಹಾಲಿ ಶಾಸಕ ಪಿರಿಯಾಪಟ್ಟಣವನ್ನು ಮಾದರಿ ಪಟ್ಟಣವನ್ನಾಗಿ ಮಾಡುತ್ತೇನೆಂದು ಬುರುಡೆ ಬೀಡುತ್ತಿದ್ದಾರೆ ಎಂದು ಟೀಕಿಸಿದ ಅವರು ಯಾವುದೇ ಕಾರ್ಯಕ್ರಮಗಳ ಮಾರ್ಗಸೂಚಿ ಇಲ್ಲದೆ ಮತದಾರರನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನಿವೇಶನ ರಹಿತರಿಗೆ ನಿವೇಶನ ನೀಡುವುದಾಗಿ ಅರ್ಜಿ ಪಡೆಯುತ್ತಿರುವ ಅವರು ನಿವೇಶನಕ್ಕೆ ಜಾಗವನ್ನೇ ಖರೀದಿಸದೆ ಜನರನ್ನು ಮರುಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಕೆಪಿಸಿಸಿ ಸದಸ್ಯ ಪಿ.ಎಂ.ಶಾಹಿದ್, ಸಚಿವರ ಸಹೋದರ ಶಕೀಲ್‌ಅಹಮ್ಮದ್, ಮುಖಂಡರಾದ ರಹಮತ್‌ಜಾನ್‌ಬಾಬು, ಮಹಮ್ಮದ್‌ಶಫೀ, ಬಿ.ಜೆ.ಬಸವರಾಜು, ಪಿ.ಎನ್.ಚಂದ್ರಶೇಖರ ಇದ್ದರು.
ಬಹುತೇಕ ಮುಸ್ಲಿಂ ಸಮಾಜದ ಮತದಾರರೆ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಉರ್ದುವಿನಲ್ಲಿ ಸಚಿವ ಜಮೀರ್ ಅಹಮ್ಮದ್ ಮಾತನಾಡಿದರು.