ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ ಭರದ ಸಿದ್ಧತೆ

22ರಿಂದ ಜಾತ್ರೆ 15 ಕಡೆ ಸಿಸಿ ಕ್ಯಾಮರಾ ಅಳವಡಿಕೆ ಮೊಬೈಲ್ ಶೌಚಗೃಹ ನಿರ್ಮಾಣ

ಹೂವಿನಹಡಗಲಿ: ತಾಲೂಕಿನ ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಫೆ.22ರಂದು ನಡೆಯಲಿದ್ದು ಜಾತ್ರೆಗೆ ಜಿಲ್ಲಾಡಳಿತ, ತಾಲೂಕು ಆಡಳಿತ, ಭರದ ಸಿದ್ಧತೆ ನಡೆಸಿದೆ.

ಜಾತ್ರೆಗೆ ಬರುವ ಭಕ್ತರಿಗಾಗಿ ಕುಡಿವ ನೀರು, ಭದ್ರತೆ ಹಾಗೂ ಮೂಲ ಸೌಲಭ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಲಾಗಿದೆ. ಭದ್ರತೆ ದೃಷ್ಟಿಯಿಂದ ಮೈಲಾರದಲ್ಲಿ 15 ಕಡೆ ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ನಾಲ್ಕುಕಡೆ ವಾಚಿಂಗ್ ಟವರ್ ನಿರ್ಮಿಸಲಾಗಿದೆ. ದೇವಸ್ಥಾನದಲ್ಲಿ ನಡೆಯುವ ಪ್ರಸಾದದ ಸ್ಥಳದಲ್ಲಿ ನಾಲ್ಕು ಜನ ವೈದ್ಯರ ತಂಡ, ಬಿಸಿಯೂಟದ ಅಧಿಕಾರಿ ಸಿ.ಜೆ.ಮಲ್ಲಪ್ಪ ಅವರನ್ನು ನೇಮಿಸಲಾಗಿದೆ. ಪ್ರಸಾದದ ವ್ಯವಸ್ಥೆಯಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಮುಂಜಾಗ್ರತವಾಗಿ ಸಿಬ್ಬಂದಿ ನೇಮಿಸಲಾಗಿದೆ.

ದೇವಸ್ಥಾನದಲ್ಲಿ ಹೆಲ್ಪ್‌ಲೈನ್ ಪ್ರಾರಂಭಿಸಲಾಗಿದೆ. ಜಾತ್ರೆಗೆ ನಿಯೋಜಿಸಲಾದ ಎಲ್ಲ ಸಿಬ್ಬಂದಿಗೂ ಸಂಪರ್ಕ ಸಾಧನೆಗಾಗಿ ವಾಕಿಟಾಕಿಗಳ ವ್ಯವಸ್ಥೆ ಮಾಡಲಾಗಿದೆ. ಜಾನುವಾರುಗಳಿಗೆ ಅವಶ್ಯವೆನಿಸಿದ ಸ್ಥಳಗಳಲ್ಲಿ ನೀರಿನ ತೊಟ್ಟಿ ನಿರ್ಮಿಸಲಾಗಿದೆ. ಜಾತ್ರೆಗೆ ಬರುವ ಭಕ್ತಾಧಿಗಳಿಗೆ ನಾಲ್ಕು ಕಡೆ ಶುದ್ಧ ಕುಡಿವ ನೀರಿನ ಘಟಕಗಳನ್ನು ಪ್ರಾರಂಭಿಸಲಾಗಿದೆ.

ಹಂಪಿಯ ಮೊಬೈಲ್ ಶೌಚಗೃಹಗಳನ್ನು ಜಾತ್ರೆಗೆ ನಿಯೋಜಿಸಲಾಗಿದೆ. ತಾತ್ಕಾಲಿಕವಾಗಿ 400 ಶೌಚಗೃಹ, ನದಿಯಲ್ಲಿ ಮೂರು ಜನ ಈಜುಗಾರರನ್ನು ನೇಮಿಸಲಾಗಿದೆ. ಎರಡು ಬೋಟ್‌ಗಳ ವ್ಯವಸ್ಥೆ ಮಾಡಲಾಗಿದೆ. ಎರಡು ಅಗ್ನಿಶಾಮಕ ದಳದ ವಾಹನಗಳು, ಸ್ಥಳದಲ್ಲಿಯೇ ಬೀಡುಬಿಡಲಿವೆ. ಈಗಾಗಲೇ ಸೋಮವಾರದಿಂದಲೇ ಜಿಲ್ಲೆಗಳಿಂದ ಸಾವಿರಾರು ಭಕ್ತರು ಮೈಲಾರಕ್ಕೆ ಪಾದಯಾತ್ರೆ, ಎತ್ತಿನ ಬಂಡಿ, ಟ್ರ್ಯಾಕ್ಟರ್ ಹಾಗೂ ಇತರ ವಾಹನಗಳ ಮೂಲಕ ಜಾತ್ರೆಗೆ ಆಗಮಿಸುತ್ತಿದ್ದಾರೆ.

ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಭಕ್ತರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ನಿರ್ವಹಣೆಗಾಗಿ ಸಿಬ್ಬಂದಿ ನೇಮಿಸಲಾಗಿದೆ.
|ಕೆ.ರಾಘವೇಂದ್ರರಾವ್ ತಹಸೀಲ್ದಾರ್ ಹೂವಿನಹಡಗಲಿ

ಮೈಲಾರ ಕಾರ್ಣಿಕ ನುಡಿಗೆ ತಂತ್ರಜ್ಞಾನ ಅಳವಡಿಕೆ
ಸುಕ್ಷೇತ್ರ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವದಲ್ಲಿ ಸ್ವಾಮಿಯ ಕಾರ್ಣಿಕ ನುಡಿ ಮುದ್ರಿಸಿಕೊಳ್ಳಲು ಈ ಬಾರಿ ಸೂಕ್ಷ್ಮ ತಂತ್ರಜ್ಞಾನ ಅಳವಡಿಸುವುದಾಗಿ ದೇವಸ್ಥಾನ ಸಮಿತಿ ಇಒ ಎಂ.ಎಚ್.ಪ್ರಕಾಶ್‌ರಾವ್ ಹೇಳಿದರು.
ಕಳೆದ ವರ್ಷ ಕಾರ್ಣಿಕದ ನುಡಿ ಅಸ್ಪಷ್ಟವಾಗಿದ್ದರಿಂದ ನಾಡಿನ ಭಕ್ತಾಧಿಗಳಿಗೆ ಗೊಂದಲ ಉಂಟಾಗಿತ್ತು. ಅಂದು ಅಂತಿಮವಾಗಿ ಜಿಲ್ಲಾಡಳಿತ ಆಡಿಯೋ ರೆಕಾರ್ಡಿಂಗ್ ಧ್ವನಿ ಪರೀಕ್ಷೆ ನಡೆಸಿದ ಬಳಿಕ ಅಧಿಕೃತ ಕಾರ್ಣಿಕದ ನುಡಿಯನ್ನು ತಾಲೂಕು ಆಡಳಿತ, ದೇವಸ್ಥಾನ ಕಮಿಟಿ ಪ್ರಕಟಿಸಿತ್ತು. ಈ ಬಾರಿ ಕಾರ್ಣಿಕ ನಡೆಯುವ ಡೆಂಕನಮರಡಿ ಸ್ಥಳದಲ್ಲಿ 20 ಲೈನರ್ ಸ್ಪೀಕರ್ ಮೂವಿಂಗ್ ಕ್ಯಾಮರಾ ಅಳವಡಿಸಲಾಗುವುದು ಎಂದು ಹೇಳಿದರು.

ಗೊರವಯ್ಯನಿಗೆ ಸೂಕ್ಷ್ಮ ಧ್ವನಿ ಗ್ರಹಿಸುವ ಮೈಕ್ರೋಪೋನ್ ಜೋಡಣೆ ಮಾಡಲಾಗುವುದು. ಇವೆಲ್ಲವನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರ ಕಾರ್ಣಿಕ ನುಡಿಯನ್ನು ಪ್ರಕಟಿಸಲಾಗುವುದು. ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯನ್ನು ಭಕ್ತರು ಶಿವನ ಭವಿಷ್ಯವಾಣಿ ಎಂದೇ ನಂಬಿದ್ದಾರೆ. ಪ್ರಚಲಿತ ವರ್ಷದ ಮಳೆ-ಬೆಳೆ, ವಾಣಿಜ್ಯ, ವ್ಯವಹಾರ, ಸಾಮಾಜಿಕ, ರಾಜಕೀಯ ಸ್ಥಿತಿ-ಗತಿಗಳಿಗೆ ಹೋಲಿಕೆ ಮಾಡುತ್ತಾರೆ. ಆದ್ದರಿಂದ ಕಾರ್ಣಿಕ ನುಡಿಯನ್ನು ಸ್ಪಷ್ಟವಾಗಿ ಕೇಳಿಸಲು ಎಲ್ಲ ಸಿದ್ಧತೆ ಕೈಗೊಳ್ಳಾಗುವುದು ಎಂದು ತಿಳಿಸಿದರು.