ಗೊರವಯ್ಯ ರಾಮಣ್ಣರ ಪರ ತೀರ್ಪು, ಭದ್ರತೆ ನಡುವೆ ಮೈಲಾರ ಸುಕ್ಷೇತ್ರದಲ್ಲಿ ದೀಕ್ಷೆ

ಹೂವಿನಹಡಗಲಿ: ಮೈಲಾರ ಕಾರ್ಣಿಕ ನುಡಿಯುವ ಗೊರವಯ್ಯರ ಆಯ್ಕೆ ವಿವಾದ ವಿಚಾರವಾಗಿ ಕಳೆದ ಬಾರಿ ಕಾರ್ಣಿಕ ನುಡಿದಿದ್ದ ಗೊರವಯ್ಯ ರಾಮಣ್ಣರ ಪರವಾಗಿ ಧಾರವಾಡ ಹೈಕೋರ್ಟ್ ಮಂಗಳವಾರ ಆದೇಶ ಮಾಡಿದೆ. ಕಳೆದ ಬಾರಿ ಸ್ಪಷ್ಟವಾಗಿ ಕಾರ್ಣಿಕ ನುಡಿದಿಲ್ಲ ಎಂಬ ಕಾರಣಕ್ಕಾಗಿ ದೇವಸ್ಥಾನದ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಈಚೆಗೆ ರಾಮಣ್ಣರ ಸಹೋದರ ಸಣ್ಣಪ್ಪರಿಗೆ ದೀಕ್ಷೆ ನೀಡಿದ್ದರು. ಇದನ್ನು ಪ್ರಶ್ನಿಸಿ ರಾಮಣ್ಣರು ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಆದೇಶದ ನಡುವೆಯೂ ಧರ್ಮದರ್ಶಿ ವೆಂಕಟಪ್ಪಯ್ಯ ಒಡೆಯರ್ ರಾಮಣ್ಣರಿಗೆ ದೀಕ್ಷೆ ನೀಡಲು ಒಪ್ಪಲಿಲ್ಲ. ಒಮ್ಮೆ ಒಬ್ಬರಿಗೆ ದೀಕ್ಷೆ ಕೊಟ್ಟ ನಂತರ ಮತ್ತೊಬ್ಬರಿಗೆ ಕೊಡಲು ಬರುವುದಿಲ್ಲ. ಇದು ವಂಶಪರಂಪರೆಯಿಂದ ಬಂದಿದ್ದು ಎನ್ನುವ ಮೂಲಕ ದೀಕ್ಷೆ ಕಾರ್ಯದಿಂದ ದೂರ ಉಳಿದರು. ನಂತರ ತಹಸೀಲ್ದಾರ್ ಕೆ.ರಾಘವೇಂದ್ರ ರಾವ್, ಡಿವೈಎಸ್ಪಿ ಹೊಸಮನಿ, ದೇವಸ್ಥಾನದ ಇಒ ಪ್ರಕಾಶ್ ರಾವ್ ಮತ್ತು ಪ್ರಮುಖರು ಸೇರಿ ಪೊಲೀಸ್ ಸರ್ಪಗಾವಲಿನಲ್ಲಿ ಪ್ರಮೋದ್ ಭಟ್‌ರಿಂದ ರಾಮಣ್ಣರಿಗೆ ದೀಕ್ಷೆ ಕೊಡಿಸಲಾಯಿತು. ಸುಕ್ಷೇತ್ರ ಮೈಲಾರ ಲಿಂಗೇಶ್ವರ ಕಾರ್ಣಿಕ ಫೆ.22ರಂದು ಜರುಗಲಿದೆ.