ದಸರಾ ವೆಬ್‌ಸೈಟ್ ಲೋಕಾರ್ಪಣೆ

ಮೈಸೂರು: ಹೊಸತನವಿಲ್ಲದ ಪ್ರಸಕ್ತ ಸಾಲಿನ ಮೈಸೂರು ದಸರಾ ಮಹೋತ್ಸವದ ವೆಬ್‌ಸೈಟ್ ಶುಕ್ರವಾರ ಲೋಕಾರ್ಪಣೆಗೊಂಡಿತು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ದಸರಾ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಇದನ್ನು ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸಿದರು.

ಇದು ಪ್ರತಿ ವರ್ಷದಂತೆಯೇ ಇದೆ. ಇದರಲ್ಲಿ ಅಂತಹ ಬದಲಾವಣೆ ಮಾಡಿಲ್ಲ. ಹಳೆ ವೆಬ್‌ಸೈಟ್ ಅನ್ನು ಯಥಾವತ್ತು ಮುಂದುವರಿಕೆ ಮಾಡಲಾಗಿದೆ. ದಸರಾ ಉದ್ಘಾಟಕರು, ಜನಪ್ರತಿನಿಧಿಗಳ ಹೆಸರು ಬದಲಾವಣೆ ಬಿಟ್ಟರೆ, ಹೊಸತು ಈ ಜಾಲತಾಣದಲ್ಲಿ ಕಾಣುವುದಿಲ್ಲ.

ದಸರೆಗೆ ಇನ್ನು 26 ದಿನ ಮಾತ್ರ ಬಾಕಿ ಇದೆ. ಈ ನಡುವೆ ಉದ್ಘಾಟನೆಗೊಂಡಿರುವ ಈ ವೆಬ್‌ಸೈಟ್‌ನಲ್ಲಿ ಪ್ರಸಕ್ತ ಸಾಲಿನ ದಸರೆ ಕುರಿತು ಸಣ್ಣ ಮಾಹಿತಿಯೂ ಇಲ್ಲ. ಯುವ ದಸರಾ, ಯುವ ಸಂಭ್ರಮ, ಆಹಾರ ಮೇಳ, ಓಪನ್ ಸ್ಟ್ರೀಟ್ ಫೆಸ್ಟಿವಲ್, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಂಬೂಸವಾರಿ ಮೆರವಣಿಗೆ ಕುರಿತು ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡುವಂತೆ ಲಿಂಕ್ ನೀಡಲಾಗಿದೆ. ಆದರೆ, ಅದನ್ನು ಕ್ಲಿಕ್ ಮಾಡಿದರೆ ‘ಶೀಘ್ರವೇ ಮಾಹಿತಿ ದೊರೆಯುವುದು’ ಎಂದು ಅಕ್ಷರಗಳು ತೆರೆದುಕೊಳ್ಳಲಿದೆ.

ಸಂಪರ್ಕಕ್ಕೆ ನೀಡಲಾಗಿರುವ ಅಧಿಕಾರಿಯೇ ವರ್ಗವಾಗಿ ಹೋಗಿದ್ದಾರೆ. ಕಲಾವಿದರು, ದಸರಾಕ್ಕೆ ಪ್ರಾಯೋಜಕತ್ವ ನೀಡಲು ಆಸಕ್ತರು ಸಂಪರ್ಕಿಸಲು ಮೂರು ಅಧಿಕಾರಿಗಳ ಹೆಸರು ನೀಡಲಾಗಿದೆ. ಈ ಪೈಕಿ ಆಹಾರ ಇಲಾಖೆ ಉಪನಿರ್ದೇಶಕ ಕಾ.ರಾಮೇಶ್ವರಪ್ಪ ಹೆಸರು, ಅವರ ಮೊಬೈಲ್ ಸಂಖ್ಯೆ ಇದೆ. ಆದರೆ, ಅವರು ವರ್ಗಾವಣೆಗೊಂಡಿದ್ದು, ಅವರ ಸ್ಥಾನಕ್ಕೆ ಬೇರೆ ಅಧಿಕಾರಿ ಬಂದು ಎರಡ್ಮೂರು ತಿಂಗಳಾಗಿದೆ. ಆದರೂ, ತಪ್ಪು ಮಾಹಿತಿಯನ್ನು ಈ ತಾಣದಲ್ಲಿ ಪ್ರಕಟಿಸಲಾಗಿದೆ.

ದಸರಾ ಮಹೋತ್ಸವದ ಪೋಸ್ಟರ್ ಕೂಡ ಇದೇ ವೇಳೆ ಬಿಡುಗಡೆ ಮಾಡಲಾಯಿತು. ಸಚಿವರಾದ ಸಾ.ರಾ.ಮಹೇಶ್, ಪುಟ್ಟರಂಗಶೆಟ್ಟಿ, ಎನ್.ಮಹೇಶ್, ಶಾಸಕರಾದ ಎಲ್.ನಾಗೇಂದ್ರ, ಹರ್ಷವರ್ಧನ್, ಕೆ.ಮಹದೇವು ಹಾಜರಿದ್ದರು.

Leave a Reply

Your email address will not be published. Required fields are marked *