ಮ್ಯಾನ್ಮಾರ್ ಮಹಿಳೆ ಜೀವ ಉಳಿಸಿದ ಕರ್ನಾಟಕದ ರಕ್ತ

ಬೆಂಗಳೂರು: ಕರ್ನಾಟಕದ ಬ್ಲಡ್ ಬ್ಯಾಂಕ್​ನಲ್ಲಿ ಸಂಗ್ರಹವಾಗಿದ್ದ ಬಾಂಬೆ ಬ್ಲಡ್​ಅನ್ನು ಕೊರಿಯರ್ ಮಾಡುವ ಮೂಲಕ ಮ್ಯಾನ್ಮಾರ್ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಯೊಬ್ಬರ ಜೀವ ಉಳಿದಿದೆ.

ಬಾಂಬೆ ರಕ್ತ ವಿಶ್ವದಲ್ಲೇ ಅಪರೂಪದ ಗುಂಪಿನ ರಕ್ತವಾಗಿದ್ದು, ಇದು ಮ್ಯಾನ್ಮಾರ್ ಯಾಂಗಾನ್ ಜನರಲ್ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಹಿಳೆಗೆ ತುರ್ತಾಗಿ ಬೇಕಿತ್ತು. ಆಕೆಯ ಸಂಬಂಧಿಕರು ಸುತ್ತಮುತ್ತಲ ಆಸ್ಪತ್ರೆಗಳಲ್ಲಿ ಹುಡುಕಿದರೂ ರಕ್ತ ಸಿಗದೆ ಕಂಗಲಾಗಿದ್ದರು. ಯಾಂಗಾನ್ ಜನರಲ್ ಆಸ್ಪತ್ರೆಯ ವೈದ್ಯರು ದಾವಣಗೆರೆಯ ಬ್ಲಡ್ ಬ್ಯಾಂಕ್​ಗೆ ಸಂರ್ಪಸಿ ಬಾಂಬೆ ಬ್ಲಡ್ ಗ್ರೂಪ್ ರಕ್ತದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ವೈದ್ಯರು ರೋಗಿಯ ಸಂಬಂಧಿಕರಿಗೆ ಈ ವಿಷಯ ತಿಳಿಸಿ ರಕ್ತ ತರುವಂತೆ ಸೂಚಿಸಿದ್ದರು. ಆದರೆ, ಸಂಬಂಧಿಕರು ಇಷ್ಟು ದೂರ ಪ್ರಯಾಣಿಸುವ ಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ 2 ಯೂನಿಟ್ ರಕ್ತವನ್ನು ಬ್ಲಡ್ ಬ್ಯಾಂಕಿನ ಸಿಬ್ಬಂದಿ 2-8 ಡಿಗ್ರಿ ಸೆಲ್ಸಿಯಸ್​ನಲ್ಲಿ ಸಂರಕ್ಷಿಸಿ ಕೊರಿಯರ್ ಮೂಲಕ ದಾವಣಗೆರೆಯಿಂದ ಮ್ಯಾನ್ಮಾರ್​ಗೆ 3 ದಿನದಲ್ಲಿ ತಲುಪಿಸಿದ್ದಾರೆ. ಇದರಿಂದ ಆಕೆಯ ಜೀವ ಉಳಿದಿದ್ದು, ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.

ಬಾಂಬೆ ಬ್ಲಡ್ ದಾನಿಗಳ ವಿಶೇಷ ನೋಂದಣಿ ನಡೆಸುತ್ತಿರುವ ಬೆಂಗಳೂರು ಮೂಲದ ಸಂಕಲ್ಪ ಇಂಡಿಯಾ ಫೌಂಡೇಷನ್ ಬಾಂಬೆ ಬ್ಲಡ್ ಗುಂಪಿನ ರಕ್ತದಾನಿಗಳನ್ನು ಪತ್ತೆ ಹಚ್ಚುತ್ತಿದೆ. ಮ್ಯಾನ್ಮಾರ್​ನಲ್ಲಿ ಈ ಮಾದರಿಯ ರಕ್ತದಾನಿಗಳ ಮಾಹಿತಿ ಸಿಗದ್ದರಿಂದ ಆಸ್ಪತ್ರೆಯ ವೈದ್ಯರು ನಮ್ಮನ್ನು ಸಂರ್ಪಸಿ ರಕ್ತ ನೀಡುವಂತೆ ಕೋರಿದ್ದರು. ಭಾರತದಲ್ಲಿ 10-17 ಸಾವಿರ ಜನರಲ್ಲಿ ಒಬ್ಬರಷ್ಟೇ ಬಾಂಬೆ ಬ್ಲಡ್ ಹೊಂದಿರುತ್ತಾರೆ. ಈ ರಕ್ತದ ಗುಂಪು ಮೊದಲ ಬಾರಿ 1952ರಲ್ಲಿ ಮುಂಬೈನಲ್ಲಿ ಬೆಳಕಿಗೆ ಬಂದಿತ್ತು ಎಂದು ಸಂಸ್ಥೆಯ ಸಂಚಾಲಕ ರಜತ್ ಅಗ್ರವಾಲ್ ತಿಳಿಸಿದ್ದಾರೆ.