ಅಮ್ಮ ಹುಟ್ಟಿ ಐದು ದಿನಗಳಷ್ಟೇ ಆಗಿದೆ, ನೋಡುತ್ತಿರಿ ಖಂಡಿತ ಮಂಡ್ಯ ಅಭಿವೃದ್ಧಿಯಲ್ಲಿ ಕೈ ಜೋಡಿಸುತ್ತಾರೆ : ನಟ ದರ್ಶನ್​

ಮಂಡ್ಯ: ನಾನು ಇವತ್ತು ಅಪ್ಪಾಜಿಗೆ ಹುಟ್ಟುಹಬ್ಬದ ಶುಭಾಶಯ ಹೇಳೋದಿಲ್ಲ. ಅವರಿಗೆ ವಿಶ್​ ಮಾಡಿಯಾಗಿದೆ. ಇಂದು ಮಂಡ್ಯದ ಜನತೆಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತೇನೆ ಎಂದು ನಟ ದರ್ಶನ್ ಹೇಳಿದರು.

ಸ್ವಾಭಿಮಾನಿ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ನಿಮಗೆಲ್ಲ ಧನ್ಯವಾದ ಹೇಳಿದರೆ ಅದು ತುಂಬ ಸಣ್ಣ ಪದ ಆಗುತ್ತದೆ. ನೀವು ನಮಗೂ ಹೊಸ ಹುಟ್ಟು ಕೊಟ್ಟಿದ್ದೀರಿ. ಇವತ್ತು ಇಲ್ಲಿ ನಿಂತು ಮಾತನಾಡುವ ಯೋಗ್ಯತೆ ಕೊಟ್ಟಿದ್ದೀರಿ. ಕಾರ್ಯಕರ್ತರು ಶ್ರಮಿಸಿದ್ದಾರೆ. ಪಕ್ಷಗಳನ್ನು, ಊರಿನ ಜನರನ್ನು ಎದುರು ಹಾಕಿಕೊಂಡು ನಮ್ಮ ಪರವಾಗಿ ದುಡಿದಿದ್ದಾರೆ. ನಿಮಗೆಲ್ಲರಿಗೂ ಇಲ್ಲಿಂದಲೇ ಪಾದಮುಟ್ಟಿ ನಮಸ್ಕರಿಸುತ್ತೇನೆ ಎಂದರು.

ಮತದಾರರಿಗೆ ಸಾಯುವವರೆಗೂ ಚಿರಋಣಿಯಾಗಿರುತ್ತೇನೆ. ನೋಡಿ ನಾವೆಲ್ಲ ಇವತ್ತು ಇಲ್ಲಿ ಹೆಮ್ಮೆಯಿಂದ ಕುಳಿತಿದ್ದೇವೆ. ನಿಂತು ಮಾತಾಡುತ್ತಿದ್ದೇವೆ. ಏನಾದರೂ ಇದು ಉಲ್ಟಾ ಹೊಡೆದಿದ್ದರೆ ಏನಾಗುತ್ತಿತ್ತು. ಅದಕ್ಕೆ ಹೇಳಿದ್ದು ನೀವೆಲ್ಲ ಸೇರಿ ನಮಗೆ ಪುನರ್ಜನ್ಮ ಕೊಟ್ಟಿದ್ದೀರಾ ಎಂದು ದರ್ಶನ್​ ಹೇಳಿದರು.

ನನಗೆ ಈ ವೇದಿಕೆ ಮೇಲೆ ಇರುವ ಅಪ್ಪಾಜಿಯವರ ಪೋಸ್ಟ್ ನೋಡಿದರೆ ಬೇರೆಯದ್ದೇ ಭಾವನೆ ಬರುತ್ತಿದೆ. ಏನ್ರಯ್ಯಾ ಇದ್ದಾಗಲಂತೂ ಅಷ್ಟೊಂದು ಪ್ರೀತಿ ಕೊಟ್ಟಿರಿ. ಈಗ ನಾನು ನಿಮ್ಮ ಜತೆಗಿಲ್ಲ. ಆದರೂ ಆವಾಗಿನಕ್ಕಿಂತ ಎರಡುಪಟ್ಟು ಪ್ರೀತಿ ನೀಡುತ್ತಿದ್ದೀರಾ. ಇಷ್ಟು ಸಾಕು ಕಣ್ರಯ್ಯಾ ಎಂದು ಹೇಳುತ್ತಿರುವಂತಿದೆ. ತುಂಬ ಅರ್ಥಪೂರ್ಣವಾಗಿದೆ ಎಂದು ಅಂಬರೀಷ್​ ಅವರನ್ನು ನೆನಪಿಸಿಕೊಂಡರು.

ನೀವು ನಮಗೆ ಅಂದಿನಿಂದಲೂ ಪ್ರೋತ್ಸಾಹ, ಬೆಂಬಲ ನೀಡುತ್ತ ಬಂದಿದ್ದೀರಿ. ಅಮ್ಮ ಹುಟ್ಟಿ ಈಗಾಗಲೇ ಐದು ದಿನಗಳಾಗಿದೆ ಅಷ್ಟೇ. ಅವರು ಪ್ರಮಾಣವಚನ ಸ್ವೀಕಾರ ಮಾಡಲಿ. ಎಲ್ಲ ಮುಖಂಡರ ಜತೆ ಚರ್ಚಿಸಿ ಖಂಡಿತ ಮಂಡ್ಯವನ್ನು ಅಭಿವೃದ್ಧಿಗೊಳಿಸುತ್ತಾರೆ. ಕೆಲವು ಜನರಿಗೆ ನಾವು ಅರಿವು ಮೂಡಿಸಬೇಕಾಗಿದೆ. ತಾಪಂ, ಜಿಪಂ, ಎಂಎಲ್ಎ, ಎಂಪಿಯ ಕೆಲಸಗಳು ಏನೆಂಬುದನ್ನು ಎಜ್ಯುಕೇಟ್​ ಮಾಡಬೇಕು. ಮೋರಿ ಕಟ್ಟಿದರೆ ಎಂಪಿಯನ್ನು ಕರೆಯೋಕೆ ಆಗೋದಿಲ್ಲ. ಅವರವರ ಅನುದಾನದಲ್ಲಿ ಅವರದ್ದೇ ಮಿತಿಯಲ್ಲಿ ಪ್ರತಿ ಜನಪ್ರತಿನಿಧಿ ಕೆಲಸ ಮಾಡಬೇಕು. ಹಾಗೇ ಅಮ್ಮ ಕೂಡ ಮಂಡ್ಯ ಅಭಿವೃದ್ಧಿಯಲ್ಲಿ ಕೈಜೋಡಿಸುತ್ತಾರೆ ಎಂದು ದರ್ಶನ್​ ಭರವಸೆ ನೀಡಿದರು.

ಅಭಿಯನ್ನು ಪ್ರೋತ್ಸಾಹಿಸಿ

ಇದೇ ವೇದಿಕೆಯ ಮೇಲೆ ದರ್ಶನ್​ ಅಭಿಷೇಕ್​ ಸಿನಿಮಾವನ್ನು ಪ್ರೋತ್ಸಾಹಿಸುವಂತೆಯೂ ಜನರ ಬಳಿ ಕೇಳಿಕೊಂಡರು. ನಮ್ಮಂತ ಸಣ್ಣಸಣ್ಣ ಕಲಾವಿದರನ್ನು ಇವತ್ತು ಇಷ್ಟು ದೊಡ್ಡಮಟ್ಟಕ್ಕೆ ಬೆಳೆಸಿದ್ದೀರಿ. ಹಾಗೇ 31ಕ್ಕೆ ನಮ್ಮ ಮಗು ಸಿನಿಮಾ ಅಮರ್​ ತೆರೆಗೆ ಬರುತ್ತಿದೆ. ಅದನ್ನೂ ನೋಡಿ ಆಶೀರ್ವಾದಿಸಿ. ಅಪ್ಪಾಜಿಗಿಂತಲೂ ಎತ್ತರಕ್ಕೆ ಅಭಿಯನ್ನು ಕರೆದುಕೊಂಡು ಹೋಗಿ. ಒಬ್ಬ ತಂದೆಗೆ ತನ್ನ ಮಗ ತನಗಿಂತ ಹೆಚ್ಚಿನ ಯಶಸ್ಸು ಪಡೆದರೆ ಆಗುವ ಸಂತೋಷದ ಎದುರು ಬೇರೆ ಏನೂ ಇಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *