ಕರ್ತಾರ್​ಪುರ ಗಡಿ ಕಾರಿಡಾರ್​ ಕಾರ್ಯಕ್ರಮಕ್ಕೆ ಪಾಕ್​ಗೆ ಭೇಟಿ ನೀಡುತ್ತೇನೆ: ನವಜೋತ್‌ ಸಿಂಗ್‌ ಸಿಧು

ನವದೆಹಲಿ: ಕರ್ತಾರ್‌ಪುರ ಗಡಿ ಕಾರಿಡಾರ್‌ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆಂದು ಪಂಜಾಬ್‌ ಸಚಿವ ನವಜೋತ್‌ ಸಿಂಗ್‌ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದು. ಪಾಕಿಸ್ತಾನದ ಪ್ರಧಾನ ಮಂತ್ರಿ ಮತ್ತು ನನ್ನ ಗೆಳೆಯ ಇಮ್ರಾನ್‌ ಖಾನ್‌ ಅವರು ನನ್ನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ನಾನು ಆಹ್ವಾನವನ್ನು ಸಂತೋಷದಿಂದ ಒಪ್ಪಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ಬಾಬಾ ನಾನಕ್‌ ಅವರು ಉಭಯ ರಾಷ್ಟ್ರಗಳು ಒಟ್ಟಾಗಿ ಸಾಗಲು ಸಹಾಯ ಮಾಡುತ್ತಿದ್ದಾರೆ. ಸಾವಿರಾರು ಜನರ ಪ್ರಾರ್ಥನೆಯು ಇಂದು ನಿಜವಾಗುತ್ತಿದ್ದು, ಈ ಪ್ರಕ್ರಿಯೆಯು ಮೂರು ತಿಂಗಳ ಹಿಂದೆ ಆರಂಭವಾಗಿದೆ. ನನ್ನ ಸ್ನೇಹಿತ(ಇಮ್ರಾನ್‌ ಖಾನ್) ನನ್ನನ್ನು ಆಹ್ವಾನಿಸಿದ್ದು, ನಾನು ಖಂಡಿತವಾಗಿಯೂ ಹೋಗುತ್ತೇನೆ. ಈ ಕ್ರಮದಿಂದಾಗಿ ಎರಡು ದೇಶಗಳ ನಡುವಿನ ಸಂಬಂಧ ಸುಧಾರಣೆಗೆ ನೆರವಾಗಲಿದೆ ಮತ್ತು ರಕ್ತಪಾತವನ್ನು ಕೊನೆಗೊಳಿಸಲು ನೆರವಾಗಲಿದೆ ಎಂದು ಹೇಳಿದ್ದಾರೆ.

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ನ. 28ರಂದು ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಇನ್ನು ಪಾಕಿಸ್ತಾನದ ಮಾಹಿತಿ ಸಚಿವ ಫವಾದ್‌ ಚೌಧರಿ ಅವರು ಸಿಧು ದೇಶಕ್ಕೆ ಭೇಟಿ ನೀಡುತ್ತಿದ್ದು, ಇದು ಈ ವರ್ಷದ ಅವರ ಎರಡನೇ ಭೇಟಿಯಾಗಲಿದೆ ಎಂದು ಈ ಮೊದಲೇ ಹೇಳಿದ್ದರು.

ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್‌ ಖಾನ್‌ ಪದಗ್ರಹಣ ಕಾರ್ಯಕ್ರಮಕ್ಕೆಂದು ಸಿಧು ಪಾಕ್‌ಗೆ ಆಗಸ್ಟ್‌ನಲ್ಲಿ ಭೇಟಿ ನೀಡಿದಾಗಿನಿಂದ ಕರ್ತಾರ್‌ಪುರ್‌ ಸಾಹೀಬ್‌ ಸಮಸ್ಯೆಯು ಮುನ್ನಲೆಗೆ ಬಂದಿತ್ತು. ಅಂದು ಪಾಕ್‌ ಸೇನಾ ಮುಖ್ಯಸ್ಥರನ್ನು ನ್ನೇ ಅಪ್ಪಿಕೊಂಡಿದ್ದ ನವಜೋತ್​ ಸಿಂಗ್​ ಸಿಧು ಅವರ ನಡೆ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಕತಾರ್​ಪುರ ಕಾರಿಡಾರ್​ ಅನ್ನು ಭಾರತೀಯರಿಗೆ ಮುಕ್ತಗೊಳಿಸುವ ಬಗ್ಗೆ ಪಾಕಿಸ್ತಾನ ಚಿಂತನೆ ನಡೆಸುತ್ತಿದೆ ಎಂದು ಸೇನಾ ಮುಖ್ಯಸ್ಥ ಹೇಳಿದ್ದಕ್ಕೆ ಅಪ್ಪಿಕೊಂಡೆ ಎಂದು ಸಿಧು ಸಮರ್ಥಿಸಿಕೊಂಡಿದ್ದರು. ಅಂದಿನ ಆ ಹೆಜ್ಜೆಯೇ ಇಂದು ಕತಾರ್​ಪುರ ಸಾಹೀಬ್​ ದಾರಿ ಮಾಡಿಕೊಟ್ಟಿದೆ ಎನ್ನಲಾಗುತ್ತಿದೆ.

ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ಸಿಕ್ಕರ ಪವಿತ್ರ ಕ್ಷೇತ್ರ ಗುರುದ್ವಾರ ದರ್ಬಾರ್ ಸಾಹಿಬ್‌ಗೆ ಭಾರತೀಯ ಯಾತ್ರಿಗಳ ಭೇಟಿಗೆ ನೆರವಾಗಲು ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯಿಂದ ಅಂತಾರಾಷ್ಟ್ರೀಯ ಗಡಿಗೆ ಕಾರಿಡಾರ್‌ ಸ್ಥಾಪಿಸಲು ನಿರ್ಧರಿಸಿರುವುದಾಗಿ ಕೇಂದ್ರ ಸರ್ಕಾರ ಗುರುವಾರ ತಿಳಿಸಿತ್ತು. (ಏಜೆನ್ಸೀಸ್)

ಕತಾರ್​ಪುರ ಗುರುದ್ವಾರ ಕಾರಿಡಾರ್​ಗೆ ದಾರಿ ಮಾಡಿಕೊಟ್ಟ ಸಿಧು ಅಪ್ಪುಗೆ