ಸಚಿವ ರೇವಣ್ಣಗೆ ನನ್ನ ಭಯ ಕಾಡುತ್ತಿದೆ

ಹಾಸನ:ತಾಲೂಕಿನ ಯಾವುದೇ ಭಾಗದಲ್ಲಿ ಸಮಸ್ಯೆ ಇರುವ ಸ್ಥಳಕ್ಕೆ ನಾನು ಭೇಟಿ ನೀಡಿದರೆ ನನ್ನ ಹಿಂದೆಯೇ ಸಚಿವ ಎಚ್.ಡಿ. ರೇವಣ್ಣ ಬರುತ್ತಿದ್ದು, ಅವರಿಗೆ ನನ್ನ ಭಯ ಕಾಡುತ್ತಿದೆ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

ನಗರದ ಅಬ್ದುಲ್ ಕಲಾಂ ರಸ್ತೆಗೆ ವಶಪಡಿಸಿಕೊಂಡಿರುವ 3 ಎಕರೆ ಜಮೀನಿಗೆ ಪರ್ಯಾಯ ಭೂಮಿ ನೀಡಬೇಕೆಂದು ಹೊಸ ಈದ್ಗಾ ಆವರಣದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು.

ಯಾವುದೇ ಒಂದು ಕೆಲಸಕ್ಕೆ ಪ್ರೀತಂ ಗೌಡ ಕೈ ಹಾಕಿದರೆ ಅದನ್ನು ಪೂರ್ಣಗೊಳಿಸುತ್ತಾನೆ ಎಂದು ಅವರು ಅರಿತಿದ್ದಾರೆ. ಅದಕ್ಕೆ ಹಲವು ನಿದರ್ಶನಗಳು ನನ್ನಲ್ಲಿದೆ. ಆದರೆ ಸಮಯ ಬಂದಾಗ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದರು.

ಅಬ್ದುಲ್ ಕಲಾಂ ರಸ್ತೆಗೆ ನೀಡಿರುವ ಜಮೀನಿಗೆ ಪರಿಹಾರ ನೀಡಲೇಬೇಕು. ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ನಾನು ಚರ್ಚಿಸುತ್ತೇನೆ. ನಗರದ ಇತರ ಪ್ರದೇಶದಲ್ಲಿ 5 ಎಕರೆ ಜಮೀನು ನೀಡುವಂತೆ ಒತ್ತಾಯಿಸುತ್ತೇನೆ. ಇದಕ್ಕೆ ಜಿಲ್ಲಾಡಳಿತ ಒಪ್ಪದಿದ್ದರೆ ವೈಯಕ್ತಿಕವಾಗಿ 10 ಲಕ್ಷ ರೂ. ನೀಡುತ್ತೇನೆ. ಮನೆ ಮನೆಗೆ ತೆರಳಿ 5ರೂ. ಚಂದಾ ಎತ್ತಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದರು.

ಮುಂದುವರಿದ ಧರಣಿ:ಅಬ್ದುಲ್ ಕಲಾಂ ರಸ್ತೆಗೆ ವಶಪಡಿಸಿಕೊಂಡಿರುವ ಭೂಮಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಹೊಸ ಈದ್ಗಾ ಹಾಗೂ ಖಬರಸ್ತಾನ್ ಸಮಿತಿ ಪದಾಧಿಕಾರಿಗಳ ಪ್ರತಿಭಟನೆ ಮುಂದುವರಿದಿದೆ.
ಪೆನ್ಷನ್ ಮೊಹಲ್ಲಾದ ಸರ್ವೇ ನಂ. 376/2 ಮತ್ತು 376/3ರಲ್ಲಿ 3 ಎಕರೆ ಜಮೀನು ಈದ್ಗಾಗೆ ಸೇರಿದ್ದು, ರಸ್ತೆಗಾಗಿ ಅದನ್ನು ಯಾವುದೇ ಪರಿಹಾರ ನೀಡದೆ ಸ್ವಾಧೀನಪಡಿಸಿಕೊಳ್ಳಲಾಗಿದೆ. 20 ವರ್ಷದಿಂದ ಪರಿಹಾರಕ್ಕಾಗಿ ಆಗ್ರಹಿಸಿದರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂದು ಮುಸ್ಲಿಂ ಮುಖಂಡರು ಹೇಳಿದರು.

ಪ್ರಗತಿಪರ ಚಿಂತಕ ಆರ್.ಪಿ. ವೆಂಕಟೇಶಮೂರ್ತಿ, ಡಿವೈಎಫ್‌ವೈನ ಎಂ.ಜಿ. ಫೃಥ್ವಿ, ಹೊಸ ಈದ್ಗಾ ಕಮಿಟಿ ಅಧ್ಯಕ್ಷ ಅಖ್ವಾಖ್, ಫೈರೋಜ್ ಪಾಷ, ಜೆಡಿಎಸ್‌ನ ಸೈಯದ್ ಅನ್ಸರ್, ಮುಬಷಿರ್ ಅಹಮದ್, ರಿಯಾಜ್, ಫಜಲುಲ್ಲಾ ಖಾನ್, ಅಮೀರ್ ಜಾನ್, ನಜೀರ್ ಅಹಮದ್, ಹಾರೂನ್ ಪಾಷ, ನಸೀರ್ ಹಸೀನ, ಇಮಾಯರ್ ಇದ್ದರು.