ಕುಟುಂಬ ಘನತೆಯಿಂದ ಬಾಳಲು ನೆರವು ನೀಡಿ: ಹುತಾತ್ಮ ಯೋಧನ ಪುತ್ರನ ಮೊರೆ

ಸೋನಿಪತ್‌: ಬಿಎಸ್‌ಎಫ್‌ ಯೋಧ ನರೇಂದರ್‌ ಸಿಂಗ್‌ ಅವರ ಪುತ್ರ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಮತ್ತು ಅಧಿಕಾರಿಗಳಿಗೆ ಮೊರೆಯಿಟ್ಟು ತಮ್ಮ ಕುಟುಂಬದ ನೆರವಿಗೆ ಬರುವಂತೆ ಕೋರಿದ್ದಾರೆ.

ಯೋಧ ನರೇಂದರ್‌ ಸಿಂಗ್‌ನನ್ನು ಜಮ್ಮುವಿನ ಅಂತಾರಾಷ್ಟ್ರೀಯ ಗಡಿ ಬಳಿ ಕತ್ತು ಸೀಳಿ ಪಾಕಿಸ್ತಾನ ಪಡೆ ಬುಧವಾರ ಬರ್ಬರವಾಗಿ ಹತ್ಯೆ ಮಾಡಿತ್ತು.

ಈ ಬಗ್ಗೆ ಮಾತನಾಡಿರುವ ಪುತ್ರ ಮೋಹಿತ್‌ ಕುಮಾರ್‌ ದಾಹಿಯಾ, ರಾಷ್ಟ್ರಕ್ಕಾಗಿ ನನ್ನ ತಂದೆ ಪ್ರಾಣ ತ್ಯಾಗ ಮಾಡಿದ ಬಗ್ಗೆ ನನಗೆ ಹೆಮ್ಮೆ ಇದೆ. ಇದೊಂದು ಹೆಮ್ಮೆಯ ಕ್ಷಣವಾಗಿದೆ. ಎಲ್ಲರಿಗೂ ತ್ರಿವರ್ಣ ಧ್ವಜದಲ್ಲಿ ಮುಚ್ಚುವ ಗೌರವವನ್ನು ಪಡೆಯಲು ಸಾಧ್ಯವಿಲ್ಲ. ಆದರೆ, ನನ್ನ ತಂದೆಗೆ ಅಂತದ್ದೊಂದು ಗೌರವ ದೊರಕಿದೆ ಎಂದು ಹೇಳಿದರು.

ನನ್ನ ತಂದೆಯ ಬಗ್ಗೆ ನನಗೆ ಹೆಮ್ಮೆ ಇದೆ. ಎರಡು ಮೂರು ದಿನಗಳು ಕಳೆದ ನಂತರ ಯಾವುದೇ ನೆರವು ದೊರೆಯದಿದ್ದರೆ ನಮ್ಮ ಕುಟುಂಬ ಏನಾಗಬಹುದು? ನಮಗೆ ಯಾವುದೇ ಸಹಾಯ ಬೇಡವೇ? ನಾನು ಮತ್ತು ನನ್ನ ಸಹೋದರ ನಿರುದ್ಯೋಗಿಗಳಾಗಿದ್ದು, ನಾನು ನನ್ನ ಕುಟುಂಬವನ್ನು ಘನತೆಯಿಂದ ನೋಡಿಕೊಳ್ಳಬೇಕಿದೆ. ನನ್ನ ತಂದೆಯೇ ಮನೆಯ ಏಕಮಾತ್ರ ಶಕ್ತಿಯಾಗಿದ್ದರು. ಆದರೆ, ಅವರೀಗ ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹಾಗಾಗಿ ಅಧಿಕಾರಿಗಳು ನಮ್ಮ ಕುಟುಂಬಕ್ಕೆ ಅಗತ್ಯವಿರುವ ನೆರವನ್ನು ನೀಡಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

ಗೃಹ ಮಂತ್ರಿ ರಾಜನಾಥ್‌ ಸಿಂಗ್‌ ಅವರು ನನ್ನ ತಂದೆಯ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಆದರೆ, ನಮ್ಮ ಕುಟುಂಬಕ್ಕೆ ಅಗತ್ಯವಿರುವ ನೆರವನ್ನು ನೀಡಲಿ. ನಾವು ಬೇಡುವಂತೆ ಮಾಡದಿರಲಿ ಎಂದು ಕೇಳಿಕೊಂಡಿದ್ದಾರೆ.

ಜಮ್ಮುವಿನ ರಾಮ್‌ಗರ್‌ ಸೆಕ್ಟರ್‌ನಲ್ಲಿ ಪಾಕ್‌ ನಿಂದ ನಡೆದ ಅಪ್ರಚೋದಿತ ಗುಂಡಿನ ದಾಳಿ ಬಳಿಕ ಬಿಎಸ್‌ಎಫ್‌ ಹಿರಿಯ ಪೇದೆಯಾದ ನರೇಂದರ್ ಸಿಂಗ್ ಸೆಪ್ಟೆಂಬರ್‌ 18ರಂದು ಕಾಣೆಯಾಗಿದ್ದರು. ಮರುದಿನ ಸಂಜೆ ಯೋಧನ ಮೃತದೇಹ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಯೋಧನ ದೇಹದಲ್ಲಿ ಬುಲೆಟ್‌ ಹೊಕ್ಕಿರುವ ಗುರುತುಗಳು ಪತ್ತೆಯಾಗಿದ್ದವು. (ಏಜೆನ್ಸೀಸ್)