ಮುಜಾಫರ್​ಪುರ​ ​ ಶೆಲ್ಟರ್​ ಹೋಂ ಅತ್ಯಾಚಾರ ಪ್ರಕರಣ: ಮುಖ್ಯಮಂತ್ರಿ ನಿತೀಶ್​ ಕುಮಾರ್​ಗೆ ಸುಪ್ರೀಂ ತರಾಟೆ

ನವದೆಹಲಿ: ಮುಜಾಫರ್​ಪುರ​ ಶೆಲ್ಟರ್​ ಹೋಂನಲ್ಲಿ ಹುಡುಗಿಯರ ಅತ್ಯಾಚಾರ ಪ್ರಕರಣದ ಕೂಲಂಕಷ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್​ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಎಲ್ಲೆಡೆ ಇಂತಹ ಅತ್ಯಾಚಾರಗಳು ನಡೆಯುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಇಂಥ ಶೆಲ್ಟರ್​ ಹೋಂಗಳನ್ನು ಪರಿಶೀಲನೆ ನಡೆಸದಿರಲು ಕಾರಣವೇನು? ಅಲ್ಲಿನ ಹುಡುಗಿಯರನ್ನು ಹೀನಾಯವಾಗಿ ಅತ್ಯಾಚಾರ ಮಾಡಲಾಗಿದ್ದರೂ ಗೊತ್ತಾಗಲಿಲ್ಲವೇ ಎಂದು ತೀವ್ರವಾಗಿ ಪ್ರಶ್ನಿಸಿದೆ.

ಅಲ್ಲದೆ, ಮುಜಾಫರ್​ಪುರದಲ್ಲಿ ಅತ್ಯಾಚಾರಕ್ಕೆ ಒಳಪಟ್ಟ ಅಪ್ರಾಪ್ತರ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಆಗಿರುವ ಎಲ್ಲ ವಿಡಿಯೋ, ಫೋಟೋಗಳನ್ನೂ ತೆಗೆಸಬೇಕು. ಅಲ್ಲದೆ, ಅತ್ಯಾಚಾರಕ್ಕೆ ತುತ್ತಾಗಿರುವ ಅಪ್ರಾಪ್ತರ ಫೋಟೋಗಳನ್ನು ಪ್ರಿಂಟ್​, ಎಲೆಕ್ಟ್ರಾನಿಕ್​ ಹಾಗೂ ಸೋಶಿಯಲ್​ ಮೀಡಿಯಾಗಳಲ್ಲಿ ಬಳಸಬಾರದು ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.

ಆರು ತಾಸಿಗೊಂದು ಅತ್ಯಾಚಾರ

ದೇಶದಲ್ಲಿ ಪ್ರತಿ ಆರು ತಾಸಿಗೆ ಒಬ್ಬಳು ಹುಡುಗಿ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾಳೆ. ಅದರಲ್ಲೂ ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದಲ್ಲಿ ಹೆಚ್ಚು ಎಂಬುದನ್ನು ನ್ಯಾಷನಲ್​ ಕ್ರೈಮ್​ ರೆಕಾರ್ಡ್ಸ್ ಬ್ಯೂರೋ ಅಂಕಿ ಅಂಶ ಆಧರಿಸಿ ಇದೇ ವೇಳೆ ನ್ಯಾಯಾಲಯ ತಿಳಿಸಿದೆ.
ಮುಜಾಫರ್​ಪುರ ಶೆಲ್ಟರ್​ ಹೋಂನಲ್ಲಿ 30 ಹುಡುಗಿಯರನ್ನು ಅತ್ಯಾಚಾರ ಮಾಡಿರುವ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್​ ನಡೆಸುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ 10 ಜನರನ್ನು ಬಂಧಿಸಲಾಗಿದೆ.