ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸವಲತ್ತು ತಲುಪಿಸಿ

ಚಾಮರಾಜನಗರ: ರಾಜ್ಯ ಸರ್ಕಾರ ಕೊಡುವ ಸವಲತ್ತುಗಳನ್ನು ಅಸಂಘಟಿತ ವಲಯದ ಕಾರ್ಮಿಕರಿಗೆ ತಲುಪಿಸಲು ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಮುಂದಾಗಬೇಕು ಎಂದು ಸಂಸದ ಆರ್​. ಧ್ರವನಾರಾಯಣ್​ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಮಿಕ ವಿಭಾಗದ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣೆ ಹಾಗೂ ಅಂಬೇಡ್ಕರ್ ಕಾರ್ಮಿಕರ ಸಹಾಯ ಹಸ್ತ ಯೋಜನೆಯ ಕುರಿತು ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ಅಂದಾಜು 15 ಲಕ್ಷಕ್ಕೂ ಹೆಚ್ಚು ಜನರು ಅಸಂಘಟಿತ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇವರಿಗೆ ಸವಲತ್ತುಗಳನ್ನು ಕಲ್ಪಿಸಿ, ಅರ್ಥಿಕವಾಗಿ ಸಬಲೀಕರಣಗೊಳಿಸುವುದು ಸರ್ಕಾರದ ಗುರಿಯಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಿಗೆ ಯೋಜನೆಯನ್ನು ಜಾರಿ ಮಾಡಿದ್ದರು. ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಹೆಚ್ಚಿನ ಅನುದಾನ ನೀಡಿ ಅಸಂಘಟಿತ ಕಾರ್ಮಿಕರಿಗೆ ಸಲವತ್ತುಗಳನ್ನು ತಲುಪಿಸುವ ಯೋಜನೆ ಅನುಷ್ಠಾನಗೊಳಿಸಿದ್ದರು ಎಂದರು.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಮಿಕ ವಿಭಾಗದ ಪದಾಧಿಕಾರಿಗಳು ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಹಮಾಲಿ ಕಾರ್ಮಿಕರು, ಗೃಹ ಕಾರ್ಮಿಕರು, ಚಿಂದಿ ಆಯುವವರು, ಟೈಲರ್‌ಗಳು, ಮೆಕ್ಯಾನಿಕ್, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಮಂಡಕ್ಕಿಭಟ್ಟಿ ಕಾರ್ಮಿಕರನ್ನು ಗುರುತಿಸಿ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಗುರುತಿನ ಚೀಟಿಯನ್ನು ಕಲ್ಪಿಸಿಕೊಡಬೇಕು ಎಂದು ತಿಳಿಸಿದರು.

ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ವಿಷಕಂಠಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿರುವ ಅಸಂಘಟಿತ ವಲಯದ ಕಾರ್ಮಿಕರನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ನೀಡುವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾರ್ಮಿಕ ವಿಭಾಗದ ಪದಾಧಿಕಾರಿಗಳನ್ನು ಸಂಘಟನೆ ಮಾಡಿ ಅವರಿಗೆ ಗುರುತಿನ ಚೀಟಿಯನ್ನು ನೀಡಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಅಸಂಘಟಿತ ಕಾರ್ಮಿಕರಿಗೆ ಜಾರಿ ಮಾಡಿರುವ ಯೋಜನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳು ಮುಂದಾಗಬೇಕು ಎಂದರು.

ರಾಜ್ಯ ಕಾಂಗ್ರೆಸ್ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಎಸ್.ಸುಬ್ರಮಣ್ಯನಾಯ್ಡು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ. ಮರಿಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಜ್, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲತಾ ಜಯಣ್ಣ, ಕಾರ್ಮಿಕ ವಿಭಾಗದ ಮಹಿಳಾ ಅಧ್ಯಕ್ಷೆ ನಾಗಶ್ರೀ, ಮುಖಂಡರಾದ ಬಿ.ಕೆ.ರವಿಕುಮಾರ್, ಸೈಯದ್ ರಫಿ, ಎ.ಎಸ್. ಗುರುಸ್ವಾಮಿ, ಮಹಮ್ಮದ್‌ಅಸ್ಗರ್, ಎಚ್.ವಿ. ಚಂದ್ರು ಇತರರಿದ್ದರು.