ಬಹಿಷ್ಕಾರದಿಂದ ನೊಂದ ಕುಟುಂಬ

ವಿಜಯವಾಣಿ ಸುದ್ದಿಜಾಲ ಅಕ್ಕಿಆಲೂರ

ಅವರನ್ನು ಮಾತನಾಡಿಸಿದರೆ 500 ರೂ., ಅವರ ಹೊಲಕ್ಕೆ ಕೂಲಿಗೆ ಹೋದರೆ 1000 ರೂ. ದಂಡ… ಎಳೆ ಮಗುವಿಗೆ ಅಂಗನವಾಡಿಯಿಂದಲೇ ಬಹಿಷ್ಕಾರ… ಮನೆ ಮೇಲೆ ಕಲ್ಲು ತೂರಾಟ, ಹಲ್ಲೆಗೆ ಯತ್ನ…

ಸಮೀಪದ ಕಲ್ಲಾಪುರ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿ ಚಿತ್ರಹಿಂಸೆ ಅನುಭವಿಸುತ್ತಿರುವ ಕುಟುಂಬವೊಂದರ ಪರಿಸ್ಥಿತಿ ಇದು.

ಹಿರೂರು ಗ್ರಾಮದ ಬಳಿಯ ಗೊಲ್ಲರಹಟ್ಟಿಯಲ್ಲಿ ಸಾಮಾಜಿಕ ಬಹಿಷ್ಕಾರದಿಂದ ಮನನೊಂದು ಆಶಾ ಎಂಬ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.

ಕಲ್ಲಾಪುರ ಗ್ರಾಮದ ಹುಸೇನಸಾಬ್ ಬಾಳೂರ ಕುಟುಂಬ ಕಳೆದೊಂದು ತಿಂಗಳಿಂದ ಸಾಮಾಜಿಕ ಬಹಿಷ್ಕಾರಕೊಳಗಾಗಿದೆ. ಭಯದ ವಾತಾವರಣದಲ್ಲೇ ದಿನ ದೂಡುತ್ತಿರುವ ಹುಸೇನ್​ಸಾಬ್ ಬಾಳೂರ ಹಾಗೂ ಅವರ ಕುಟುಂಬಸ್ಥರು ಗುರುವಾರ ವಿಷದ ಬಾಟಲಿ ಸಮೇತ ಎಸ್ಪಿ ಪರಶುರಾಮ ಬಳಿ ತೆರಳಿ ಅಳಲು ತೋಡಿಕೊಂಡಿದ್ದಾರೆ.

ಘಟನೆ ಹಿನ್ನೆಲೆ: ಹೊಂಬರಡಿ ಮನೆತನದ ಜತೆ ಮುಸ್ಲಿಂ ಸಮುದಾಯದ ಕೆಲ ಪ್ರಮುಖರು ವೈಮನಸ್ಸು ಹೊಂದಿದ್ದರು. ಸಮಾಜದ ಎಲ್ಲ ಕಾರ್ಯಗಳಿಗೂ ಅವರನ್ನು ದೂರವಿಡುತ್ತಿದ್ದರು. ಇದನ್ನು ಮನಗಂಡ ಹುಸೇನಸಾಬ್ ಬಾಳೂರ ಮತ್ತು ಕುಟುಂಬಸ್ಥರು, ಶುಭಕಾರ್ಯಕ್ಕೆಂದು ತಮ್ಮ ಮನೆಗೆ ಆಗಮಿಸಿದ್ದ ಅಕ್ಕಿಆಲೂರಿನ ಪೊಲೀಸ್ ಪೇದೆ ಜಾವೀದ್ ಸಂಶಿ ಎಂಬುವರ ಬಳಿ ಸಮಸ್ಯೆ ಹೇಳಿಕೊಂಡಿದ್ದರು. ‘ಹೊಂಬರಡಿ ಮನೆತನದೊಂದಿಗೆ ದ್ವೇಷ ಮಾಡುತ್ತಿರುವವರ ಜತೆ ಮಾತನಾಡಿ, ರಾಜಿ ಮಾಡಿಸಿ. ಎಲ್ಲರೂ ಒಂದಾಗಿರೋಣ’ ಎಂದು ಮನವಿ ಮಾಡಿದ್ದಾರೆ. ಪೊಲೀಸ್ ಪೇದೆಗೆ ಮನವಿ ಮಾಡಿದ ಸ್ವಲ್ಪ ದಿನದಲ್ಲೇ ಹುಸೇನಸಾಬ್ ಬಾಳೂರ ಅವರ ಮನೆತನಕ್ಕೆ ಗ್ರಾಮದ ಮುಸ್ಲಿಂ ಸಮಾಜದ ಹಿರಿಯರು ಬಹಿಷ್ಕಾರ ಹಾಕಿದ್ದಾರೆ.

ಯಾವ ತಪ್ಪು ಮಾಡದೆ, ಸಮಾಜದಲ್ಲಿ ವೈಮನಸ್ಸು ಬೇಡ ಎಂಬ ಉದ್ದೇಶದಿಂದ ಹೊಂಬರಡಿ ಕುಟುಂಬದೊಂದಿಗೆ ಸಂಧಾನ ಮಾಡಿಸುವಂತೆ ಪೊಲೀಸ್ ಪೇದೆ ಬಳಿ ಕೇಳಿಕೊಂಡಿದ್ದಕ್ಕೆ ಜ. 26ರಿಂದ ಬಹಿಷ್ಕಾರ ಹಾಕಿದ್ದಾರೆ. ತಮ್ಮ ಕುಟುಂಬದವರ ಹೊಲಕ್ಕೆ ಕೂಲಿಗೆ ಹೋದರೆ, ಯಾರಾದರೂ ಮಾತನಾಡಿಸಿದರೆ ದಂಡ ವಿಧಿಸಲಾಗುತ್ತಿದೆ ಎಂದು ಹುಸೇನಸಾಬ್ ಬಾಳೂರ ಅಳಲು ತೋಡಿಕೊಂಡಿದ್ದಾರೆ.ಸಾಮಾಜಿಕ ಬಹಿಷ್ಕಾರ ಹಾಕಲು ಜಾವಿದ್ ಸಂಶಿಯೇ ಮೂಲ ಕಾರಣ ಎಂದು ಹುಸೇನಸಾಬ್ ದೂರಿದ್ದಾರೆ.

ಆತ್ಮಹತ್ಯೆ ಎಚ್ಚರಿಕೆ: ಬಾಳೂರ ಮನೆತನದವರ ಹೊಲಕ್ಕೆ ಕೂಲಿಗೆ ಹೋದರೆ 1 ಸಾವಿರ ರೂ., ಮಾತನಾಡಿಸಿದರೆ 500 ರೂ. ದಂಡ ವಿಧಿಸಲಾಗಿದೆ. ಹುಸೇನಸಾಬ್ ಅವರ ಮೊಮ್ಮಗಳು ಅಲಿನಾ ಎಂಬ ಮಗುವನ್ನು ಅಂಗನವಾಡಿಯಿಂದ ಹೊರ ಕಳಿಸಲಾಗಿದೆ. ಮದರಸಾ ಮತ್ತು ಮಸೀದಿಯಿಂದಲೂ ಕುಟುಂಬದ ಸದಸ್ಯರಿಗೆ ಬಹಿಷ್ಕಾರ ಹಾಕಲಾಗಿದೆ. ಮನೆ ಮೇಲೆ ಕಲ್ಲು ತೂರಾಡುವುದು, ಹಲ್ಲೆಗೆ ಮುಂದಾಗುವುದು ನಡೆಸಲಾಗುತ್ತಿದೆ. ಇದರಿಂದ ನೊಂದು ಅಕ್ಕಿಆಲೂರು ಹಾಗೂ ಹಾನಗಲ್ಲ ಪೊಲೀಸ್ ಠಾಣೆಗೆ ದೂರು ದಾಖಲಿಸಲು ತೆರಳಿದರೆ ಹಾರಿಕೆ ಉತ್ತರ ನೀಡಿ ವಾಪಸ್ ಕಳಿಸಿದ್ದಾರೆ. ಇದರಿಂದ ಕುಟುಂಬಸ್ಥರು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಹಂತಕ್ಕೆ ಬಂದು ನಿಂತಿದೆ. ಕೊನೆಯದಾಗಿ ಎಸ್ಪಿ ಪರಶುರಾಮ ಅವರನ್ನು ಭೇಟಿ ಮಾಡಿದ್ದಾರೆ. ನ್ಯಾಯ ದೊರೆಯದಿದ್ದರೆ ಆತ್ಮಹತ್ಯೆಯೊಂದೇ ನಮಗೆ ಉಳಿದಿರುವ ದಾರಿ ಎಂದು ನೊಂದ ಕುಟುಂಬ ಕಣ್ಣೀರಿಟ್ಟಿದೆ.

ಕಲ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸಂಬಂಧಪಟ್ಟ ಪಿಎಸ್​ಐಗೆ ಸೂಚಿಸಲಾಗಿದೆ. ಪೊಲೀಸ್ ಬಂದೋಬಸ್ತ್ ಕೈಗೊಂಡು, ಅಲ್ಪಸಂಖ್ಯಾತ ಹಾಗೂ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಫೆ. 15ರಂದು ಗ್ರಾಮಕ್ಕೆ ಭೇಟಿ ನೀಡಿ ಚರ್ಚೆ ಮಾಡುತ್ತೇನೆ. ಬಹಿಷ್ಕಾರ ನಿರ್ಧಾರ ಹಿಂಪಡೆಸಿ, ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

| ಕೆ. ಪರಶುರಾಮ, ಎಸ್ಪಿ