ದೈವಕೋಲಕ್ಕೆ ಮುಸ್ಲಿಂ ವಾದ್ಯ ಸೇವೆ

< ಕೋಮು ಸೌಹಾರ್ದಕ್ಕೆ ಮಾದರಿಯಾದ ವಾದ್ಯ ಕಲಾವಿದ ಮಹಮ್ಮದ್ ಕುಟುಂಬ>

ಪ್ರವೀಣ್‌ರಾಜ್ ಕೊಲ ಕಡಬ

ಪೆರಾಬೆ ಗ್ರಾಮದ ಚಾಮೆತ್ತಡ್ಕದ ಪಿ.ಆರ್.ಮಹಮ್ಮದ್ ಸಾಹೇಬ್ ಕುಟುಂಬ ದೈವ ಕೋಲಕ್ಕೆ ವಾದ್ಯ, ಬ್ಯಾಂಡ್ ನುಡಿಸುವ ಮೂಲಕ ಕೋಮುಸೌಹಾರ್ದಕ್ಕೆ ಸಾಕ್ಷಿಯಾಗಿದೆ.

ದೈವಾರಾಧನೆಯ ಆಚಾರ ವಿಚಾರಗಳ ಬಗ್ಗೆ ಇವರಿಗೆ ಜ್ಞಾನವಿದೆ. ಸರ್ವ ಧರ್ಮದವರಿಗೂ ವರು ಅಚ್ಚುಮೆಚ್ಚು. ಇವರ ಬ್ಯಾಂಡ್ ವಾಲಗದ ತಂಡ ಜಿಲ್ಲೆಯ ವಿವಿಧೆಡೆ ದೈವ ನರ್ತನೋತ್ಸವದ ವೇಳೆ ವಾದ್ಯ, ಬ್ಯಾಂಡ್ ನುಡಿಸುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಸಹೋದರರು ಬದಲಿ ಉದ್ಯೋಗದ ಮೊರೆ ಹೋಗಿರುವ ಕಾರಣ, ಇತರರೊಂದಿಗೆ ತಂಡ ಕಟ್ಟಿ ಪಿ.ಆರ್.ಮಹಮ್ಮದ್ ಸಾಹೇಬ್ ವಾದ್ಯ ಸೇವೆ ನೀಡುತ್ತಿದ್ದಾರೆ.

ಬದುಕಿಗೆ ಹಾದಿ ತೋರಿದ ಲಕ್ಷದೀಪೋತ್ಸವ: 45 ವರ್ಷಗಳಿಂದ ವಾದ್ಯ ಸೇವೆ ನೀಡುತ್ತಿರುವ ಪಿ.ಆರ್.ಮಹಮ್ಮದ್ ಸಾಹೇಬ್ ಅವರಿಗೆ ಬಾಲ್ಯದಲ್ಲಿ ಬದುಕಿನ ದಾರಿದೀಪ ತೋರಿಸಿದ್ದು ಧರ್ಮಸ್ಥಳದ ಲಕ್ಷದೀಪೋತ್ಸವ. 6ನೇ ವಯಸ್ಸಿನಲ್ಲಿಯೇ ವಾದ್ಯದ ಒಲವು ಬೆಳೆಸಿಕೊಂಡಿದ್ದ ಮಹಮ್ಮದ್‌ರಿಗೆ ಬಳಿಕ ವಾದ್ಯವೇ ಸರ್ವಸ್ವವಾಯಿತು.

ಚಿಕ್ಕಂದಿನಿಂದಲೇ ಧರ್ಮಸ್ಥಳದ ಲಕ್ಷದೀಪಕ್ಕೆ ಸಂಬಂಧಿಕರೊಂದಿಗೆ ಹೋಗುತ್ತಿದ್ದ ಅವರಿಗೆ ಅಲ್ಲಿ ವಾದ್ಯಗಾರರು ನುಡಿಸುವ ವಾದ್ಯ ಆಕರ್ಷಕವಾಗಿ ಕಂಡಿತು. ತನ್ನ ಮೂವರು ಸಂಬಂಧಿಕರೊಂದಿಗೆ ವಾದ್ಯ ನುಡಿಸುವಿಕೆ ಕಲಿತು ಜೀವನೋಪಾಯಕ್ಕೆ ಅದನ್ನೇ ಕಸುಬಾಗಿಸಿಕೊಂಡರು. ಈ ಪೈಕಿ ಇಬ್ಬರು ಪೆರಾಬೆಯಲ್ಲಿ, ಇನ್ನಿಬ್ಬರು ಕಡಬದ ಕೋಡಿಂಬಾಳ ಗ್ರಾಮದಲ್ಲಿ ನೆಲೆಸಿದ್ದ್ದಾರೆ. ಕೆಲವೊಮ್ಮೆ ಇಬ್ಬರು ಇಲ್ಲವೇ ಎಲ್ಲರೂ ಒಟ್ಟಾಗಿ ಕಾರ‌್ಯಕ್ರಮದಲ್ಲಿ ಭಾಗವಹಿಸುವುದೂ ಉಂಟು.

ಬದಲಾಗುತ್ತಿದೆ ಕಾಲ: ಇಂದು ಈ ವೃತ್ತಿಗೆ ಯಾರೂ ಆಸಕ್ತಿ ವಹಿಸುತ್ತಿಲ್ಲ. ಹಿಂದೆ, ಮನೆ ಮಂದಿಯೆಲ್ಲ ಸೇರಿ ದೈವಗಳ ನರ್ತನೋತ್ಸವಕ್ಕೆ ಬೇಕಾದ ಸಿದ್ಧತೆ ಮಾಡುತ್ತಿದ್ದರು. ಆದರೆ ಇಂದು ದೈವಗಳ ಆಭರಣದಿಂದ ಹಿಡಿದು ಪಾತ್ರಿಯವರೆಗೆ, ದೈವಗಳ ಎಲ್ಲ ಪರಿಕರಗಳ ಸಂಗ್ರಹಣೆ ಜವಾಬ್ದಾರಿಯನ್ನು ದುಬಾರಿ ಮೊತ್ತ ಪಾವತಿಸಿ, ಒಬ್ಬನಿಗೆ ವಹಿಸಿ ನರ್ತನೋತ್ಸವದ ಸಮಯಕ್ಕೆ ಸರಿಯಾಗಿ ಮನೆ ಮಂದಿ ಬರುತ್ತಿದ್ದಾರೆ. ಇಂತಹ ಬದಲಾವಣೆಯ ಪರಿಸ್ಥಿತಿಯಲ್ಲಿ ದೈವಾರಾಧನೆಗೂ ಡಿಜಿಟಲ್ ವಾದ್ಯಗಾರಿಕೆ ಬಂದರೂ ಅಚ್ಚರಿಯಿಲ್ಲ ಎಂದು ಪಿ.ಆರ್.ಸಾಹೇಬ್ ಆತಂಕದಿಂದ ಹೇಳುತ್ತಾರೆ.

ದೈವದ ಕೆಲಸದಲ್ಲಿ ಇತರರಿಂದ ಸ್ವಲ್ಪ ವ್ಯತ್ಯಾಸವಾದರೂ, ನಾನು ಸರಿಪಡಿಸಿಕೊಂಡು ಹೋಗುವ ಜವಾಬ್ದಾರಿ ಹೊತ್ತುಕೊಳ್ಳುತ್ತೇನೆ. ಈ ಹೊಂದಾಣಿಕೆಯಿಂದಾಗಿ ಇಂದಿಗೂ ವಾದ್ಯ ಸೇವೆ ನೀಡುವಂತಾಗಿದೆ. ವೃತ್ತಿಗೆ ಬೇಡಿಕೆ ಇದೆ. ಹಿಂದೆಲ್ಲ ಮೂರು ದಿನಗಳ ಕಾರ್ಯಕ್ರಮಕ್ಕೆ ಕಡಿಮೆ ಸಂಭಾವನೆ ಸಿಗುತ್ತಿತ್ತು. ಈಗ ತೃಪ್ತಿದಾಯಕ ಮೊತ್ತ ನೀಡಿ ನಮ್ಮನ್ನು ಗೌರವಿಸುತ್ತಾರೆ. ಗೌರವಯುತವಾಗಿಯೇ ಸೇವೆ ನೀಡಿದ್ದೇನೆ ಎಂಬ ಸಾರ್ಥಕತೆ ಇದೆ.
– ಪಿ.ಆರ್.ಸಾಹೇಬ್, ದೈವನರ್ತನ ವಾದ್ಯ ಕಲಾವಿದ