More

    ಮಸ್ಕಿಯಲ್ಲಿ ಸಮಸ್ಯೆಗಳ ಸರಮಾಲೆ:ಕಗ್ಗಂಟು ಬಿಡಿಸುವರೇ ಶಾಸಕ ಬಸನಗೌಡ ತುರ್ವಿಹಾಳ ?

    ಮಸ್ಕಿ: ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವ ಕ್ಷೇತ್ರ, ಹಲವಾರು ಸಮಸ್ಯೆಗಳ ಸರಮಾಲೆಯ ಕಗ್ಗಂಟಿನಲ್ಲಿ ಸಿಲುಕಿದೆ. ಈ ಕಗ್ಗಂಟನ್ನು ಬಿಡಿಸಿ ಜನಸಾಮಾನ್ಯರ ಭಾವನೆಗಳಿಗೆ ಸ್ಪಂದಿಸುವ ಜವಬ್ದಾರಿ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಆರ್.ಬಸನಗೌಡ ತುರ್ವಿಹಾಳ ಅವರ ಮೇಲಿದೆ.

    ಕಾಂಗ್ರೆಸ್‌ನ ಐದು ಗ್ಯಾರಂಟಿಗಳು ಬಸನಗೌಡ ಗೆಲ್ಲಲು ಕಾರಣ

    ಕಾಂಗ್ರೆಸ್‌ನ ಐದು ಗ್ಯಾರಂಟಿಗಳು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆರ್.ಬಸನಗೌಡ ತುರ್ವಿಹಾಳ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ಕಾರಣದಿಂದಲೇ ಕ್ಷೇತ್ರದಲ್ಲಿನ ಮಹಿಳೆಯರು ಕರೆಂಟ್ ಬಿಲ್ ಕಟ್ಟಲ್ಲ ಹಾಗೂ ಬಸ್‌ನಲ್ಲಿ ಟಿಕೆಟ್ ತಗೊಳ್ಳಲ್ಲ ಎಂದು ಜೆಸ್ಕಾಂ ಸಿಬ್ಬಂದಿ ಹಾಗೂ ಕಂಡಕ್ಟರ್‌ಗಳಿಗೆ ನೇರವಾಗಿಯೇ ಹೇಳುತ್ತಿದ್ದಾರೆ. ಈ ಕುರಿತ ವಿಡಿಯೋಗಳು ವೈರಲ್ ಆಗತೊಡಗಿವೆ. ಯಾಕೆ ಕಟ್ಟಲ್ಲ ಎಂದು ಕೇಳಿದರೆ ಚುನಾವಣೆಯಲ್ಲಿ ಬಸನಗೌಡ ತುರ್ವಿಹಾಳ ಬಿಲ್ ಕಟ್ಟುವುದು ಬೇಡ ಎಂದು ಹೇಳಿದ್ದಾರೆ. ಹಾಗಾಗಿ ನಾವು ಕಟ್ಟುವುದಿಲ್ಲ ಎಂದು ವಾದಿಸತೊಡಗಿದ್ದಾರೆ.

    ಇದನ್ನೂ ಓದಿ: ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ: ಶಾಸಕ ಬಸನಗೌಡ ತುರ್ವಿಹಾಳ ಹೇಳಿಕೆ

    ಪಟ್ಟಣದಲ್ಲಿ ತಾಲೂಕು ಆಡಳಿತ ಸೌಧ ಕಟ್ಟಡ ನಿರ್ಮಾಣ ಮಾಡಬೇಕು

    ಮಸ್ಕಿ ತಾಲೂಕು ಕೇಂದ್ರವಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಸರ್ಕಾರಿ ಕಚೇರಿಗಳಿಲ್ಲ. ಈ ಮೊದಲು ಮಾನ್ವಿ, ಸಿಂಧನೂರು ಹಾಗೂ ಲಿಂಗಸುಗೂರು ತಾಲೂಕಿಗೆ ಒಳಪಟ್ಟಿದ್ದ ಹಳ್ಳಿಗಳ ಜನರು, ಕೆಲಸಗಳಿಗಾಗಿ ಮೂಲ ತಾಲೂಕುಗಳಿಗೆ ಅಲೆದಾಡುವುದು 6 ವರ್ಷಗಳಿಂದ ತಪ್ಪುತ್ತಿಲ್ಲ. ಪಟ್ಟಣದಲ್ಲಿ ತಾಲೂಕು ಆಡಳಿತ ಸೌಧ ಕಟ್ಟಡ ನಿರ್ಮಾಣ ಮಾಡಿ ಎಲ್ಲ ಇಲಾಖೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವ ಜವಾಬ್ದಾರಿ ತುರ್ವಿಹಾಳ ಮೇಲಿದೆ.

    5ಎ ಕಾಲುವೆ ಯೋಜನೆ ಜಾರಿ ಮಾಡುವುದಾಗಿ ಭರಸವೆ ನೀಡಿದ್ದರು.

    5ಎ ಕಾಲುವೆ ಯೋಜನೆ ಜಾರಿಗೊಳಿಸುವುದಾಗಿ 2018 ರ ಉಪಚುನಾವಣೆ ಮತ್ತು 2023 ರ ಸಾವರ್ರ್ತ್ರಿಕ ಚುನಾವಣೆಯಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತುಕೊಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಚುನಾವಣಾ ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ 5ಎ ಕಾಲುವೆ ಯೋಜನೆ ಜಾರಿ ಮಾಡುವುದಾಗಿ ಭರಸವೆ ನೀಡಿದ್ದರು.ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, 5 ಎ ಕಾಲುವೆ ಜಾರಿಗೊಳಿಸುವ ಜವಾಬ್ದಾರಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಹಾಗೂ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ ಮೇಲಿದೆ.

    ತಾಲೂಕು ಕ್ರೀಡಾಂಗಣ ನಿರ್ಮಾಣದ ಬೇಡಿಕೆ

    ಪಟ್ಟಣದಲ್ಲಿ 30 ಬೆಡ್ ಆಸ್ಪತ್ರೆ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿದೆ. ಈ ಕುರಿತ ಕಾಮಗಾರಿ ಪೂರ್ಣಗೊಳಿಸಿ ಕೇವಲ 6 ಬೆಡ್ ಇರುವ ಈಗಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದನ್ನು ತಪ್ಪಿಸಬೇಕಾಗಿದೆ. ಸೋಮನಾಥ ನಗರದ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ, ತಾಲೂಕು ಕ್ರೀಡಾಂಗಣ ನಿರ್ಮಾಣದ ಬೇಡಿಕೆಯೂ ಈಡೇರಬೇಕಿದೆ.

    ಸುತ್ತಮುತ್ತಲಿನ ಗ್ರಾಮಗಳ ಜನರು ಮಸ್ಕಿಗೆ ಬಂದು ನೆಲೆಸುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಅದಕ್ಕಾಗಿ ಶಾಶ್ವತ ಕುಡಿಯುವ ನೀರಿನ ಯೋಜನೆ ರೂಪಿಸುವ ಕೆಲಸವಾಗಬೇಕಿದೆ. ಬಸ್ ನಿಲ್ದಾಣ ಮೇಲ್ದರ್ಜೆಗೇರಿಸುವುದು, ತುಂಗಭದ್ರಾ ಎಡದಂಡೆ ನಾಲೆಯ ಕೊನೆಯ ಭಾಗದ ರೈತರಿಗೆ ನೀರು ಕೊಡುವುದು ಸೇರಿ ಅನೇಕ ಬೇಡಿಕೆಗಳನ್ನು ಪರಿಹರಿಸಬೇಕೆಂಬುದು ಕ್ಷೇತ್ರದ ಜನರ ನಿರೀಕ್ಷೆಯಾಗಿದೆ.


    ಚುನಾವಣೆಯಲ್ಲಿ ಭರವಸೆ ಕೊಟ್ಟಂತೆ ಶಾಸಕ ಬಸನಗೌಡ ತುರ್ವಿಹಾಳ ಅಭಿವೃದ್ಧಿ ಕೆಲಸಗಳಿಗೆ ಮುಂದಾಗಬೇಕು. ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕು.
    ಈರಪ್ಪ ಬೋವಿ,ಗ್ರಾಮಸ್ಥ, ಹೊಕ್ರಾಣಿ


    ಚುನಾವಣೆಯಲ್ಲಿ ಭರವಸೆ ಕೊಟ್ಟಂತೆ ಮುಂದಿನ ಐದು ವರ್ಷದಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ಮಸ್ಕಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವೆ.
    ಆರ್.ಬಸನಗೌಡ ತುರ್ವಿಹಾಳ, ಶಾಸಕ, ಮಸ್ಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts