ಮನಸೂರೆಗೊಂಡ ಸಂಗೀತ-ಯಕ್ಷಗಾನ ಜುಗಲ್​ಬಂದಿ

ತ್ಯಾಗರ್ತಿ: ಕರ್ನಾಟಕ ಸಂಗೀತ ಹಾಗೂ ಯಕ್ಷಗಾನ ಭಾಗವತಿಕೆ ಸಮ್ಮಿಲನದೊಂದಿಗೆ ಯಕ್ಷ ಸಂಗೀತ ಕಾರ್ಯಕ್ರಮವನ್ನು ಗಾಂಧಾರ ಸಂಗೀತ ವಿದ್ಯಾಲಯದ ವಿದುಷಿ ಅನಿತಾ ವೆಂಕಟೇಶ್ ನಡೆಸಿಕೊಟ್ಟರು.

ನೀಚಡಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಾರ್ತಿಕ ದೀಪೋತ್ಸವ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಗೀತಯಕ್ಷಗಾನ ಭಾಗವತಿಕೆಯನ್ನು ಪ್ರಥಮ ಬಾರಿಗೆ ವಿನೂತನ ಶೈಲಿಯಲ್ಲಿ ಸಂಯೋಜಿಸಿ ಪ್ರಸ್ತುತ ಪಡಿಸಲಾಯಿತು. ಮೊದಲಿಗೆ ನಾಟ ರಾಗದಲ್ಲಿ ಗಣಪತಿ ಸ್ತುತಿಯೊಂದಿಗೆ ಸಂಗೀತ ಶೈಲಿಯಲ್ಲಿ ಹಾಡಿದ ಯಕ್ಷಗಾನ ಭಾಗವತಿಕೆಯನ್ನು ಕರ್ನಾಟಕ ಸಂಗೀತ ಶೈಲಿಯಲ್ಲಿ ಹಾಡಲು ಪ್ರಾರಂಭಿಸಲಾಯಿತು.

ಭಾಗವತ ಕೊಳಗಿ ಕೇಶವ ಹೆಗಡೆ ಮಾಲ್ಕೌಂಸ್ ರಾಗದಲ್ಲಿ ಪ್ರಸ್ತುತ ಪಡಿಸಿದ ಪದ್ಯವನ್ನು ಕರ್ನಾಟಕ ಸಂಗೀತ ಶೈಲಿಯ ಹಿಂದೋಳ ರಾಗದಲ್ಲಿ ಅನಿತಾ ವೆಂಕಟೇಶ್ ಇಂಪಾಗಿ ಹಾಡಿದರು. ಅದೇ ರೀತಿ ಮೋಹನರಾಗ, ದುರ್ಗಾ, ರೇವತಿ, ಬೃಂದಾವನಿ ಸಾರಂಗ, ಶಂಕರಾಭರಣ, ವಾಸಂತಿ, ಸಿಂಧೂಭೈರವಿ, ಹಂಸಧ್ವನಿ ಹೀಗೆ ಹಲವು ರಾಗಗಳನ್ನು ಯಕ್ಷಗಾನ ಸಾಹಿತ್ಯ ಹಾಗೂ ಕರ್ನಾಟಕ ಸಂಗೀತ ಸಾಹಿತ್ಯರಾಗ ತಾಳದ ಮಿಳಿತದೊಂದಿಗೆ ಅಳವಡಿಸಿಕೊಂಡು ಯಕ್ಷಸಂಗೀತ ಪ್ರಸ್ತುತ ಪಡಿಸಿದರು.

ವಿದುಷಿ ಅನಿತಾ ವೆಂಕಟೇಶ್ ಹಾಗೂ ವಿದುಷಿ ಸೀತಾ ಬಾಪಟ್ ಅವರ ಜುಗಲ್​ಬಂದಿ ದರ್ಬಾರಿ ಕಾನಡ ರಾಗದಲ್ಲಿ ಕೇಳುಗರ ಮನಸೂರೆಗೊಂಡಿತು. ಯಕ್ಷಗಾನ ಭಾಗವತಿಕೆಯನ್ನು ಪ್ರಸಿದ್ಧ ಕಲಾವಿದ ಕೊಳಗಿ ಕೇಶವ ಹೆಗಡೆ ಹಾಡಿದರು. ಮದ್ದಳೆಯಲ್ಲಿ ಶಂಕರ ಭಾಗವತ್ ಯಲ್ಲಾಪುರ ಸಾಥ್ ನೀಡಿದರು. ಕರ್ನಾಟಕ ಸಂಗೀತದ ಪಕ್ಕವಾದ್ಯದಲ್ಲಿ ವಿದ್ವಾನ್ ಮಧುಮುರಳಿ ಮತ್ತೂರು, ಮೃದಂಗದಲ್ಲಿ ರಾಜೀವ್ ಮತ್ತೂರು ಭಾಗವಹಿಸಿದ್ದರು.

ರಾಜರಾಜೇಶ್ವರಿ ಮಹಿಳಾ ಸಮಾಜದಿಂದ ಕಾರ್ತಿಕ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಆಯೋಜಿಸಿದ್ದ ಆರತಿತಟ್ಟೆ ಸ್ಪರ್ಧೆಯಲ್ಲಿ ಸಂಗೀತಾ ಪ್ರಶಾಂತ್, ವಂದಿತಾ ಪ್ರಮೋದ್, ಕಾಂತಿ ದಿಲೀಪ್, ಮಾಲತಿ ಮಂಜುನಾಥ್ ಕ್ರಮವಾಗಿ ಬಹುಮಾನ ಪಡೆದರು. ಸೀತಾ ಬಾಪಟ್, ಅನಿತಾ ವೆಂಕಟೇಶ್ ಮತ್ತಿತರ ಕಲಾವಿದರು.