ಸಂಗೀತ ಆತ್ಮಸಂಜೀವಿನಿ ಇದ್ದಂತೆ

ಬೆಳಗಾವಿ: ಸಂಗೀತ ಎಂಬುದು ಕೇವಲ ರಂಜನೆಯ ವ್ಯಂಜನವಲ್ಲ. ಅದು ಆತ್ಮಸಂಜೀವಿನಿ ಇದ್ದಂತೆ ಎಂದು ಸಾಹಿತಿ ಡಾ.ಗೊ.ರು.ಚನ್ನಬಸಪ್ಪ ಹೇಳಿದ್ದಾರೆ.

ಇಲ್ಲಿನ ಶಿವಬಸವ ನಗರದ ಡಾ.ಎಸ್.ಜಿ.ಬಾಳೇಕುಂದ್ರಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಘಟಕ ಶನಿವಾರ ಆಯೋಜಿಸಿದ್ದ ವಚನ ಸಂಗೀತೋತ್ಸವ ಹಾಗೂ ಲಿಂಗಾಯತ ಧರ್ಮದ ಇತಿಹಾಸ ಮತ್ತು ದರ್ಶನ ಗ್ರಂಥ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ದಿವ್ಯಾನುಭೂತಿ ಶಕ್ತಿ ಹೊಂದಿರುವ ಸಂಗೀತಕ್ಕೆ ಜಾತಿ ಬೇಧ ಇಲ್ಲ. ಬಸವಾದಿ ಶರಣರ ವಚನಗಳು ಜಾತ್ಯತೀತವಾದವು.ಅಂತಹ ವಚನಗಳನ್ನು ಸಂಗೀತಕ್ಕೆ ಅಳವಡಿಸಿ ಕೇಳುವುದೇ ಆನಂದ ಎಂದರು.
ಲಿಂಗಾಯತ ಸ್ವತಂತ್ರ ಧರ್ಮ. ವೈದಿಕ ಧರ್ಮದ ಮೌಢ್ಯ ಆಚರಣೆಗಳನ್ನು ಧಿಕ್ಕರಿಸಿ, ಪ್ರಗತಿಪರ ಚಿಂತನೆಗಳನ್ನು ಅಳವಡಿಸಿಕೊಂಡು ಅದು ರೂಪುಗೊಂಡಿದೆ. ಲೇಖಕ ಪ್ರೊ.ಎಂ.ಆರ್.ಸಾಖರೆ ಇದೇ ವಿಷಯವನ್ನು ಈ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ. ಮೂಲ ಇಂಗ್ಲಿಷ್ ಕೃತಿ ಈಗ ಕನ್ನಡಕ್ಕೆ ಅನುವಾದಗೊಂಡಿರುವುದು ಖುಷಿ ತಂದಿದೆ ಎಂದರು.

ಡಾ.ಎಚ್.ಎಸ್.ಎಂ.ಪ್ರಕಾಶ ಮತ್ತು ಸದಾನಂದ ಕನವಳ್ಳಿ ಲಿಂಗಾಯತ ಧರ್ಮದ ಮೂಲ, ತಾತ್ವಿಕ ನಿಲುವು, ಆಚರಣಾ ಪದ್ಧತಿ ಬಗ್ಗೆ ತಿಳಿಸುವ ಜತೆಗೆ, ಧರ್ಮದ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸಲು ಪ್ರಯತ್ನಿಸಿದ್ದಾರೆ. ಸರ್ವಧರ್ಮೀಯರು ಓದಲೇಬೇಕಾದ ಕೃತಿ ಇದಾಗಿದೆ. ಸಂಶೋಧನಾ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ ನೀಡುವಂತಿದೆ ಎಂದರು.

ಆಶಯನುಡಿ ವ್ಯಕ್ತಪಡಿಸಿದ ಮಾಜಿ ಶಾಸಕ ಹಾಗೂ ಶರಣ ಸಾಹಿತ್ಯ ಪರಿಷತ್ ಹಿರಿಯ ಉಪಾಧ್ಯಕ್ಷ ಚಂದ್ರಕಾಂತ ಬೆಲ್ಲದ ಅವರು, ವಚನ ಸಾಹಿತ್ಯ ಜಗತ್ತಿಗೆ ಮೊದಲ ಸಂವಿಧಾನ ಇದ್ದಂತೆ. ಅದನ್ನು ಉಳಿಸಿ ಬೆಳೆಸಬೇಕು. ಸುತ್ತೂರು ಮಠದ ಶ್ರೀಗಳ ಆಶೀರ್ವಾದದಿಂದ ಶರಣ ಸಾಹಿತ್ಯ ದೇಶ-ವಿದೇಶಗಳಲ್ಲಿ ಪ್ರಸಾರಗೊಳ್ಳುತ್ತ ಸಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಗದುಗಿನ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಸ್ವಾಮೀಜಿ, ಲಿಂಗಾಯತ ಧರ್ಮದ ಇತಿಹಾಸ ಸಾರುವ ಮಹತ್ವದ ಕೃತಿ 77 ವರ್ಷಗಳ ನಂತರ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಗೊಂಡಿರುವುದು ಖುಷಿ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪರಿಷತ್‌ನ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಅಧ್ಯಕ್ಷತೆ ವಹಿಸಿದ್ದರು. ಡಾ.ವಿ.ಎಸ್.ಮಾಳಿ ಸ್ವಾಗತಿಸಿದರು. ಪ್ರೊ.ಸಿ.ಜಿ.ಮಠಪತಿ ಕಾರ್ಯಕ್ರಮ ನಿರೂಪಿಸಿದರು.

ಮನ ತಣಿಸಿದ ಸಂಗೀತ

ಶಂಕರ ಹೂಗಾರ, ಕುಪೇಂದ್ರ ಪಾಟೀಲ ಮತ್ತು ಡಾ.ಎಸ್.ಎಂ.ನೀಲಾ ಪ್ರಸ್ತುತಪಡಿಸಿದ ವಚನ ಪಠಣ, ವಿಶ್ಲೇಷಣೆ, ಗಾಯನ, ಚಿತ್ರಣ ಕಾರ್ಯಕ್ರಮ ಧಾರ್ಮಿಕ ಜಾಗೃತಿ ಮೂಡಿಸಿದರೆ, ವಿದುಷಿ ನಾಗರತ್ನ ಹಡಗಲಿ ನಿರ್ದೇಶನದಲ್ಲಿ ಧಾರವಾಡದ ರತಿಕಾನೃತ್ಯ ನಿಕೇತನ ತಂಡ ಪ್ರದರ್ಶಿಸಿದ ವಚನ ವೈಭವ ನೃತ್ಯ ಕಣ್ಮನ ಸೆಳೆಯಿತು. ಪ್ರೊ.ಸಿದ್ರಾಮಯ್ಯ ಮಠಪತಿ ಮತ್ತು ಪಂಡಿತ ರಾಜಪ್ರಭು ಧೋತ್ರೆ ಸಂಗಡಿಗರು ಪ್ರಸ್ತುತಪಡಿಸಿದ ವಚನ ಸಂಗೀತ ಪ್ರೇಕ್ಷಕರನ್ನು ಗಂಧರ್ವ ಲೋಕಕ್ಕೆ ಕರೆದೊಯ್ದಿತು.

Leave a Reply

Your email address will not be published. Required fields are marked *