ಸಾತ್ವಿಕ ಗುಣ ಬೆಳೆಸಿಕೊಳ್ಳಲು ಸಂಗೀತ ಸಹಕಾರಿ

ಅರಕಲಗೂಡು:  ಕರ್ನಾಟಕ ಶಾಸ್ತ್ರೀಯ ಸಂಗೀತ ಮನುಷ್ಯನಲ್ಲಿ ಸಾತ್ವಿಕ ಗುಣ ಹಾಗೂ ಚಿಂತನೆಗಳನ್ನು ಬೆಳೆಸಲು ಸಹಕಾರಿಯಾಗಿದೆ. ಸಂಗೀತ ಪ್ರಜ್ಞೆ ಮೂಡಿಸಿಕೊಂಡಾಗ ಬದುಕಿನಲ್ಲಿ ಮೌಲಿಕವಾದ ಸಾಧನೆ ಮಾಡಲು ಸಾಧ್ಯ ಎಂದು ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಅಂತರ ಕಾಲೇಜು ಗಾಯನ ಹಾಗೂ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಗೀತದಲ್ಲಿ ಜಾತಿ, ಮೇಲು ಕೀಳೆಂಬ ಯಾವುದೇ ತಾರತಮ್ಯ ಇಲ್ಲ. ಸಮಾನತೆ ಭಾವ, ಸಂಯಮ, ತಾಳ್ಮೆ, ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೂ ಸಂಗೀತ ಸಹಕಾರಿಯಾಗಿದೆ. ನಾಡಿನ ಸಾಂಸ್ಕೃತಿಕ ಪರಂಪರೆಯ ಹೆಗ್ಗುರುತಾದ ಸಂಗೀತ ಶಿಕ್ಷಣವನ್ನು ಎಲ್ಲ ಶಾಲಾ- ಕಾಲೇಜುಗಳಲ್ಲಿ ಕಡ್ಡಾಯಗೊಳಿಸುವತ್ತ ಚಿಂತನೆ ನಡೆಸಬೇಕಾಗಿದೆ ಎಂದರು.

ಕಾಲೇಜು ಪ್ರತಿವರ್ಷ ನಡೆಸುತ್ತಿರುವ ಗಾಯನ ಸ್ಪರ್ಧೆಯಲ್ಲಿ ಶಾಸ್ತ್ರೀಯ ಸಂಗೀತದ ಸ್ಪರ್ಧೆಯನ್ನು ಹಮ್ಮಿಕೊಂಡಲ್ಲಿ ಶೀಲ್ಡ್ ಹಾಗೂ ಅಗತ್ಯ ವೆಚ್ಚವನ್ನು ನೀಡುವುದಾಗಿ ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಂ.ಸಿ.ರಂಗಸ್ವಾಮಿ ಮಾತನಾಡಿ, ಕಾಲೇಜಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ 2 ಕೋಟಿ ರೂ. ಬಿಡುಗಡೆ ಮಾಡಿದೆ. ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ನಡೆದಿದೆ. ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಕಾಲೇಜಿನ ಚಿತ್ರಣ ಬದಲಾಗಲಿದೆ ಎಂದರು.

ಪ್ರಾಂಶುಪಾಲರಾದ ಎಚ್.ಎಸ್.ಸ್ಮಿತಾ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎನ್.ರವಿಕುಮಾರ್, ಎಚ್.ಡಿ.ಕೃಷ್ಣಮೂರ್ತಿ, ಶಶಿಕಲಾ, ಏಕತಾರಿ ಸಾಂಸ್ಕೃತಿಕ ಸಂಘಟನೆಯ ಸಂಚಾಲಕ ದೇವಾನಂದ ವರಪ್ರಸಾದ್, ಶಿಕ್ಷಕಿ ನಾಗಮಣಿ, ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಲೀಲಾವತಿ, ಪ್ರಾಧ್ಯಾಪಕರಾದ ಬಿ.ಮಂಜುನಾಥ್, ಎಸ್.ಅಶ್ವಿನಿ, ಎ.ಎಸ್.ಅನುರಾಧಾ, ಎ.ಎಲ್. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್.