ಚೊಚ್ಚಲ ಫೈನಲ್​ಗೇರಿದ ಕರ್ನಾಟಕ

ಇಂದೋರ್: ದೇಶೀಯ ಚುಟುಕು ಕ್ರಿಕೆಟ್​ನಲ್ಲಿ ಚೊಚ್ಚಲ ಪ್ರಶಸ್ತಿ ಕನಸಿನಲ್ಲಿರುವ ಕರ್ನಾಟಕ ತಂಡ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಅಜೇಯ ಸಾಧನೆಯೊಂದಿಗೆ ಮೊದಲ ಬಾರಿಗೆ ಫೈನಲ್​ಗೇರಿದೆ. ನಾಯಕ ಮನೀಷ್ ಪಾಂಡೆ (49*ರನ್, 35 ಎಸೆತ, 3 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ಅಂತಿಮ ಸೂಪರ್ ಲೀಗ್ ಪಂದ್ಯದಲ್ಲಿ ರಣಜಿ ಚಾಂಪಿಯನ್ ವಿದರ್ಭ ತಂಡವನ್ನು 6 ವಿಕೆಟ್​ಗಳಿಂದ ಸೋಲಿಸಿತು. 13 ವರ್ಷಗಳ ಟೂರ್ನಿಯ ಇತಿಹಾಸದಲ್ಲಿ ಕರ್ನಾಟಕ ತಂಡ ಮೊದಲ ಬಾರಿಗೆ ಪ್ರಶಸ್ತಿ ಸುತ್ತಿಗೇರಲು ಯಶಸ್ವಿಯಾಗಿದೆ. ಗುರುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ.

ಇಮೆರಾಲ್ಡ್ ಹೈಟ್ಸ್ ಇಂಟರ್​ನ್ಯಾಷನಲ್ ಶಾಲಾ ಮೈದಾನದಲ್ಲಿ ಮಂಗಳವಾರ ನಡೆದ ಫೈನಲ್​ಗೇರಲು ನಿರ್ಣಾಯಕವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ತಂಡ 7 ವಿಕೆಟ್​ಗೆ 138 ರನ್​ಗಳಿಸಿತು. ಪ್ರತಿಯಾಗಿ ಕರ್ನಾಟಕ ತಂಡ 19.2 ಓವರ್​ಗಳಲ್ಲಿ 4 ವಿಕೆಟ್​ಗೆ 140 ರನ್​ಗಳಿಸಿ ಜಯದ ನಗೆ ಬೀರಿತು. ಇದರಿಂದ ಸೂಪರ್ ಲೀಗ್ ಹಂತದಲ್ಲಿ ಸತತ 4ನೇ ಹಾಗೂ ಟೂರ್ನಿಯಲ್ಲಿ ಸತತ 11ನೇ ಜಯ ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕನ್ನಡಿಗ ಗಣೇಶ್ ಸತೀಶ್ ಸಾರಥ್ಯದ ವಿದರ್ಭ ತಂಡ ವಿನಯ್ ಕುಮಾರ್ (27ಕ್ಕೆ 2) ಮಾರಕ ದಾಳಿಗೆ ಆಘಾತ ಕಂಡಿತು. ಕೇವಲ 46 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡ ವಿದರ್ಭ ಕನಿಷ್ಠ 100ರ ಗಡಿ ದಾಟುವುದು ಅನುಮಾನ ಎನಿಸಿತು. ಅಪೂರ್ವ್ ವಾಂಖೆಡೆ (56*) ಹಾಗೂ ಅಕ್ಷಯ್ ಕಾರ್ನೆವರ್ (33) ಜೋಡಿ 6ನೇ ವಿಕೆಟ್​ಗೆ 66 ರನ್ ಪೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿತು.

ವಿದರ್ಭ: 7 ವಿಕೆಟ್​ಗೆ 138 (ಅಥರ್ವ ತೈದೆ 28, ಅಪೂರ್ವ್ ವಾಂಖೆಡೆ 56*, ಕಾರ್ನೆವರ್ 33, ವಿನಯ್ 27ಕ್ಕೆ 2, ಜೆ.ಸುಚಿತ್ 17ಕ್ಕೆ 1). ಕರ್ನಾಟಕ: 19.2 ಓವರ್​ಗಳಲ್ಲಿ 4 ವಿಕೆಟ್​ಗೆ 140 (ರೋಹನ್ ಕದಂ 39, ಮಯಾಂಕ್ 13, ಕರುಣ್ 24, ಮನೀಷ್ ಪಾಂಡೆ 49*, ವಾಖರೆ 20ಕ್ಕೆ 1).

ಮನೀಷ್ ಪಾಂಡೆ ಆಸರೆ

ಎದುರಾಳಿ ವಿದರ್ಭ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ಬಳಿಕ ಚೇಸಿಂಗ್ ಆರಂಭಿಸಿದ ಕರ್ನಾಟಕ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಶರತ್ ಬಿಆರ್ (5) ವೈಫಲ್ಯ ಅನುಭವಿಸಿದರೂ ರೋಹನ್ ಕದಂ (39 ರನ್, 37 ಎಸೆತ, 7 ಬೌಂಡರಿ) ಬಿರುಸಿನ ಬ್ಯಾಟಿಂಗ್​ಗೆ ಮುಂದಾದರು. ಅನುಭವಿ ಆಟಗಾರ ಮಯಾಂಕ್ ಅಗರ್ವಾಲ್ (13) ಕೂಡ ದೊಡ್ಡ ಪೇರಿಸಲು ವಿಫಲರಾದರು. ಇದರಿಂದ 39 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡ ಕರ್ನಾಟಕ ಸಂಕಷ್ಟದ ಸುಳಿಗೆ ಸಿಲುಕಿತು. ರೋಹನ್ ಕದಂ ಹಾಗೂ ಕರುಣ್ ನಾಯರ್ (24) ಜೋಡಿ 3ನೇ ವಿಕೆಟ್​ಗೆ 29 ಪೇರಿಸಿ ಚೇತರಿಕೆ ನೀಡಲು ಯತ್ನಿಸಿದರೂ ಅಕ್ಷಯ್ ವಾಖರೆ ಅವಕಾಶ ನೀಡಲಿಲ್ಲ. ಇದರಿಂದ ಒತ್ತಡಕ್ಕೊಳಗಾದ ಕರ್ನಾಟಕ ಪಾಳಯದಲ್ಲಿ ಆತಂಕ ಮನೆಮಾಡಿತು. ನಾಯಕ ಮನೀಷ್ ಪಾಂಡೆ ಸಮಯೋಚಿತ ಬ್ಯಾಟಿಂಗ್ ಮೂಲಕ ತಂಡಕ್ಕೆ ಆಸರೆಯಾದರು. ಕರುಣ್ ನಾಯರ್ ಜತೆಗೂಡಿ 4ನೇ ವಿಕೆಟ್​ಗೆ 35 ರನ್ ಪೇರಿಸಿದರು. ಬಳಿಕ ಬಂದ ಜೆ.ಸುಚಿತ್ (3) ಜತೆಗೂಡಿ ಬಿರುಸಿನ ಬ್ಯಾಟಿಂಗ್ ನಡೆದ 5ನೇ ವಿಕೆಟ್​ಗೆ 37 ರನ್ ಪೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪ್ರಶಸ್ತಿ ಸುತ್ತಿಗೆ ಮಹಾರಾಷ್ಟ್ರ

ಸತತ ನಾಲ್ಕನೇ ಜಯ ದಾಖಲಿಸಿದ ಮಹಾರಾಷ್ಟ್ರ ಎ ಗುಂಪಿನಿಂದ ಪ್ರಶಸ್ತಿ ಸುತ್ತಿಗೇರಿತು. ಅಂತಿಮ ಸೂಪರ್ ಲೀಗ್ ಪಂದ್ಯದಲ್ಲಿ ಮಹಾರಾಷ್ಟ್ರ ತಂಡ 21 ರನ್​ಗಳಿಂದ ರೈಲ್ವೇಸ್ ತಂಡವನ್ನು ಮಣಿಸಿತು. ದಿನದ ಮತ್ತೊಂದು ಪಂದ್ಯದಲ್ಲಿ ಮುಂಬೈ ತಂಡ 46 ರನ್​ಗಳಿಂದ ಉತ್ತರ ಪ್ರದೇಶ ತಂಡವನ್ನು ಸೋಲಿಸಿತು. ಎ ಗುಂಪಿನ ಮತ್ತೊಂದು ಪಂದ್ಯದಲ್ಲಿ ಗುಜರಾತ್ ವಿರುದ್ಧ ಬಂಗಾಳ ಜಯಿಸಿತು.

ಮಹಿಳೆಯರಲ್ಲೂ ಟಿ20 ಫೈನಲ್​ಗೇರಿದೆ ಕರ್ನಾಟಕ!

ಮುಂಬೈ: ಮಹಿಳೆಯರ ದೇಶೀಯ ಟಿ20 ಲೀಗ್​ನಲ್ಲೂ ಕರ್ನಾಟಕ ತಂಡ ಫೈನಲ್​ಗೇರಿರುವುದು ವಿಶೇಷವೆನಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಕರ್ನಾಟಕ ತಂಡ ಪಂಜಾಬ್ ವಿರುದ್ಧ ಸೆಣಸಲಿದೆ. ಕೆ. ರಕ್ಷಿತಾ ಸಾರಥ್ಯದ ಕರ್ನಾಟಕ ತಂಡ ಸೂಪರ್ ಲೀಗ್ ಹಂತದಲ್ಲಿ ಆಡಿದ 4 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 1ರಲ್ಲಿ ಸೋತು 12 ಅಂಕದೊಂದಿಗೆ ಬಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು. ಇದಕ್ಕೆ ಮುನ್ನ ಲೀಗ್ ಹಂತದಲ್ಲಿ ರಾಜ್ಯ ಮಹಿಳಾ ತಂಡ ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು (1 ಪಂದ್ಯ ರದ್ದು) 22 ಅಂಕದೊಂದಿಗೆ ಅಗ್ರಸ್ಥಾನ ಪಡೆದಿತ್ತು.