ಮುಷ್ಕರಕ್ಕೆ ಕಲಬುರಗಿಯಲ್ಲಿ ಮಿಶ್ರ ಪ್ರತಿಕ್ರಿಯೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕೇಂದ್ರ ಸರ್ಕಾರದ ಜನವಿರೋಧಿ ನೀತಿಗೆ ಖಂಡನೆ ಜತೆಗೆ ರೈತರ, ಬ್ಯಾಂಕ್ ಇತರ ಕ್ಷೇತ್ರಗಳ ಕಾರ್ಮಿಕರ ಹಿತರಕ್ಷಣೆ ಮಾಡಬೇಕು. ಗುತ್ತಿಗೆ ಪದ್ಧತಿ ರದ್ದು, ಮೋಟಾರು ವಾಹನ ತಿದ್ದುಪಡಿ ಮಸೂದೆ ಕೈಬಿಡಬೇಕು, ಖಾಸಗೀಕರಣ ನಿಲ್ಲಿಸಬೇಕು, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ, ತೈಲ ಬೆಲೆ ಇಳಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಮುಷ್ಕರದ ಭಾಗವಾಗಿ ಮಂಗಳವಾರ ಮಂಗಳವಾರ ಕರೆ ನೀಡಿದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈಶಾನ್ಯ ಸಾರಿಗೆ ಸಂಸ್ಥೆ ಬಸ್ ಸಂಚಾರ ಇಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು. ಶಾಲಾ-ಕಾಲೇಜು, ಬ್ಯಾಂಕ್ಗಳಿಗೆ ರಜೆ ಘೋಷಿಸಲಾಗಿತ್ತು. ನಗರದಲ್ಲಿ ಬಸ್ ನಿಲ್ದಾಣ, ಎಸ್ವಿಪಿ ವೃತ್ತ, ಸೂಪರ್ ಮಾರ್ಕೆಟ್​ನಲ್ಲಿ ಅಂಗಡಿಗಳು ಬಂದ್ ಆಗಿದ್ದವು. ಉಳಿದೆಡೆ ಅಂಗಡಿ-ಮುಂಗಟ್ಟುಗಳು ತೆರೆದಿದ್ದರಿಂದ ವ್ಯಾಪಾರ ವಹಿವಾಟು ಸರಾಗವಾಗಿ ನಡೆಯಿತು. ಖಾಸಗಿ ವಾಹನ ಹಾಗೂ ಆಟೋ ಸಂಚಾರ ಎಂದಿಗಿಂತ ಕೊಂಚ ಕಮ್ಮಿ ಇತ್ತು. ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದರೂ ಕೆಲಸ ಕಾರ್ಯಗಳಿಗಾಗಿ ಬರುವ ಜನರು ವಿರಳವಾಗಿದ್ದರು. ಆಸ್ಪತ್ರೆ, ಮೆಡಿಕಲ್ ಮೊದಲಾದ ತುರ್ತು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಕೇಂದ್ರ ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ, ರೈತರ ಸಂಘಟನೆಗಳು, ಎಐಟಿಯುಸಿ, ಎಐಯುಟಿಯುಸಿ, ಸಿಪಿಐ, ಸಿಪಿಎಂ, ಬ್ಯಾಂಕ್ ನೌಕರರ ಒಕ್ಕೂಟ, ವಿಶ್ವವಿದ್ಯಾಲಯ ಗುತ್ತಿಗೆ ನೌಕರರ ಸಂಘ, ಬಿಸಿಯೂಟ ನೌಕರರು ಸಂಘ, ಅಂಗನವಾಡಿ ನೌಕರರ ಸಂಘ, ಅಂಚೆ ನೌಕರರ ಸಂಘ ಸೇರಿ 50ಕ್ಕೂ ಹೆಚ್ಚು ಸಂಘಟನೆಗಳು ನಗರದ ಬೇರೆ ಬೇರೆ ಕಡೆ ಗುಂಪು ಗುಂಪಾಗಿ ಪ್ರತಿಭಟನೆ ನಡೆಸಿದವು. ಮಧ್ಯಾಹ್ನ ಹೊತ್ತಿಗೆ ಎಲ್ಲರೂ ಡಿಸಿ ಕಚೇರಿ ಎದುರು ಜಮಾಯಿಸಿ ಬೃಹತ್ ರ್ಯಾಲಿ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು. ಈ ಮಾರ್ಗದಲ್ಲಿ ಸಂಜೆವರೆಗೂ ಪ್ರತಿಭಟನಾ ಸಭೆ ನಡೆಸಿದ್ದರಿಂದ ಸಂಚಾರಕ್ಕೆ ತೊಂದರೆಯಾಯಿತು.
ಎಸ್ಪಿ ಶಶಿಕುಮಾರ ನೇತೃತ್ವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಎಎಸ್ಪಿ ಅಕ್ಷಯ ಎಂ.ಹಾಕಿ, ಪ್ರೊಬೇಷನರಿ ಐಪಿಎಸ್ ಅಧಿಕಾರಿ ರಾಮರಾಜನ್ ಕೆ., ಡಿವೈಎಸ್ಪಿಗಳಾದ ಪಾಂಡುರಂಗಯ್ಯ, ಜೇಮ್ಸ್ ಮಿನೇಜಸ್, ಗೃಹರಕ್ಷಕ ದಳ ಕಮಾಂಡೆಂಟ್ ಸಂತೋಷ ಪಾಟೀಲ್ ಬಿಗಿ ಭದ್ರತೆ ಮಾಡಿದ್ದರು.

Leave a Reply

Your email address will not be published. Required fields are marked *