ಧರ್ಮ ಪ್ರಚಾರಕ ಕೊಲೆ 14 ಆರೋಪಿಗಳ ಬಂಧನ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಅಹ್ಮದ್ ಇಸಾ ಸ್ಥಾಪಿತ ಧರ್ಮ ಪಂಥದ ಬಗ್ಗೆ ಪ್ರಚಾರ ಮಾಡುತ್ತಿದ್ದ ಹಾಗೂ ಮುಹಮ್ಮದ್ ಪೈಗಂಬರ್ ಮತ್ತು ಕುರಾನ್ ಅವಹೇಳನ ಮಾಡುತ್ತಿದ್ದನೆನ್ನಲಾದ ವ್ಯಕ್ತಿಯನ್ನು ಕೊಲೆ ಮಾಡಿದ 14 ಆರೋಪಿಗಳನ್ನು ಕೃತ್ಯ ನಡೆದ 24 ಗಂಟೆಗಳಲ್ಲಿಯೇ ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.
ಧರ್ಮ ಪ್ರಚಾರಕ್ಕೆ ಬಂದಿದ್ದನೆನ್ನಲಾದ ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಜಲಾಲ್ ಎನ್ನುವವನನ್ನು ದುಷ್ಕರ್ಮಿಗಳು ಕತ್ತು ಸೀಳಿ ಕೊಲೆ ಮಾಡಿದ್ದು, ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎನ್. ಶಶಿಕುಮಾರ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲಬುರಗಿ ನಗರದ ವಿವಿಧ ಬಡಾವಣೆಗಳ ಸೈಯ್ಯದ್ ತಬರೇಜ್, ಮಹ್ಮದ್ ಉಮರ್ ಫಾರೂಕ್, ಸೈಯದ್ ಅಮಜಾದ್, ಮಹ್ಮದ್ ಅಜರ್ ಅಬ್ದುಲ್, ಅಬ್ದುಲ್ ರಹೀಮ್ ಖಾಶ್ಮಿ, ಸೈಯದ್ ಇಸ್ಮಾಯಿಲ್, ಸೈಯದ್ ಹುಸೇನ್, ಮೊಹ್ಮದ್ ಉಮರ್ ಸೋಹೆಲ್, ಗೌಸ್ ಮೈನುದ್ದೀನ್, ಸೈಯದ್ ಮುಕ್ರಂ, ಅಬ್ದುಲ್ ಅಜೀಜ್, ಚಾಂದಪಾಷಾ, ಸೈಯದ್ ರಹೀಮ್, ಮುದ್ದೇಪೀರ್ ಬಂಧಿತರಾಗಿದ್ದು ಇವರಿಂದ ಕೊಲೆಗೆ ಬಳಸಿದ್ದ ಎರಡು ಕಾರು, 5 ಬೈಕ್ ಹಾಗೂ ಮಾರಕಾಸ್ತ್ರ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಎಸ್ಪಿ ಹೇಳಿದರು.
ಕೊಲೆಯಾದ ಜಲಾಲ್ ಹಿಂದೆಯೂ ಕಲಬುರಗಿಗೆ ಆಗಮಿಸಿ ಮಹಮ್ಮದ ಪೈಗಂಬರ ಮತ್ತು ಕುರಾನ್ ವಿರುದ್ಧ ಪ್ರಚಾರ ಮಾಡಿದ ಸಂದರ್ಭದಲ್ಲಿ ಕೆಲವರು ಎಚ್ಚರಿಕೆ ನೀಡಿದ್ದರು. ಇವರ ಎಚ್ಚರಿಕೆಗೆ ಈತ ಮಣಿದಿರಲಿಲ್ಲ.
ಇದರಿಂದ ರೊಚ್ಚಿಗೆದ್ದಿದ್ದ ಕೆಲವರು ಈತನನ್ನು ಮತ್ತೇ ಕಲಬುರಗಿಗೆ ಕರೆಸಿದ್ದರು. ಭಾನುವಾರ ಈತ ಕಲಬುರಗಿಗೆ ಬಂದು ಎಂಎಸ್ಕೆ ಮಿಲ್ ಪ್ರದೇಶದ ಲಾಡ್ಜ್ನಲ್ಲಿ ಕೋಣೆ ಪಡೆದಿದ್ದ. ಆತ ಬಂದಿದ್ದನ್ನು ಖಚಿತಪಡಿಸಿಕೊಂಡು ಲಾಡ್ಜ್ನಿಂದ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಗುರುತು ಸಿಗದಂತೆ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.
ಕೊಲೆಯಾದವ ಧಾರ್ಮಿಕ ಮುಖಂಡ ಇರಬಹುದು ಎಂದು ಭಾವಿಸಿ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಡಿವೈಎಸ್ಪಿ ಎಸ್.ಎಸ್.ಹುಲ್ಲೂರ ನೇತೃತ್ವದಲ್ಲಿ ಸಿಪಿಐ ರಾಘವೇಂದ್ರ, ಪಿಎಸ್ಐಗಳಾದ ಚಂದ್ರಶೇಖರ ತಿಗಡಿ, ವಾತ್ಸಲ್ಯ, ಜಗದೇವಪ್ಪ ಪಾಳಾ, ಶಿವಶಂಕರ ಸಾಹು, ಎಎಸ್ಐಗಳಾದ ಪಂಡಿತ, ಬಸವರಾಜ, ಮಾಳಪ್ಪ, ವಂದನಾ ಹಾಗೂ ಸಿಬ್ಬಂದಿ ಹುಸೇನ್ಬಾಷಾ, ಮಿರ್ಜಾ ಅಹ್ಮದ್, ಕುಪೇಂದ್ರ, ದತ್ತಾತ್ರೇಯ, ಕಂಟೆಪ್ಪ, ಶಿವಶರಣಪ್ಪ, ಕೇಸುರಾಯ, ಅಂಬಾಜಿ, ರಾಜಕುಮಾರ, ಶರಣಗೌಡ, ಕುಶಣ್ಣ, ಟಿಪ್ಪು ಸುಲ್ತಾನ್, ಮಹಾದೇವ, ಭವಾನಿಸಿಂಗ್, ನಾಗೇಂದ್ರ, ಪ್ರಕಾಶ, ಶಾಂತಕುಮಾರ, ಚನ್ನಬಸಯ್ಯ, ಶ್ರೀನಾಥ, ಗಡ್ಡೆಪ್ಪ ಕಾರ್ಯಾಚರಣೆ ನಡೆಸಿದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಶಶಿಕುಮಾರ ವಿವರಿಸಿದರು.
ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಎಎಸ್ಪಿ ಅಕ್ಷಯ ಎಂ.ಹಾಕೆ, ತನಿಖಾ ತಂಡದವರು ಇದ್ದರು.