ಕೊಟ್ಟ ಸಾಲ ವಾಪಸ್​ ಕೇಳಿದ್ದೇ ಮಹಿಳೆಯ ಕೊಲೆಗೆ ಕಾರಣವಾಯ್ತು: ಬಂಧಿಸಲು ಬಂದ ಪೊಲೀಸರೆದುರೇ ಕತ್ತು ಕೊಯ್ದುಕೊಂಡ ಆರೋಪಿ

ಮಂಗಳೂರು: ಜಿಲ್ಲಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಅಮರ್​ ಆಳ್ವ ರಸ್ತೆ ನಿವಾಸಿ ಶ್ರೀಮತಿ ಶೆಟ್ಟಿ(35) ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ವೆಲೆನ್ಸಿಯಾ ಸೂಟರ್​ಪೇಟೆಯ ಜೋನಸ್​ ಜೂಲಿನ್ ಸ್ಯಾಮ್ಸನ್​ (36) ಹಾಗೂ ಆತನ ಪತ್ನಿ ವಿಕ್ಟೋರಿಯಾ ಮಥಾಯಿಸ್​ (46) ಬಂಧಿತರು.

ಮೃತ ಮಹಿಳೆ ಶ್ರೀಮತಿ ಶೆಟ್ಟಿ ಅವರಿಂದ ಜೋನಸ್​ ಸಾಲ ಪಡೆದಿದ್ದ. ಅದರಲ್ಲಿ ಸ್ವಲ್ಪ ಹಣ ತೀರಿಸಿದ್ದ. ಉಳಿದ ಹಣ ನೀಡುವಂತೆ ಶ್ರೀಮತಿ ಶೆಟ್ಟಿ ಹಲವು ಬಾರಿ ಕೇಳಿದ್ದರೂ ಆತ ನೀಡಿರಲಿಲ್ಲ. ಮೇ 11ರಂದು ಹಣ ಪಡೆಯುವ ಉದ್ದೇಶದಿಂದ ಶ್ರೀಮತಿ ಶೆಟ್ಟಿ ಜೋನಸ್​ ಮನೆಗೆ ತೆರಳಿದ್ದರು. ಆಗಲೇ ಅವರ ಮೇಲೆ ಮಾರಕಾಯುಧಗಳಿಂದ ಜೋನಸ್​ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ದೇಹವನ್ನು ತುಂಡು ಮಾಡಲಾಗಿದೆ. ಆ ತುಂಡು ಮಾಡಿದ ತಲೆಯ ಭಾಗವನ್ನು ಪೂರ್ವ ಠಾಣಾ ವ್ಯಾಪ್ತಿಯ ಕೆಪಿಟಿ ಬಳಿ ಹಾಗೂ ದೇಹದ ಭಾಗವನ್ನು ನಂದಿಗುಡ್ಡದ ಬಳಿ ಎಸೆಯಲಾಗಿತ್ತು.

ಹಣಕಾಸಿನ ವಿಚಾರಕ್ಕೆ ಶ್ರೀಮತಿ ಶೆಟ್ಟಿಯವರ ಹತ್ಯೆ ನಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಆರೋಪಿಯನ್ನು ಹಿಡಿಯಲು ಸೂಟರ್‌ಪೇಟೆಯ ಮನೆಗೆ ಪೊಲೀಸರು ಹೋದಾಗ ಜೋನಸ್​ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೊಳಗೊಂಡ 30 ಮಂದಿಯ ಮೂರು ವಿಶೇಷ ತಂಡವನ್ನು ರಚಿಸಲಾಗಿತ್ತು. ಜೋನಸ್​ ಅವರು 2010ರಲ ಜಾನ್​ ಮೇರಿ ಮೆಂಡೂನ್ಸಾ ಅವರ ಕೊಲೆ ಪ್ರಕರಣದ ಆರೋಪಿ ಎನ್ನಲಾಗಿದೆ.

Leave a Reply

Your email address will not be published. Required fields are marked *