ಪೊಲೀಸರ ಮುಂದೆಯೇ ವ್ಯಕ್ತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ!

ಹೈದರಾಬಾದ್: ಹಾಡುಹಗಲೇ ಪೊಲೀಸರ ಕಣ್ಣೆದುರೇ ಜನಗಂಗುಳಿಯ ನಡುವೆ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಹೈದರಾಬಾದ್​ನ ರಾಜೇಂದ್ರ ನಗರದಲ್ಲಿ ಇಬ್ಬರು ದುಷ್ಕರ್ಮಿಗಳು ವ್ಯಕ್ತಿಯನ್ನು ಅಟ್ಟಾಡಿಸಿಕೊಂಡು ಬಂದು ಆತ ಪ್ರಜ್ಞಾಹೀನನಾಗುವವರೆಗೂ ಕೊಚ್ಚಿರುವುದನ್ನು ದಾರಿಹೋಕರೊಬ್ಬರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಘಟನೆ ನಡೆಯುವ ವೇಳೆ ಪೊಲೀಸ್​ ಅಧಿಕಾರಿಯೊಬ್ಬರು ತಡೆಯಲು ಮುಂದಾಗಿರುವುದು ಮತ್ತು ಭಯದಿಂದ ಹಿಂದೆ ಸರಿದಿರುವುದೂ ವಿಡಿಯೋದಲ್ಲಿ ದಾಖಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ.

ಘಟನೆ ನಡೆದಾಗ ಮೂವರು ಪೊಲೀಸರು ಸ್ಥಳದಲ್ಲೇ ಇದ್ದರು. ಆದರೂ ಅವರಿಂದ ಕೃತ್ಯ ನಿಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ. ಆದರೆ ಇಬ್ಬರು ಪೊಲೀಸರು ಆತನನ್ನು ತಡೆಯಲು ಲಾಠಿ ತರಲು ತೆರಳಿದ್ದರು ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ದ್ವೇಷದ ಕೊಲೆ
ಕಳೆದ ವರ್ಷ ಡಿಸೆಂಬರ್​ನಲ್ಲಿ ನಡೆದ ಮಹೇಶ್​ ಗೌಡ್​ ಕೊಲೆಯ ಪ್ರಮುಖ ಆರೋಪಿಯಾದ ರಮೇಶ್ ಎಂಬಾತನನ್ನು, ಮಹೇಶ್​ ಗೌಡ್​ ತಂದೆ ಕೃಷ್ಣಾ ಗೌಡ್​ ಮತ್ತು ಚಿಕ್ಕಪ್ಪ ಲಕ್ಷ್ಮಣ್​ ಗೌಡ್​ ನೂರಾರು ಜನರ ಮುಂದೆಯೇ ಕೊಲೆ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)