ಬಿಎಚ್​ಇಎಲ್ ಉದ್ಯೋಗಿ ಕೊಲೆ

ಬೆಂಗಳೂರು: ಕೆಂಗೇರಿಯಲ್ಲಿ ಮನೆಗೆ ನುಗ್ಗಿದ ಅಪರಿಚಿತ ದುಷ್ಕರ್ವಿು ಬಿಎಚ್​ಇಎಲ್ ಮಹಿಳಾ ಉದ್ಯೋಗಿ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ.

ಕೆಂಗೇರಿ ಸನ್​ಸಿಟಿ ನಿವಾಸಿ ಎಸ್. ಅನುಷಾ(32) ಕೊಲೆಯಾದ ಮಹಿಳೆ. 3ನೇ ಮಹಡಿಯಲ್ಲಿ ಅನುಷಾ ಪತಿ ಸನತ್ ಜತೆ ವಾಸವಿದ್ದರೆ, ಅದೇ ಕಟ್ಟಡದ ಮೊದಲ ಮಹಡಿಯಲ್ಲಿ ಅನುಷಾ ಅಕ್ಕ ನೇತ್ರಾವತಿ ಪತಿ ಜತೆ ವಾಸಿಸುತ್ತಿದ್ದಾರೆ. ಶುಕ್ರವಾರ ರಾತ್ರಿ 9 ಗಂಟೆಗೆ ಅನುಷಾ ಒಬ್ಬರೇ ಮನೆಯಲ್ಲಿದ್ದರು. ಆ ಸಂದರ್ಭದಲ್ಲಿ ಇವರ ಮನೆಗೆ ನುಗ್ಗಿದ ದುಷ್ಕರ್ವಿು ಬಟ್ಟೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಅನುಷಾ ಪತಿ ಸನತ್ ರಾತ್ರಿ ಹಲವು ಬಾರಿ ಪತ್ನಿ ಮೊಬೈಲ್​ಗೆ ಕರೆ ಮಾಡಿ ದರೂ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡ ಸನತ್ ಅದೇ ಕಟ್ಟಡದ ಮೊದಲನೇ ಮಹಡಿಯಲ್ಲಿದ್ದ ನೇತ್ರಾವತಿಗೆ ಕರೆ ಮಾಡಿ ಹೇಳಿದ್ದ. ತಕ್ಷಣ ಆಕೆ 3ನೇ ಮಹಡಿಗೆ ತೆರಳಿ ನೋಡಿದಾಗ ಅನುಷಾ ಮನೆ ಬಾಗಿಲು ಹಾಕಲಾಗಿತ್ತು. ಸಂಬಂಧಿಕರನ್ನು ವಿಚಾರಿಸಿದರೂ ಅನುಷಾ ಪತ್ತೆಯಾಗಲಿಲ್ಲ. ನಂತರ ಕಿಟಕಿ ಮೂಲಕ ಇಣುಕಿ ನೋಡಿದಾಗ ಕೃತ್ಯ ಬೆಳಕಿಗೆ ಬಂದಿದ್ದು, ಕೂಡಲೆ ಸನತ್​ಗೆ ಈ ಬಗ್ಗೆ ಮಾಹಿತಿ ನೀಡಿದ್ದಾಳೆ. ಸನತ್ ಬಂದು ಬಾಗಿಲು ಒಡೆದು ನೋಡಿದಾಗ ಅನುಷಾ ಕೊಲೆಯಾಗಿರುವುದು ಕಂಡು ಬಂದಿದೆ. ನಂತರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

2 ವರ್ಷಗಳ ಹಿಂದೆ ವಿವಾಹ: ಅನುಷಾ ಮೈಸೂರು ರಸ್ತೆಯಲ್ಲಿರುವ ಬಿಎಚ್​ಇಎಲ್ ಸಂಸ್ಥೆಯಲ್ಲಿ ಸಿಸ್ಟಮ್ ಆಪರೇಟರ್ ಆಗಿದ್ದರು. ಡಿಪ್ಲೊಮಾ ವ್ಯಾಸಂಗ ಮಾಡಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸನತ್​ನನ್ನು ಪ್ರೀತಿಸಿ 2 ವರ್ಷಗಳ ಹಿಂದೆ ವಿವಾಹವಾಗಿದ್ದರು. ನಂತರ ದಂಪತಿ ಕೆಂಗೇರಿಯ ಸನ್​ಸಿಟಿಯ ಮನೆಯಲ್ಲಿ ವಾಸಿಸುತ್ತಿದ್ದರು. ಅನುಷಾ ಶುಕ್ರವಾರ ಎಂದಿನಂತೆ ಕೆಲಸಕ್ಕೆ ತೆರಳಿ ಮನೆಗೆ ಬಂದಿದ್ದರು. ಅದಾದ ನಂತರ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ತಿ ವಿಚಾರಕ್ಕೆ ಕಲಹ

ಅನುಷಾ ಬಿಡದಿಯಲ್ಲಿ ಆಸ್ತಿ ಹೊಂದಿದ್ದು, ಅದನ್ನು 13 ಲಕ್ಷ ರೂ.ಗೆ ಮಾರಾಟ ಮಾಡುವುದಾಗಿ ಹೇಳುತ್ತಿದ್ದರು. ಅನುಷಾ ಸಹೋದರಿ ನೇತ್ರಾವತಿಯ ಪತಿ ವಿವೇಕ್ ಪ್ರಕಾಶ್ ಈ ಆಸ್ತಿಯನ್ನು 8 ಲಕ್ಷ ರೂ.ಗೆ ತನಗೆ ನೀಡುವಂತೆ ಒತ್ತಾಯಿಸುತ್ತಿದ್ದ ಎಂದು ಹೇಳಲಾಗಿದೆ. ಆದರೆ, ಅನುಷಾ ನಿರಾಕರಿಸಿದ್ದು. ಕೆಲ ದಿನಗಳ ಹಿಂದೆ ಕೆಲ ವ್ಯಕ್ತಿಗಳನ್ನು ಸಂರ್ಪಸಿ ತನ್ನ ಆಸ್ತಿ ಮಾರಾಟ ಮಾಡುತ್ತಿದ್ದು, ಗಿರಾಕಿಗಳಿದ್ದರೆ ಮಾಹಿತಿ ನೀಡುವಂತೆ ಸೂಚಿಸಿದ್ದರು. ಇದು ವಿವೇಕ್ ಪ್ರಕಾಶ್ ಗಮನಕ್ಕೆ ಬಂದಿತ್ತು. ಈ ವಿಚಾರವಾಗಿ ಅನುಷಾ ಜತೆ ವಿವೇಕ್ ಪ್ರಕಾಶ್ ಜಗಳ ಮಾಡಿರುವುದಾಗಿ ವಿಚಾರಣೆ ವೇಳೆ ಸನತ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೆಂಗೇರಿ ಪೊಲೀಸರು ವಿವೇಕ್ ಪ್ರಕಾಶ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

One Reply to “ಬಿಎಚ್​ಇಎಲ್ ಉದ್ಯೋಗಿ ಕೊಲೆ”

  1. ದುರಾಸೆಗೆ ಕೊನೆಯೂ ಇಲ್ಲ, ಮೊದಲೂ ಇಲ್ಲ. ಸಾಯುವ ಮುಂಚೆ ಮಾನವರೂ ಎಂತೆಂತಹ ದುಷ್ಕೃತ್ಯ ಮಾಡುತ್ತಾರೋ ತಿಳಿಯದಾಗಿದೆ.

Leave a Reply

Your email address will not be published. Required fields are marked *