ಕೊಲೆ ಮಾಡಿ ಕಾರಿನಲ್ಲಿಟ್ಟು ಬೆಂಕಿ ಹಚ್ಚಿದ್ದ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

ಹಾವೇರಿ: ಮರಕ್ಕೆ ಡಿಕ್ಕಿಯಾಗಿ ಕಾರು ಹೊತ್ತುರಿದು ಚಾಲಕ ಮೃತಪಟ್ಟಿದ್ದಾನೆಂದು ಬಿಂಬಿಸಿದ್ದ ಹಂತಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ದಾವಣಗೆರೆ ನಗರದ ಈರುಳ್ಳಿ ವ್ಯಾಪಾರಿ ಮೃತ್ಯುಂಜಯ ಗುರುಣ್ಣ ಜ್ಯೋತಿಬಣ್ಣದ (30), ಆತನ ಸಹೋದರ ಬಸವೇಶ ಅಲಿಯಾಸ ಬಸುವ ಜ್ಯೋತಿಬಣ್ಣದ (26) ಬಂಧಿತ ಆರೋಪಿಗಳು. ಇವರ ಬಳಿ ಕೂಲಿ ಕೆಲಸ ಮಾಡುತ್ತಿದ್ದ ವೀರೇಶ ಜಿ. ಗುರುಶಾಂತಪ್ಪ (38) ಎಂಬಾತ ಕೊಲೆಯಾದವ.

ಮೃತ್ಯುಂಜಯನ ಬಳಿ ಕೂಲಿ ಮಾಡಿಕೊಂಡಿದ್ದ ವೀರೇಶ 5 ಸಾವಿರ ರೂ. ಸಾಲ ಪಡೆದುಕೊಂಡಿದ್ದ. ಸಾಲ ಪಡೆದ ನಂತರ 4 ತಿಂಗಳಿಂದ ಕೆಲಸಕ್ಕೆ ಬಂದಿರಲಿಲ್ಲ. ಆದ್ದರಿಂದ ಸಾಲ ವಾಪಸ್ ಕೊಡುವಂತೆ ವೀರೇಶನಿಗೆ ಮೃತ್ಯುಂಜಯ ತಾಕೀತು ಮಾಡಿದ್ದ. ಆದರೆ, ವೀರೇಶ ಸಾಲ ವಾಪಸ್ ನೀಡಿರಲಿಲ್ಲ. ಇದೇ ಕಾರಣಕ್ಕೆ ಏ.26ರಂದು ಇಬ್ಬರ ನಡುವೆ ಜಗಳವಾಗಿದ್ದು, ಮೃತ್ಯುಂಜಯನ ತಾಯಿಯನ್ನು ವೀರೇಶ ಅವಾಚ್ಯವಾಗಿ ನಿಂದಿಸಿದ್ದ. ಇದರಿಂದ ಕೋಪಗೊಂಡ ಮೃತ್ಯುಂಜಯ, ವೀರೇಶನ ಎದೆಗೆ ಜೋರಾಗಿ ಹೊಡೆದಾಗ ಸ್ಥಳದಲ್ಲಿಯೇ ಮೃತಪಟ್ಟಿದ್ದ.

ವೀರೇಶನ ಶವವನ್ನು ಮೃತ್ಯುಂಜಯ ಹಾಗೂ ಆತನ ಸಹೋದರ ಬಸವೇಶ ಕಾರಿನಲ್ಲಿ ಹಾಕಿಕೊಂಡು ಬಂದು ತಾಲೂಕಿನ ಇಟಗಿ-ತೆರದಹಳ್ಳಿ ರಸ್ತೆ ಮಧ್ಯೆ ಮರಕ್ಕೆ ಡಿಕ್ಕಿ ಹೊಡೆಸಿದ್ದಾರೆ. ನಂತರ ಕಾರಿನಲ್ಲಿದ್ದ ಥಿನ್ನರ್ ಅನ್ನು ಕಾರು ಹಾಗೂ ಶವದ ಮೇಲೆ ಸುರಿದು ಬೆಂಕಿ ಹಚ್ಚಿ ಸುಟ್ಟುಹಾಕಿ ಅಪಘಾತ ಎಂಬಂತೆ ಬಿಂಬಿಸುವ ನಾಟಕವಾಡಿದ್ದರು. ಅಂದು ಅಪಘಾತ ಸ್ಥಳಕ್ಕೆ ಬಂದಿದ್ದ ಮೃತ್ಯಂಜಯನ ಕುಟುಂಬದವರು ‘ಮೃತಪಟ್ಟವನು ನಮ್ಮ ಮಗನೇ’ ಎಂದು ಗೋಳಾಡಿ ಕಣೀರಿಟ್ಟಿದ್ದರು.

ಹೈಡ್ರಾಮಾ ಮಾಡಿದ ಸಹೋದರ…

ಕೊಲೆ ನಂತರ ಮೃತ್ಯುಂಜಯ ಮಾತ್ರ ಕೋಲ್ಕತಕ್ಕೆ ಪರಾರಿಯಾಗಿದ್ದ. ಆದರೆ, ಸಹೋದರ ಬಸವೇಶ ಎಂದಿನಂತೆ ಊರಿನಲ್ಲಿ ಓಡಾಡಿಕೊಂಡಿದ್ದ. ಕಾರು ಸುಟ್ಟ ಸ್ಥಳಕ್ಕೆ ಬಂದಾಗ ‘ಅಯ್ಯೋ ಅಣ್ಣನೇ, ಬೆಂಕಿಯಲ್ಲಿ ಸುಟ್ಟು ಹೋದೆಯಾ’ ಎನ್ನುತ್ತ ಗೋಳಾಡಿ ಕಣ್ಣೀರಿಡುವ ಮೂಲಕ ಪೊಲೀಸರ ಎದುರು ಹೈಡ್ರಾಮಾ ಮಾಡಿದ್ದ. ಪೊಲೀಸರು ಎಷ್ಟೇ ವಿಚಾರಣೆ ಮಾಡಿದರೂ ಬಸವೇಶ ಬಾಯಿ ಬಿಟ್ಟಿರಲಿಲ್ಲ.

ಡಿಎನ್​ಎ ಪರೀಕ್ಷೆಗೆ…

ಕೊಲೆ ನಡೆದು ಎರಡ್ಮೂರು ದಿನದ ಬಳಿಕ ತಮ್ಮ ಮಗ ಕಾಣೆಯಾಗಿದ್ದಾನೆ ಎಂದು ವೀರೇಶನ ತಾಯಿ ದಾವಣಗೆರೆ ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಇದೀಗ ಮೃತ್ಯುಂಜಯ, ತಾವೇ ಸ್ವತಃ ವೀರೇಶನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ವೀರೇಶನ ತಾಯಿಯ ರಕ್ತ ಮಾದರಿ ಹಾಗೂ ವೀರೇಶನ ಮೂಳೆಗಳನ್ನು ಡಿಎನ್​ಎ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಲ್ಕತದಲ್ಲಿ ಅಡಗಿದ್ದ ಭೂಪ…

ವೀರೇಶನನ್ನು ಕಾರಿನಲ್ಲಿಟ್ಟು ಬೆಂಕಿ ಹಚ್ಚಿದ ಮೃತ್ಯುಂಜಯ ಅಲ್ಲಿಂದ ಪರಾರಿಯಾಗಿ ಪಶ್ಚಿಮ ಬಂಗಾಳದ ಕೋಲ್ಕತದಲ್ಲಿ ಅಡಗಿದ್ದ. ಅಲ್ಲಿಂದ ಸಂಬಂಧಿಕರೊಂದಿಗೆ ಫೋನ್​ನಲ್ಲಿ ಮಾತ ನಾಡುತ್ತಿದ್ದ. ಆತನ ಸಂಬಂಧಿಕರ ದೂರವಾಣಿ ಸಂಖ್ಯೆಗ ಳನ್ನು ಸಂಗ್ರಹಿಸಿದ್ದ ಪೊಲೀಸರು ಕರೆಗಳ ಮೇಲೆ ನಿಗಾ ವಹಿಸಿದ್ದರು. ಕೊಲೆ ನಂತರ ಎರಡ್ಮೂರು ದಿನದ ಬಳಿಕ ಸಂಬಂಧಿಕರೊಬ್ಬರಿಗೆ ಕರೆ ಮಾಡಿದ್ದ. ಈ ಜಾಡು ಹಿಡಿದು ಎಸ್ಪಿ ಪರಶುರಾಮ ಮಾರ್ಗ ದರ್ಶನದಲ್ಲಿ ದಾಳಿ ನಡೆಸಿದ ಪೊಲೀಸರ ತಂಡ ಆರೋಪಿ ಯನ್ನು ಬಂಧಿಸಿದೆ.

ತನಿಖೆ ಕೈಗೊಂಡ ಹಲಗೇರಿ ಠಾಣೆ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.